ರೈತರ ಮನೆ ಬಾಗಿಲಿಗೆ ಸರಕಾರ: ಮುಖ್ಯಮಂತ್ರಿ ಕುಮಾರಸ್ವಾಮಿ
ಬೆಂಗಳೂರು, ನ. 29: ‘ಸರಕಾರ ಮತ್ತು ರೈತರ ನಡುವೆ ಕಂದಕವಿರಬಾರದು. ರೈತರ ಮನೆ ಬಾಗಿಲಿಗೆ ಸರಕಾರ ಬರುತ್ತಿದೆ. ಕೃಷಿಕರು ನೆಮ್ಮದಿಯಾಗಿ ಬದುಕಬೇಕೆಂಬ ಕನಸು ಸರಕಾರದ್ದು. ಗ್ರಾಮಗಳು ಬದುಕಿ, ರೈತರ ಸಂಕಷ್ಟಗಳು ದೂರವಾಗಿಸುವ ನಿಟ್ಟಿನಲ್ಲಿ ಮೈತ್ರಿ ಸರಕಾರ ಕಾರ್ಯೊನ್ಮುಖವಾಗಿದೆ’ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ತನ್ನ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ರೈತರ ಸಲಹಾ ಸಮಿತಿ ಪ್ರಥಮ ಸಭೆಯ ಬಳಿಕ ಮಾತನಾಡಿದ ಅವರು, ಪ್ರತಿ ಜಿಲ್ಲೆಯಿಂದ ಇಬ್ಬರು ಪ್ರಗತಿಪರ ರೈತರನ್ನು ಒಳಗೊಂಡ ಒಟ್ಟು 60 ರೈತ ಪ್ರತಿನಿಧಿಗಳ ಸಲಹಾ ಸಮಿತಿಯನ್ನು ರಚಿಸಿದೆ. ಆಯವ್ಯಯದಲ್ಲಿ ಘೊಷಿಸಿದ್ದ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಮತ್ತು ಇಸ್ರೆಲ್ ಮಾದರಿ ಕೃಷಿ ಪದ್ಧತಿ ಜಾರಿಗೆ ತರುವ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳುತ್ತಿದೆ ಎಂದ ಅವರು, ರೈತರು ನೀಡಿರುವ ಸಲಹೆಗಳನ್ನು ಆಧರಿಸಿ ತಕ್ಷಣದಿಂದ ಸರಕಾರ ಕಾರ್ಯೊನ್ಮುಖವಾಗಿ, ಹಂತ-ಹಂತವಾಗಿ ಜಾರಿಗೆ ತರಲಾಗುವುದು ಹಾಗೂ ಪ್ರತಿ 2ತಿಂಗಳಿಗೊಮ್ಮೆ ಸಮಿತಿ ಸಭೆ ನಡೆಸಿ, ಅವರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು ಎಂದರು.
ರೈತರ ಬೆಳೆಗೆ ಉತ್ತಮ ಬೆಲೆ, ರೈತರಿಗೆ ಹೊಸ ಕೃಷಿ ಪದ್ಧತಿಗಳ ಬಗ್ಗೆ ತಿಳುವಳಿಕೆ, ವೈಜ್ಞಾನಿಕವಾಗಿ ಬೆಳೆ ಬೆಳೆಯುವ ಪದ್ಧತಿಯ ಅಳವಡಿಕೆ. ವಿದೇಶಗಳಿಗೆ ತಮ್ಮ ಉತ್ಪಾದನೆಯನ್ನು ರಫ್ತು ಮಾಡುವ ದಿಸೆಯಲ್ಲಿ ಗುಣಮಟ್ಟದ ಹೆಚ್ಚಳ, ಸಾಮೂಹಿಕ ಕೃಷಿ ಪದ್ಧತಿ, ಕೃಷಿ ಉಪ ಕಸುಬುಗಳ ಬೆಳವಣಿಗೆ, ಮಾರುಕಟ್ಟೆ ವ್ಯವಸ್ಥೆ, ಉಗ್ರಾಣ ಹಾಗೂ ಶೈತ್ಯಾಗಾರದ ನಿರ್ಮಾಣ, ಉತ್ತಮ ಬಿತ್ತನೆ ಬೀಜಗಳ ಪೂರೈಕೆ, ನೀರಿನ ಸಂರಕ್ಷಣೆ ಹಾಗೂ ಸದ್ಬಳಕೆ ಬಗ್ಗೆ ರೈತರೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದು ಹೇಳಿದರು.
ಸಚಿವರಾದ ಶಿವಶಂಕರ್ ರೆಡ್ಡಿ, ಎಂ.ಸಿ.ಮನಗೊಳಿ, ಬಂಡೆಪ್ಪ ಕಾಶೆಂಪೂರ್, ವಿ. ಶಂಕರ್, ಸಾ.ರಾ.ಮಹೇಶ್, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್, ಸಿಎಂ ಆರ್ಥಿಕ ಸಲಹೆಗಾರ ಸುಬ್ರಹ್ಮಣ್ಯ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.