ಅಸತ್ಯವನ್ನು ಬರೆದು ಜನತೆ-ಸರಕಾರದ ಮಧ್ಯೆ ಕಂದಕ ಸೃಷ್ಟಿಸಬೇಡಿ: ಪತ್ರಕರ್ತರಿಗೆ ಕುಮಾರಸ್ವಾಮಿ ಮನವಿ
ಬೆಂಗಳೂರು, ನ.29: ವಾಸ್ತವಾಂಶ ಬರೆಯುವುದು ಪತ್ರಕರ್ತರ ಹಕ್ಕು, ಅಸತ್ಯವಾದದ್ದನ್ನು ಬರೆಯುವ ಮೂಲಕ ಜನತೆ ಹಾಗೂ ಸರಕಾರ ಮಧ್ಯೆ ಕಂದಕವನ್ನು ಸೃಷ್ಟಿ ಮಾಡಬೇಡಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ಗುರುವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಏರ್ಪಡಿಸಿದ್ದ, ರಾಜ್ಯೋತ್ಸವ ಪ್ರಶಸ್ತಿ ಸಮಾರಂಭದಲ್ಲಿ ನಾಡಿನ 63 ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಪತ್ರಕರ್ತರು ಸರಕಾರ ಹಾಗೂ ಜನತೆಯ ಕೊಂಡಿಯಾಗುವ ಮೂಲಕ ಸತ್ಯಾಂಶಗಳನ್ನು ಜನತೆಗೆ ತಿಳಿಸಬೇಕು. ಅದು ನಿಮ್ಮ ಹಕ್ಕು, ಯಾರೂ ಅದನ್ನು ತಡೆಯುವುದಿಲ್ಲ. ಆದರೆ, ಜನತೆಯಲ್ಲಿ ಸರಕಾರದ ಬಗ್ಗೆ ಅಪನಂಬಿಕೆ ಮೂಡಿಸಬೇಡಿ ಎಂದು ಹೇಳಿದರು.
ಮೈತ್ರಿ ಸರಕಾರ ಹೊಸ ಚಿಂತನೆಗಳನ್ನು ಇಟ್ಟುಕೊಂಡು ರಚನೆಯಾಗಿದ್ದು, ಸರಕಾರ ಯಾವುದೇ ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ. ರಾಜ್ಯದ ಎಲ್ಲ ಕ್ಷೇತ್ರಗಳಿಗೂ ಸಮಾನ ಮಾನ್ಯತೆಯನ್ನು ನೀಡಲಾಗುತ್ತಿದೆ. ಸರಕಾರದ ಬಗ್ಗೆ ಜನತೆಯಲ್ಲಿ ಅಸಮಾಧಾನವಿಲ್ಲ. ರಾಜ್ಯದ ಜನತೆ ಒಂದು ಕುಟುಂಬದಂತೆ ಇದ್ದು, ಅಭಿವೃದ್ಧಿಗೆ ಪೂರಕವಾಗಿ ಆಶೀರ್ವಾದ ಮಾಡಿದ್ದಾರೆ ಎಂದು ತಿಳಿಸಿದರು.
ಸರಕಾರ ಎಲ್ಲ ವರ್ಗದವರನ್ನು ಗೌರವಿಸುತ್ತದೆ. ಯಾವುದೇ ಜಾತಿ, ಮತ, ವರ್ಗಕ್ಕೆ ಪ್ರಶಸ್ತಿ ನೀಡದೆ, ತಾರತಮ್ಯ ಮಾಡದೆ ಎಲ್ಲ ಜಿಲ್ಲೆಯವರಿಗೂ ಪ್ರಶಸ್ತಿ ನೀಡುವಂತೆ ಸಲಹೆ ಮಾಡಿದೆ. ಅಲ್ಲದೆ, ನಾಡಿಗೆ ಸೇವೆ ಸಲ್ಲಿಸಿದವರನ್ನು ಆಯ್ಕೆ ಮಾಡುವುದು ಕಠಿಣ. ಪ್ರಶಸ್ತಿ ಆಯ್ಕೆಯಲ್ಲಿ ಎಲ್ಲ ಗೊಂದಲಗಳನ್ನು ನಿವಾರಿಸಿದ ಡಿ.ಕೆ. ಶಿವಕುಮಾರ್‌ರವರಿಗೆ ಅಭಿನಂದನೆ ತಿಳಿಸಿದರು.
ರಾಜ್ಯಮಟ್ಟ ಹಾಗೂ ರಾಷ್ಟ್ರಮಟ್ಟದಲ್ಲಿ ನಾಡಿನ ಖ್ಯಾತಿಗೆ ಭಾಜನರಾಗಿರುವ ಹಾಗೂ ಗ್ರಾಮೀಣ ಕಲೆ, ಸಮಾಜ ಸೇವೆ, ರಂಗಭೂಮಿ, ಪತ್ರಿಕಾರಂಗ, ವೈದ್ಯಕೀಯ ಸೇರಿದಂತೆ ಅನೇಕ ಕ್ಷೇತ್ರಗಳ ಸಾಧಕರಿಗೆ ನಮ್ಮ ಸರಕಾರದಿಂದ ಪ್ರಶಸ್ತಿ ನೀಡುತ್ತಿರುವುದು ತುಂಬಾ ಪ್ರಶಂಸನೀಯ. ಪ್ರಶಸ್ತಿ ದೊರೆಯದೆ ಇರುವ ಸಾಧಕರಿಗೆ ಮುಂದಿನ ವರ್ಷ ಪ್ರಶಸ್ತಿ ಸಿಗಲಿ ಎಂದು ಹಾರೈಸಿದರು.
ಕನ್ನಡ ಮತ್ತು ಸಂಸ್ಕೃತಿ ಸಚಿವೆ ಜಯಮಾಲ ಮಾತನಾಡಿ, ಬಸವಣ್ಣ, ಕುವೆಂಪು, ಸಂತ ಶಿಶುನಾಳ ಷರೀಪ್, ಕಿಟ್ಟೆಲ್ ರವರು ಸೇರಿದಂತೆ ಅನೇಕ ಗಣ್ಯರು ಕನ್ನಡ ಕಟ್ಟಿ ಬೆಳೆಸಿದ್ದಾರೆ. ಕಲೆಯಲ್ಲಿ ಅನೇಕ ಪ್ರಕಾರಗಳಿವೆ. ಹಾಗಾಗಿ ಎಲ್ಲರನ್ನೂ ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಕೇವಲ 63 ರತ್ನಗಳು ಇಲ್ಲಿವೆ. ಸಾವಿರಾರು ಪತ್ರಗಳು ಆಯ್ಕೆ ಸಮಿತಿಗೆ ಬಂದರೂ, ಶ್ರೇಷ್ಠ ಸಾಧಕರನ್ನೇ ಗುರುತಿಸಿರುವುದು ಹೆಗ್ಗಳಿಕೆಯಾಗಿದೆ. ಅಲ್ಲದೆ, ಡಿ.ಕೆ. ಶಿವಕುಮಾರ್ ಕೃಷ್ಣ ಪರಮಾತ್ಮ ಇದ್ದಂತೆ, ಅವರು ಸಮಿತಿಯ ಬೆಂಬಲಕ್ಕೆ ಇರುತ್ತಾರೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದರು ಎಂದರು.
ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಪ್ರಶಸ್ತಿಯ ಆಯ್ಕೆಯಲ್ಲಿ ಅನೇಕ ಒತ್ತಡ ಇರುತ್ತೆ. ಎಲ್ಲ ರಂಗದಲ್ಲೂ ಅನೇಕ ಸಾಧಕರಿರುತ್ತಾರೆ. ಆಯ್ಕೆ ಮಾಡುವುದು ಸುಲಭವಲ್ಲ. ಆಯ್ಕೆಯ ಸಂದರ್ಭದಲ್ಲಿ ಅನೇಕರನ್ನು ವೈರಿಗಳನ್ನಾಗಿ ಮಾಡಿಕೊಳ್ಳಬೇಕಾಗುತ್ತದೆ. ಅಲ್ಲದೆ, ಮುಖ್ಯಮಂತ್ರಿ ಕುಮಾರಸ್ವಾಮಿಯವರು ಯಾವುದೇ ಹೆಸರನ್ನೂ ಸೂಚಿಸದೆ ಪ್ರಶಸ್ತಿ ಆಯ್ಕೆ ಮಾಡಲು ತಿಳಿಸಿದರು ಎಂದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 25ರಿಂದ 103 ವಯೋಮಾನದ 63 ಸಾಧಕರಿಗೆ ಪ್ರಶಸ್ತಿಯನ್ನು ನೀಡಲಾಯಿತು. ಪ್ರಶಸ್ತಿಯು 1ಲಕ್ಷ ನಗದು, 25 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿತ್ತು.
ರಾಜ್ಯೋತ್ಸವ ಪ್ರಶಸ್ತಿಯನ್ನು ಹಂಬಲ ಎಂದು ತಿಳಿಯಬೇಡಿ, ತಾಯಿ ನೆಲಕ್ಕೆ ಸಲ್ಲಿಸಿದ ಸೇವೆಗಾಗಿ ಈ ಪ್ರಶಸ್ತಿಯನ್ನು ಸಾಧಕರಿಗೆ ನೀಡಲಾಗುತ್ತಿದ್ದು, ಸಾಧಕರನ್ನು ತನ್ನ ನೆಲದಲ್ಲೇ ಗುರುತಿಸುವುದು ಸರ್ವಶ್ರೇಷ್ಠ.
-ಜಯಮಾಲ, ಕನ್ನಡ ಮತ್ತು ಸಂಸ್ಕೃತಿ ಸಚಿವೆ
ಎಲ್ಲ ಕ್ಷೇತ್ರದವರಿಗೂ ಪ್ರಶಸ್ತಿ ನೀಡಿರುವುದು ಶ್ಲಾಘನೀಯ. ಪ್ರತಿಯೊಬ್ಬರೂ ತಮ್ಮದೇ ಕ್ಷೇತ್ರದಲ್ಲಿ ಕಾಯ-ವಾಚಾ-ಮನಸಾ ಕರ್ತವ್ಯ ಮಾಡಿದ್ದೇವೆ.
-ಜಿ.ಎನ್.ರಂಗನಾಥ್‌ರಾವ್, ಹಿರಿಯ ಪತ್ರಕರ್ತರು