ಮರಾಠಾ ಮೀಸಲಾತಿ:ಮಹಾರಾಷ್ಟ್ರ ವಿಧಾನಸಭೆ ಎರಡು ಬಾರಿ ಮುಂದೂಡಿಕೆ

Update: 2018-11-27 14:17 GMT

ಮುಂಬೈ, ನ.27: ಮರಾಠಾ ಸಮುದಾಯಕ್ಕೆ ಮೀಸಲಾತಿಯನ್ನು ಶಿಫಾರಸು ಮಾಡಿರುವ ರಾಜ್ಯ ಹಿಂದುಳಿದ ಜಾತಿಗಳ ಆಯೋಗದ ವರದಿಯನ್ನು ಸದನದಲ್ಲಿ ಮಂಡಿಸುವ ವಿವಾದದಲ್ಲಿ ಮಹಾರಾಷ್ಟ್ರ ವಿಧಾನಭೆಯು ಮಂಗಳವಾರ ಎರಡು ಬಾರಿ ಮುಂದೂಡಲ್ಪಟ್ಟಿತು. ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸುವಂತೆ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಎನ್‌ಸಿಪಿ ಕಳೆದೊಂದು ವಾರದಿಂದ ಆಗ್ರಹಿಸುತ್ತಿವೆ.

ಬೆಳಿಗ್ಗೆ ಸದನವು ಸಮಾವೇಶಗೊಂಡ ಬಳಿಕ ಸ್ಪೀಕರ್ ಹರಿಭಾವು ಬಾಗ್ಡೆ ಅವರು ಪ್ರಶ್ನೆವೇಳೆಯ ಕಲಾಪ ಆರಂಭಕ್ಕೆ ಸೂಚನೆ ನೀಡುತ್ತಿದ್ದಂತೆ,ವಿಧಾನಸಭಾ ಆವರಣದಲ್ಲಿ ವಿವಿಧ ಪಕ್ಷಗಳ ನಾಯಕರ ಸಭೆಯು ನಡೆಯುತ್ತಿರುವುದರಿಂದ ಸದನವನ್ನು 10 ನಿಮಿಷ ಮುಂದೂಡುವಂತೆ ಕಾಂಗ್ರೆಸ್‌ನ ಉಪನಾಯಕ ವಿಜಯ ವಡೆಟಿವಾರ್ ಅವರು ಕೋರಿಕೊಂಡಿದ್ದರು. ಇದನ್ನು ಬಾಗ್ಡೆ ಪುರಸ್ಕರಿಸಿದ್ದರು.

ಸದನವು ಮರುಸಮಾವೇಶಗೊಂಡಾಗ ವಡೆಟಿವಾರ್ ಅವರು ಸದನದಿಂದ ಹೊರಗೆ ತೆರಳುವಂತೆ ಎಲ್ಲ ಪ್ರತಿಪಕ್ಷಗಳ ಸದಸ್ಯರಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಪೀಠದಲ್ಲಿದ್ದ ಸುಭಾಷ್ ಸಬ್ನೆ ಅವರು ಸದನವನ್ನು ಅಪರಾಹ್ನ 12:15ರವರೆಗೆ ಮುಂದೂಡಿದರು.

ಇದಕ್ಕೂ ಮುನ್ನ ಸದನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಪಕ್ಷ ನಾಯಕರೋರ್ವರು,ವರದಿಯನ್ನು ಸದನದಲ್ಲಿ ಮಂಡಿಸಲು ಸರಕಾರವು ನಿರಾಕರಿಸಿದೆ. ಮೀಸಲಾತಿ ಮಸೂದೆಯನ್ನು ಉಭಯ ಸದನಗಳಲ್ಲಿ ಮಂಡಿಸಲಾಗುವುದು ಮತ್ತು ಅದನ್ನು ಯಾವುದೇ ಚರ್ಚೆಯಿಲ್ಲದೆ ಅಂಗೀಕರಿಸವೇಕು ಎಂದು ನಮಗೆ ತಿಳಿಸಲಾಗಿದೆ ಎಂದರು.

ಚಳಿಗಾಲದ ಅಧಿವೇಶನದ ಅಂತಿಮ ದಿನವಾದ ಶುಕ್ರವಾರ ಸರಕಾರವು ಮರಾಠಾ ಮೀಸಲಾತಿ ಮಸೂದೆಯನ್ನು ಸದನದಲ್ಲಿ ಮಂಡಿಸಲಿದೆ ಎಂದು ಕಂದಾಯ ಸಚಿವ ಚಂದ್ರಕಾಂತ ಪಾಟೀಲ್ ಅವರು ಸೋಮವಾರ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News