×
Ad

ವಾರ್ತಾಭಾರತಿ ಅಂಕಣಕಾರ ಜಿ.ಎನ್.ರಂಗನಾಥ ರಾವ್ ಗೆ ರಾಜ್ಯೋತ್ಸವ ಪ್ರಶಸ್ತಿ

Update: 2018-11-28 20:32 IST

ಬೆಂಗಳೂರು, ನ.28: ರಾಜ್ಯ ಸರಕಾರವು 2018ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದ್ದು, ಹಿರಿಯ ಪತ್ರಕರ್ತ, ವಾರ್ತಾಭಾರತಿ ಅಂಕಣಕಾರ ಜಿ.ಎನ್.ರಂಗನಾಥ್‌ ರಾವ್ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 

ಹಿರಿಯ ಪತ್ರಕರ್ತರಾದ ಜಿ.ಎನ್.ರಂಗನಾಥರಾವ್ ‘ಸಂಯುಕ್ತ ಕರ್ನಾಟಕ’ ಬೆಂಗಳೂರು ಆವೃತ್ತಿಯಲ್ಲಿ 1962ರಲ್ಲಿ ಉಪಸಂಪಾದಕರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದವರು, ಮುಂದೆ ‘ಪ್ರಜಾವಾಣಿ’ ಪತ್ರಿಕೆಗೆ ಸೇರ್ಪಡೆಯಾದರು. ಹಂತ ಹಂತವಾಗಿ ಮೇಲೇರಿ ಆ ಪತ್ರಿಕಾ ಸಮೂಹದ ‘ಕಾರ್ಯನಿರ್ವಾಹಕ ಸಂಪಾದಕ’ ಹುದ್ದೆಗೇರಿ ನಿವೃತ್ತರಾದರು. ಅವರು ‘ಪ್ರಜಾವಾಣಿ’ಯ ಸಾಪ್ತಾಹಿಕ ಪುರವಣಿಯ ಉಸ್ತುವಾರಿ ವಹಿಸಿಕೊಂಡ ಸಮಯದಲ್ಲಿ ಹಾಗೂ ಸುಧಾ ವಾರ ಪತ್ರಿಕೆಯ ನೇತೃತ್ವ ವಹಿಸಿದ್ದ ಸಂದರ್ಭದಲ್ಲಿ ನೂರಾರು ಹೊಸ ಬರಹಗಾರರಿಗೆ ಉತ್ತೇಜನ ನೀಡಿದ್ದರು. 

ಜಿ.ಎನ್.ಆರ್. ಅವರದು ಬಹುಮುಖ ಪ್ರತಿಭೆ. ‘ನವರಂಗ’ ಎಂಬ ಕಾವ್ಯನಾಮದಲ್ಲಿ ಕಾದಂಬರಿ, ವಿಡಂಬನಾ ಬರಹ, ಕತೆಗಳನ್ನು ರಚಿಸಿದ್ದಾರೆ. ನಾಟಕಗಳನ್ನು ಬರೆದಿದ್ದಾರೆ, ವಿಮರ್ಶೆಗಳನ್ನು ಮಂಡಿಸಿದ್ದಾರೆ. ಕಾವ್ಯಪ್ರೇಮಿಯಾದ ಜಿ.ಎನ್.ಆರ್. ಕವಿಗಳಿಗೆ ಮಾರ್ಗದರ್ಶಕರಾಗಿದ್ದಾರೆ. ಪತ್ರಕರ್ತರ ಕಾಲೇಜುಗಳಲ್ಲಿ ಬೋಧಿಸುವುದರ ಜತೆಗೆ ಅವರ ಅನುಕೂಲಕ್ಕೆ ಪಠ್ಯ ಪುಸ್ತಕಗಳನ್ನು ರಚಿಸಿದ್ದಾರೆ. ಇಂದಿಗೂ ಕನ್ನಡ ಸಾಂಸ್ಕೃತಿಕ ಸಮಾರಂಭಗಳಿಗೆ ತಪ್ಪದೇ ಹಾಜರಿ ಹಾಕುವ ಜಿ.ಎನ್.ಆರ್. ತಮ್ಮ ಆಪ್ತ ಲೇಖಕ ಬಳಗಕ್ಕೆ ಸ್ಫೂರ್ತಿ ತುಂಬುವ ಸಹೃದಯಿ. ಶ್ರೀಯುತರಿಗೆ 2009 ರಲ್ಲಿ ಖಾದ್ರಿ ಶಾಮಣ್ಣ ಪ್ರಶಸ್ತಿಯ ಗೌರವ ಸಂದಿದೆ. ಸದ್ಯ ಅವರು ವಾರ್ತಾಭಾರತಿಯ 'ನೇಸರ ನೋಡು, ನೇಸಾರ ನೋಡು' ಅಂಕಣಕದಲ್ಲಿ ಬರೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News