ಬಿಸಿಸಿಐ ಉನ್ನತಾಧಿಕಾರಿಗಳ ಭೇಟಿಯಾದ ಮಿಥಾಲಿ, ಹರ್ಮನ್ ಪ್ರೀತ್

Update: 2018-11-27 05:57 GMT

ಹೊಸದಿಲ್ಲಿ, ನ.26: ಟ್ವೆಂಟಿ-20 ವಿಶ್ವಕಪ್‌ನ ಸೆಮಿ ಫೈನಲ್‌ನಲ್ಲಿ ಭಾರತ ಮಹಿಳಾ ತಂಡ ಇಂಗ್ಲೆಂಡ್ ವಿರುದ್ಧ ಸೋತ ಬಳಿಕ ಆಯ್ಕೆಯ ವಿಚಾರ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಈ ಹಿನ್ನೆಲೆಯಲ್ಲಿ ಮಹಿಳಾ ಟಿ-20 ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಹಾಗೂ ಏಕದಿನ ನಾಯಕಿ ಮಿಥಾಲಿ ರಾಜ್ ಅವರು ಸೋಮವಾರ ಬಿಸಿಸಿಐ ಉನ್ನತ ಅಧಿಕಾರಿಗಳನ್ನು ಭೇಟಿಯಾಗಿದ್ದಾರೆ. ಮಿಥಾಲಿ ಫಿಟ್ ಆಗಿದ್ದರೂ ಸೆಮಿ ಫೈನಲ್ ಪಂದ್ಯದಲ್ಲಿ ಅವರನ್ನು ಆಡುವ 11ರ ಬಳಗದಿಂದ ಹೊರಗಿಡಲಾಗಿತ್ತು. ಭಾರತ ರವಿವಾರ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 8 ವಿಕೆಟ್‌ಗಳಿಂದ ಸೋತಿದ್ದರೂ ಮಿಥಾಲಿ ಅವರನ್ನು ಕೈಬಿಟ್ಟಿರುವ ತನ್ನ ನಿರ್ಧಾರವನ್ನು ಕೌರ್ ಸಮರ್ಥಿಸಿಕೊಂಡಿದ್ದರು.

ಇದೀಗ ಇಬ್ಬರು ಹಿರಿಯ ಆಟಗಾರ್ತಿಯರು ಮ್ಯಾನೇಜರ್ ತೃಪ್ತಿ ಭಟ್ಟಾಚಾರ್ಯ ಜೊತೆಗೂಡಿ ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ ಹಾಗೂ ಜನರಲ್ ಮ್ಯಾನೇಜರ್ ಸಾಬಾ ಕರೀಮ್‌ರನ್ನು ಭೇಟಿಯಾಗಿದ್ದಾರೆ.

‘‘ಹೌದು ನಾವು ಮಿಥಾಲಿ ಹಾಗೂ ಹರ್ಮನ್, ಮ್ಯಾನೇಜರ್ ತೃಪ್ತಿಯವರನ್ನು ಭೇಟಿಯಾಗಿದ್ದು ನಿಜ. ಎಲ್ಲರೂ ಪ್ರತ್ಯೇಕವಾಗಿ ನಮ್ಮನ್ನು ಭೇಟಿಯಾಗಿದ್ದಾರೆ. ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ನಾವು ಎಲ್ಲವನ್ನೂ ಗಣನೆಗೆ ತೆಗೆದುಕೊಂಡಿದ್ದೇವೆ. ಆದರೆ, ಈ ಕುರಿತು ವಿವರ ನೀಡಲಾರೆ’’ ಎಂದು ಜೊಹ್ರಿ ಹೇಳಿದರು. ಜೊಹ್ರಿ ಹಾಗೂ ಕರೀಮ್ ಆಡಳಿತಾಧಿಕಾರಿ ಸಮಿತಿಗೆ(ಸಿಒಎ)ಸಮಗ್ರ ವಿವರ ನೀಡಲಿದ್ದು, ಸಿಒಎ ಎಲ್ಲವನ್ನೂ ಪರಿಶೀಲಿಸಲಿದೆ. ಅಗತ್ಯವಿದ್ದರೆ ಆಟಗಾರ್ತಿಯರೊಂದಿಗೆ ಮಾತನಾಡುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News