‘ಅಯೋಧ್ಯೆಯಲ್ಲಿ ಜನಸಾಗರ’: ವೈರಲ್ ಆದ ಫೋಟೋ, ವಿಡಿಯೋ ಹಿಂದಿನ ಸತ್ಯ ಇಲ್ಲಿದೆ

Update: 2018-11-27 12:59 GMT

ಹೊಸದಿಲ್ಲಿ, ನ.27: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವಂತೆಯೇ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೆಂಬ ಕೂಗು ಕೇಳಿ ಬರಲಾರಂಭಿಸಿದ್ದು, ರವಿವಾರ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಸಾಧು ಸಂತರ ಉಪಸ್ಥಿತಿಯಲ್ಲಿ `ಬೃಹತ್' ಧರ್ಮ ಸಭೆಯೂ ನಡೆದಿದೆ. ಈ ಸಂದರ್ಭ ತೆಗೆಯಲಾಗಿದ್ದೆಂದು ಹೇಳಲಾದ ಫೋಟೋ ಹಾಗೂ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೇಸರಿ ವಸ್ತ್ರ ಧರಿಸಿದ ಸಾವಿರಾರು ಮಂದಿ ಈ ಫೋಟೋ ಹಾಗೂ ವೀಡಿಯೋದಲ್ಲಿ ಕಾಣಿಸಿಕೊಂಡಿದ್ದಾರಲ್ಲದೆ, ಅವರೆಲ್ಲರೂ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೆಂಬ ಆಗ್ರಹದೊಂದಿಗೆ ಧರ್ಮಸಭಾದಲ್ಲಿ ಭಾಗವಹಿಸಿದ್ದರೆಂದು ಹೇಳಲಾಗಿದೆ.

‘ಇಂಡಿಯಾ ಟುಡೇ’ ವಾಹಿನಿಯ ಸತ್ಯಶೋಧನಾ ತಂಡ ಈ ಫೋಟೋ ಮತ್ತು ವೀಡಿಯೋವನ್ನು ಅಂತರ್ಜಾಲದಲ್ಲಿ ಪರಿಶೀಲಿಸಿದಾಗಿ ಇವುಗಳು ಅಯೋಧ್ಯೆಯಲ್ಲಿ ನಡೆದ ಧರ್ಮಸಭಾದ ಚಿತ್ರಗಳಲ್ಲ, ಬದಲಾಗಿ ಆಗಸ್ಟ್ 2017ರಲ್ಲಿ ಮರಾಠಾ ಕ್ರಾಂತಿ  ಮೋರ್ಚಾ ಸಂಘಟನೆಯು ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಆಗ್ರಹಿಸಿ ಮುಂಬೈಯಲ್ಲಿ ಪ್ರತಿಭಟನೆ ನಡೆಸಿದ ಚಿತ್ರಗಳಾಗಿತ್ತು.

ಈ ಫೋಟೋ ರಿವರ್ಸ್ ಸರ್ಚ್ ಮಾಡಿದಾಗಲೂ ಮರಾಠ ಪ್ರತಿಭಟನೆಯ ವರದಿಗಳು ದೊರಕಿದ್ದವು. ಮಿಡ್‍ಡೇ.ಕಾಂ ಹಾಗೂ ಅಮರ್‍ಉಜಾಲ.ಕಾಂ ಈ ಚಿತ್ರಗಳನ್ನು ಮರಾಠಾ ಕ್ರಾಂತಿ ಪ್ರತಿಭಟನೆಯ ವರದಿಯೊಂದಿಗೆ ಪ್ರಕಟಿಸಿದ್ದವು. ಇವು ಅಯೋಧ್ಯೆಯ ಚಿತ್ರಗಳಲ್ಲ, ಬದಲಾಗಿ ಮುಂಬೈ ಚಿತ್ರಗಳೆಂದು ಸ್ಪಷ್ಟ.

ವೈರಲ್ ಆಗಿರುವ ವೀಡಿಯೋದಲ್ಲಿ ಕೇಸರಿ ಧ್ವಜಗಳನ್ನು ಹಿಡಿದ ದೊಡ್ಡ ಸಂಖ್ಯೆಯ ಜನರು ಮಸೀದಿ ಸಮೀಪ ಧ್ವಜ  ಬೀಸುತ್ತಿರುವುದು  ಕಾಣಿಸುತ್ತದೆ. ಇವುಗಳು ಅಯೋಧ್ಯೆಯ ದೃಶ್ಯ ಎಂದು ಕೆಲವರು ಹೇಳಿಕೊಂಡರೂ ಪರಿಶೀಲಿಸಿದಾಗ  ಕರ್ನಾಟಕದ ಕಲಬುರ್ಗಿಯಲ್ಲಿ ಈ ವರ್ಷದ ಮಾರ್ಚ್ ತಿಂಗಳಲ್ಲಿ ರಾಮ ನವಮಿ ಶೋಭಾ ಯಾತ್ರೆಯ ಸಂದರ್ಭ ತೆಗೆಯಲಾದ ವೀಡಿಯೋ ಇದಾಗಿತ್ತೆಂದು ತಿಳಿದು ಬಂದಿದೆ. ಚಿತ್ರದಲ್ಲಿ ಕಾಣಿಸುವ ಮಸೀದಿ ಕಲಬುರ್ಗಿಯ ಖಾದ್ರಿ ಚೌಕ್ ಪ್ರದೇಶದಲ್ಲಿರುವ ಮಸೀದಿಯದ್ದಾಗಿದೆ.

ಇದಿಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿಯೊಂದಿಗೆ ವೈರಲ್ ಆಗಿರುವ ಈ ಫೋಟೊಗಳನ್ನು ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿ ‘ಕ್ಯಾಪ್ಶನ್ ನಾಟ್ ನೀಡೆಡ್’ ಎಂದು ಬರೆದಿದ್ದಾರೆ. ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಟ್ವಿಟರ್ ಬಳಕೆದಾರರು, “ನೀವು ಟ್ವೀಟ್ ಮಾಡಿರುವ ಫೋಟೊಗಳಿಗೂ ಅಯೋಧ್ಯೆಗೂ ಸಂಬಂಧವಿಲ್ಲ”, “ಫೇಕ್ ನ್ಯೂಸ್ ಮಿನಿಸ್ಟರ್”, “ಕ್ಯಾಪ್ಶನ್ ಅಗತ್ಯವಿದೆ..! ಮರಾಠಾ ಕ್ರಾಂತಿ ಮೋರ್ಛಾ” “ಸುಳ್ಳುಗಾರನ ಮತ್ತೊಂದು ಮಹಾ ಸುಳ್ಳು” ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News