×
Ad

ಜಾಫರ್ ಶರೀಫ್ ನಿವಾಸಕ್ಕೆ ಪ್ರಣವ್ ಮುಖರ್ಜಿ ಭೇಟಿ

Update: 2018-11-28 19:59 IST

ಬೆಂಗಳೂರು, ನ.28: ರವಿವಾರ ನಿಧನರಾದ ಕೇಂದ್ರದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಜಾಫರ್ ಶರೀಫ್(85) ನಿವಾಸಕ್ಕೆ ಬುಧವಾರ ಮಧ್ಯಾಹ್ನ ಭೇಟಿ ನೀಡಿ, ಅವರ ಕುಟುಂಬ ಸದಸ್ಯರಿಗೆ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಣವ್ ಮುಖರ್ಜಿ, ಜಾಫರ್ ಶರೀಫ್ ಅಗಲಿಕೆಯಿಂದಾಗಿ ನಾನು ಒಬ್ಬ ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ಸುಮಾರು 40 ವರ್ಷಗಳ ಸುದೀರ್ಘ ಒಡನಾಟವನ್ನು ನಾವು ಹೊಂದಿದ್ದೆವು ಎಂದರು.

ರಾಷ್ಟ್ರ ರಾಜಕಾರಣದಲ್ಲಿ ತಮ್ಮದೆ ಆದ ಛಾಪನ್ನು ಜಾಫರ್ ಶರೀಫ್ ಹೊಂದಿದ್ದರು. ಮೌಲಾನ ಅಬುಲ್ ಕಲಾಂ ಆಝಾದ್ ಅವರ ‘ಇಂಡಿಯಾ ವಿನ್ಸ್ ಫ್ರೀಡಂ’ ಆಂಗ್ಲ ಕೃತಿಯ ಉರ್ದು ಭಾಷಾಂತರ ಆವೃತ್ತಿಯನ್ನು ಇಂದು ಬಿಡುಗಡೆ ಮಾಡುವಂತೆ ನನಗೆ ಆಹ್ವಾನ ನೀಡಿದ್ದರು ಎಂದು ಪ್ರಣವ್ ಮುಖರ್ಜಿ ಸ್ಮರಿಸಿದರು. ಆದರೆ, ದುರಾದೃಷ್ಟವಶಾತ್ ಪುಸ್ತಕ ಲೋಕಾರ್ಪಣೆಗೊಳಿಸುವ ಬದಲು, ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳುವಂತಾಗಿದೆ. ಜನಸಾಮಾನದಲ್ಲಿ ಜಾಫರ್ ಶರೀಫ್ ನೆನಪು ಸದಾ ಸ್ಮರಣೀಯವಾಗಿರುತ್ತದೆ ಎಂದು ಪ್ರಣವ್ ಮುಖರ್ಜಿ ಹೇಳಿದರು.

ಜಾಫರ್ ಶರೀಫ್ ಅವರ ಅಳಿಯ ಹಾಗೂ ಮಾಜಿ ಶಾಸಕ ಸಯ್ಯದ್ ಯಾಸೀನ್ ಮಾತನಾಡಿ, ಜಾಫರ್ ಶರೀಫ್ ಅವರು ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲಿ ಪ್ರಣವ್ ಮುಖರ್ಜಿ ಕೇಂದ್ರ ಹಣಕಾಸು ಸಚಿವರಾಗಿದ್ದರು. ರೈಲ್ವೆ ಇಲಾಖೆಯಲ್ಲಿ ಜಾರಿಗೆ ತಂದಂತಹ ಸುಧಾರಣಾ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಪ್ರಣವ್ ಮುಖರ್ಜಿ ಸದಾ ಬೆಂಬಲವಾಗಿ ನಿಲ್ಲುತ್ತಿದ್ದರು ಎಂದರು.

ಬೆಂಗಳೂರಿನಲ್ಲಿ ಇವತ್ತು ಪುಸ್ತಕದ ಲೋಕಾರ್ಪಣೆಯಾಗಬೇಕಿತ್ತು. ಆದರೆ, ಜಾಫರ್ ಶರೀಫ್ ಅಗಲಿಕೆಯಿಂದಾಗಿ ಕಾರ್ಯಕ್ರಮ ರದ್ದಾಯಿತು. ದಿಲ್ಲಿ ಅಥವಾ ಬೆಂಗಳೂರು ಎಲ್ಲಿಯಾದರೂ ಮತ್ತೆ ಕಾರ್ಯಕ್ರಮ ಆಯೋಜಿಸಿ, ನಾನೇ ಬಂದು ಪುಸ್ತಕ ಬಿಡುಗಡೆ ಮಾಡುತ್ತೇನೆ ಎಂದು ಪ್ರಣವ್ ಮುಖರ್ಜಿ ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಜಾಫರ್ ಶರೀಫ್ ಅವರ ಮೊಮ್ಮಕ್ಕಳಾದ ಅಬ್ದುಲ್ ವಹಾಬ್ ಶರೀಫ್, ಅಬ್ದುಲ್ ರಹ್ಮಾನ್ ಶರೀಫ್, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಝಮೀರ್ ಅಹ್ಮದ್‌ ಖಾನ್, ಕೇಂದ್ರದ ಮಾಜಿ ಸಚಿವ ಡಾ.ಕೆ.ರಹ್ಮಾನ್‌ ಖಾನ್, ವಿಧಾನಪರಿಷತ್ ಸದಸ್ಯರಾದ ನಸೀರ್‌ ಅಹ್ಮದ್, ರಿಝ್ವಾನ್ ಅರ್ಶದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News