ಶೀಘ್ರದಲ್ಲಿಯೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಕಾಗದ ರಹಿತ ಸೇವೆ

Update: 2018-11-27 16:50 GMT

ಬೆಂಗಳೂರು, ನ.27: ಕಾಗದ ರಹಿತ ಸೇವೆ ನೀಡುವ ಉದ್ದೇಶದಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಶೀಘ್ರದಲ್ಲಿಯೇ ಇ-ಕಚೇರಿಯಾಗಿ ಬದಲಾವಣೆಯಾಗಲಿದೆ.

ಪ್ರಾಧಿಕಾರದ ಕೇಂದ್ರ ಕಚೇರಿಯ ಎಲ್ಲ ವಿಭಾಗಗಳು ಹೊಸ ಕಾರ್ಯವೈಖರಿಗೆ ಬದಲಾಗಲಿದೆ. ಇದರಿಂದ ಆ ಎಲ್ಲಾ ಕಚೇರಿಗಳಲ್ಲೂ ಕಡತ ವಿಲೇವಾರಿ ಕಾಗದ ರಹಿತವಾಗಲಿವೆ. ಅಲ್ಲದೆ, ಸಮಯವೂ ಉಳಿತಾಯವಾಗುತ್ತದೆ.

ಕಾಗದ ರಹಿತ ಸೇವೆ ಸರಕಾರದ ಕೆಲ ಇಲಾಖೆಗಳಲ್ಲಿ ಅಷ್ಟೇ ಇದೆ. ಈ ನಿಟ್ಟಿನಲ್ಲಿ ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿಯ ಎಲ್ಲ ಸಂಸ್ಥೆಗಳಿಗೂ ಯೋಜನೆ ವಿಸ್ತರಣೆಗೊಳ್ಳುತ್ತಿದ್ದು, ಬಿಡಿಎಯಲ್ಲಿಯೂ ಈ ವರ್ಷಾಂತ್ಯದಲ್ಲಿ ಹೊಸ ವ್ಯವಸ್ಥೆ ಅಳವಡಿಕೆ ನಡೆಯಲಿದ್ದು, ಇದರ ಜಾರಿಗೆ ಪ್ರಾಧಿಕಾರ ಭರದ ಸಿದ್ಧತೆ ನಡೆಸಿದೆ.

250 ಸಿಬ್ಬಂದಿಗೆ ತರಬೇತಿ: ಪ್ರಾಧಿಕಾರದಲ್ಲಿ ಕಡತಗಳ ವಿಲೇವಾರಿ ತುಂಬಾ ನಿಧಾನವಾಗುತ್ತಿದೆ ಎಂಬ ಆರೋಪವಿದೆ. ಅಲ್ಲದೆ, ತಿಂಗಳುಗಟ್ಟಲೇ ಕಡತಗಳು ವಿಲೇವಾರಿಯಾಗದೇ ಸಾರ್ವಜನಿಕರು ಕಚೇರಿಗೆ ಅಲೆದಾಡಬೇಕಾದ ಸ್ಥಿತಿ ಇದೆ ಎಂದು ಜನರು ಆರೋಪಿಸಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಇ ವ್ಯವಸ್ಥೆ ಜಾರಿಗೆ ಮುಂದಾಗಿದ್ದು, ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗುತ್ತಿದೆ.

ಪ್ರಾಧಿಕಾರದ 250ಕ್ಕೂ ಅಧಿಕ ಸಿಬ್ಬಂದಿಗಳಿಗೆ ಡಿ.3ರೊಳಗೆ ತರಬೇತಿ ನೀಡುವ ಗಡುವು ಇದೆ. ಇ-ಆಡಳಿತ ಇಲಾಖೆಯ ತಂತ್ರಜ್ಞರು ಹಾಗೂ ತರಬೇತಿದಾರರು ಕಡತ ವಿಲೇವಾರಿ ಕುರಿತು ಮಾಹಿತಿ ನೀಡುತ್ತಿದ್ದಾರೆ. ಕಡತ ಸೃಷ್ಟಿ ಬಳಿಕ ಮೇಲ್ವಿಚಾರಕರು, ಅಧೀಕ್ಷಕರು, ವಿಭಾಗದ ಮುಖ್ಯಸ್ಥರು ಹಾಗೂ ಸಂಸ್ಥೆಯ ಕಾರ್ಯದರ್ಶಿ/ಆಯುಕ್ತರವರೆಗೂ ಆನ್‌ಲೈನ್ ಮೂಲಕವೇ ನಡೆಯಲಿದೆ. ಒಂದು ವಿಭಾಗದಿಂದ ಇನ್ನೊಂದು ವಿಭಾಗ್ಕಕೆ ಕಡತ ವಿಲೇಗೆ ಇಂತಿಷ್ಟು ದಿನ ನಿಗದಿ ಮಾಡಲಾಗುತ್ತದೆ.

ಮಧ್ಯವರ್ತಿಗಳಿಗೆ ಬ್ರೇಕ್: ಬಿಡಿಎನಲ್ಲಿ ಕಡತ ವಿಲೇವಾರಿಯಲ್ಲಿ ಮಧ್ಯವರ್ತಿಗಳ ಹಸ್ತಕ್ಷೇಪ ನಡೆಯುತ್ತದೆ. ಹೀಗಾಗಿ, ಇ-ವ್ಯವಸ್ಥೆಯಿಂದ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News