ಅಗಲಿದ ರಾಜಕೀಯ ನಾಯಕರಿಗೆ ಬಿಬಿಎಂಪಿ ನಮನ

Update: 2018-11-28 14:40 GMT

ಬೆಂಗಳೂರು, ನ.28: ಇತ್ತೀಚೆಗೆ ನಿಧನರಾದ ಕೇಂದ್ರದ ಮಾಜಿ ಸಚಿವರಾದ ಸಿ.ಕೆ.ಜಾಫರ್ ಶರೀಫ್, ಅಂಬರೀಷ್ ಹಾಗೂ ಅನಂತ್‌ಕುಮಾರ್ ಅವರಿಗೆ ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿ, ಎರಡು ನಿಮಿಷ ಮೌನ ಆಚರಿಸಿ ನಂತರ ನ.29ಕ್ಕೆ ಸಭೆ ಮುಂದೂಡಿದರು.

ಬುಧವಾರ ಸಭೆಯಲ್ಲಿ ಮಾತನಾಡಿದ ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್, ಅಂಬರೀಷ್ ಅವರು ಆರೂವರೆ ಕೋಟಿ ಕನ್ನಡಿಗರ ಹೃದಯ ಸಾಮ್ರಾಜ್ಯ ಕಟ್ಟಿದ್ದರು. ಕೇಂದ್ರ ಮತ್ತು ರಾಜ್ಯ ಸಚಿವರಾಗಿ ತಮ್ಮ ಕೈಲಾದ ಸೇವೆ ಸಲ್ಲಿಸಿ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದರು.

ಕಾಂಗ್ರೆಸ್ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಶರೀಫ್ ಅವರು ತಮ್ಮ 10ನೆ ವಯಸ್ಸಿಗೆ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ ರಾಜಕಾರಣದಲ್ಲಿ ಬಹು ಎತ್ತರದ ಸ್ಥಾನ ಗಳಿಸಿದ್ದರು. ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಸಮಕಾಲೀನ ರಾಜಕಾರಣಿಯಾಗಿದ್ದರು. ರೈಲ್ವೆ ಸಚಿವರಾಗಿ ಇಲಾಖೆಯಲ್ಲಿ ಕನ್ನಡಿಗರಿಗೆ ಉದ್ಯೋಗ ಕಲ್ಪಿಸಿಕೊಟ್ಟಿದ್ದರು ಎಂದು ಹೇಳಿದರು.

ಮಹನೀಯರ ಹೆಸರನ್ನು ಶಾಶ್ವತವಾಗಿರುವಂತೆ ಮಾಡುವುದು ನಮ್ಮ ಕರ್ತವ್ಯ. ಕಟ್ಟಡಗಳು, ರಸ್ತೆಗಳು ಅಥವಾ ಅವರು ವಾಸ ಮಾಡುತ್ತಿದ್ದ ಸ್ಥಳಗಳಿಗೆ ಅವರ ಹೆಸರು ನಾಮಕರಣ ಮಾಡಲು ಕ್ರಮ ತೆಗೆದುಕೊಳ್ಳಬೇಕೆಂದು ಕೋರಿದರು.

ಸಭೆಯಲ್ಲಿ ಮಾಜಿ ಮೇಯರ್‌ಗಳಾದ ಕಟ್ಟೆ ಸತ್ಯನಾರಾಯಣ, ಮಂಜುನಾಥ್ ರೆಡ್ಡಿ, ಶಾಂತಕುಮಾರಿ, ಹಿರಿಯ ಸದಸ್ಯ ಗುಣಶೇಖರ್, ಉಮೇಶ್ ಶೆಟ್ಟಿ, ನೇತ್ರಾ ನಾರಾಯಣ್, ಮತ್ತಿತರರು ಅಗಲಿದ ನಾಯಕರ ಗುಣಗಾನ ಮಾಡಿದರು. ಮೇಯರ್ ಗಂಗಾಂಬಿಕೆ ಅವರು ಮೂವರು ನಾಯಕರಿಗೂ ಶ್ರದ್ಧಾಂಜಲಿ ಸಲ್ಲಿಸಿ ಸಭೆ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News