ಹೈಕೋರ್ಟ್ ಆದೇಶ ಪಾಲಿಸದ ವಿಟಿಯು: ನೂರಾರು ವಿದ್ಯಾರ್ಥಿಗಳು ಸಂಕಷ್ಟದಲ್ಲಿ

Update: 2018-11-28 14:42 GMT

ಬೆಂಗಳೂರು, ನ.28: ನಾಲ್ಕು ವಿಷಯಗಳಿಗಿಂತ ಅಧಿಕ ವಿಷಯಗಳನ್ನು ಬಾಕಿ ಉಳಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಮುಂದಿನ ವ್ಯಾಸಂಗ ಮಾಡಲು ಅವಕಾಶ ನೀಡಬೇಕು ಎಂದು ಹೈಕೋರ್ಟ್ ಆದೇಶ ನೀಡಿದ್ದರೂ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಪಾಲನೆ ಮಾಡುತ್ತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ.

ನಾಲ್ಕು ವಿಷಯಗಳಿಗಿಂತ ಅಧಿಕ ವಿಷಯಗಳನ್ನು ಉಳಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವುದಿಲ್ಲ ಎಂದು ವಿಟಿಯು 5 ನೆ ಸೆಮಿಸ್ಟರ್‌ಗೆ ಪ್ರವೇಶ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿದ್ದ ವಿದ್ಯಾರ್ಥಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು. ಬಳಿಕ ಹೈಕೋರ್ಟ್ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತು, ಅವರ ಪರವಾದ ತೀರ್ಪು ನೀಡಿತ್ತು. ಅಲ್ಲದೆ, ಕೂಡಲೇ ಪ್ರವೇಶ ನೀಡಬೇಕು ಎಂದು ಸೂಚನೆಯನ್ನೂ ನೀಡಿತ್ತು. ಇಷ್ಟಾದರೂ ಕಾಲೇಜು ಆಡಳಿತ ಮಂಡಳಿಯು ವಿಟಿಯುನಿಂದ ಯಾವುದೇ ಸೂಚನೆ ನಮಗೆ ಬಂದಿಲ್ಲ. ಹೀಗಾಗಿ, ಪ್ರವೇಶ ನೀಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ವಿಟಿಯು ಈ ಸಂಬಂಧ ಕ್ಯಾರಿ ಓವರ್ ಪದ್ಧತಿ ಅಡಿ ನಾಲ್ಕು ವಿಷಯಗಳಿಂದ ಹೆಚ್ಚು ವಿಷಯ ಬಾಕಿ ಉಳಿಸಿಕೊಂಡಿರುವವರಿಗೆ ಪ್ರವೇಶ ನೀಡಲು ಸಾಧ್ಯವಿಲ್ಲ ಎಂದು ಹೇಳುತ್ತಿದೆ. ಹೈಕೋರ್ಟ್ ತೀರ್ಪಿನ ಸಂಬಂಧ ಪ್ರಶ್ನಿಸಿದರೆ ಅದು ನಮಗೆ ಗೊತ್ತಿಲ್ಲ ಎನ್ನುತ್ತಿದ್ದು, ವಿದ್ಯಾರ್ಥಿಗಳು ಇದರಿಂದಾಗಿ ತೀವ್ರವಾಗಿ ನೊಂದಿದ್ದಾರೆ.

ವಿಟಿಯು 5ನೇ ಸೆಮಿಸ್ಟರ್ ಪರೀಕ್ಷೆಗಳು ಡಿ.3ರಿಂದ ಆರಂಭವಾಗಲಿವೆ. ವಿದ್ಯಾರ್ಥಿಗಳು ಚಲನ್ ಪಡೆದು ಶುಲ್ಕವನ್ನೂ ಪಾವತಿಸಿದ್ದಾರೆ. ಆದರೆ, ಕಾಲೇಜಿನಿಂದ ಪರೀಕ್ಷೆಗೆ ಹಾಜರಾಗಲು ಪ್ರವೇಶ ಪತ್ರಗಳನ್ನು ನೀಡುತ್ತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ಗೊಂದಲದಲ್ಲಿ ಸಿಲುಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News