ಅತ್ಯಾಧುನಿಕ ರೋಗ ಪತ್ತೆ ಯಂತ್ರ ಬಸ್‌ನಿಂದ ಮನೆಮನೆಗೆ ಕ್ಯಾನ್ಸರ್ ತಪಾಸಣೆ, ಜಾಗೃತಿ ಯೋಜನೆ ಆರಂಭ
ಬೆಂಗಳೂರು, ನ.27: ನಗರದ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ವತಿಯಿಂದ ಮನೆ ಮನೆಗೆ ತೆರಳಿ ಕ್ಯಾನ್ಸರ್ ತಪಾಸಣೆ ನಡೆಸಿ ಜಾಗೃತಿ ಮೂಡಿಸುವ ಯೋಜನೆಯನ್ನು ಆರಂಭಿಸಿದೆ.
ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್(ಬಿಇಎಲ್) ಕಿದ್ವಾಯಿ ಆಸ್ಪತ್ರೆಗೆ 2.50 ಕೋಟಿ ವೆಚ್ಚದ ಅತ್ಯಾಧುನಿಕ ರೋಗ ಪತ್ತೆ ಯಂತ್ರ ಹೊಂದಿರುವ ಬಸ್ ಕೊಡುಗೆಯಾಗಿ ನೀಡಿದೆ. ಈ ಬಸ್ ಮನೆಮನೆಗೆ ತೆರಳಿ ಅರಿವು ಮೂಡಿಸುತ್ತದೆ.
ಕ್ಯಾನ್ಸರ್ ಲಕ್ಷಣ ಹಾಗೂ ಅದಕ್ಕಿರುವ ಸುಧಾರಿತ ಚಿಕಿತ್ಸೆ ಕುರಿತು ಜನರಿಗೆ ಅರಿವು ಇಲ್ಲ. ಹೀಗಾಗಿ ರೋಗ ಕೊನೆಯ ಹಂತದಲ್ಲಿ ಇರುವಾಗ ಜನ ಆಸ್ಪತ್ರೆಗೆ ಹೋಗುತ್ತಾರೆ. ಹೀಗಾಗಿ ಮೊದಲೇ ಪತ್ತೆಹಚ್ಚಿ ಚಿಕಿತ್ಸೆ ಪಡೆಯುವಂತೆ ಹೇಳಲು ವೈದ್ಯರೇ ಮನೆಮನೆಗೆ ತೆರಳಲಿದ್ದಾರೆ. ಅದಕ್ಕಾಗಿ ಬಸ್ ಸಿದ್ಧವಾಗಿದೆ.
ವಾಹನದ ವಿಶೇಷತೆ: ಈ ವಾಹನವು ಕ್ಯಾನ್ಸರ್ ಪತ್ತೆ ಹಚ್ಚಲು ಪೂರಕವಾದ ವೈದ್ಯ ಪರಿಕರಗಳನ್ನು ಹೊಂದಿದೆ. ಅಲ್ಟ್ರಾಸೌಂಡ್, ಸೂಜಿ ಪರೀಕ್ಷೆಗೆ ಫೈನ್ ನೀಡಲ್ ಆ್ಯಸ್ಪಿರೇಷನ್, ಇಸಿಜಿ, ಎಕ್ಸ್‌ರೇ, ಪೆಥಾಲಾಜಿಕ್ ಡಿಜಿಟಲ್ ಲ್ಯಾಬೊರೇಟರಿ, ಡಾಪ್ಲರ್ ಮತ್ತಿತರ ಉಪಕರಣಗಳನ್ನು ಹೊಂದಿದೆ ಎಂದು ಸಂಸ್ಥೆ ನಿರ್ದೇಶಕ ಡಾ.ಸಿ. ರಾಮಚಂದ್ರ ಹೇಳಿದ್ದಾರೆ.
ರಾಜ್ಯದ ಎಲ್ಲ ಕಡೆಗಳಿಂದ ಕ್ಯಾನ್ಸರ್ ಚಿಕಿತ್ಸೆಯ ಸೇವೆಯನ್ನು ಪಡೆದುಕೊಳ್ಳಲು ಬೇಡಿಕೆ ಬಂದಿದೆ. ಹೀಗಾಗಿ, ಅದಕ್ಕೆ ಹೆಚ್ಚು ಸಿಬ್ಬಂದಿ ಬೇಕಾಗಿದ್ದು, ಸಿಎಸ್‌ಆರ್ ಅಡಿಯಲ್ಲಿ ಮಾನವ ಸಂಪನ್ಮೂಲ ಒದಗಿಸುವಂತೆ ಟಾಟಾ ಟ್ರಸ್ಟ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
-ಡಾ. ಸಿ.ರಾಮಚಂದ್ರ, ನಿರ್ದೇಶಕರು, ಕಿದ್ವಾಯಿ ಕ್ಯಾನ್ಸರ್ ಸಂಸ್ಥೆ