ಡಿ.10ರಂದು ಸರಕಾರದ ವಿರುದ್ಧ ಒಂದು ಲಕ್ಷ ರೈತರೊಂದಿಗೆ ಹೋರಾಟ: ಬಿ.ಎಸ್.ಯಡಿಯೂರಪ್ಪ

Update: 2018-11-29 18:10 GMT

ಬೆಂಗಳೂರು, ನ.29: ಸಾಲಮನ್ನಾ, ಕಬ್ಬು ಬೆಳೆಗಾರರ ಬಾಕಿ ಪಾವತಿ ಸೇರಿದಂತೆ ರೈತರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಚಳಿಗಾಲದ ಅಧಿವೇಶನದ ಮೊದಲನೆ ದಿನ ಬೆಳಗಾವಿಯಲ್ಲಿ ಒಂದು ಲಕ್ಷ ರೈತರನ್ನು ಸೇರಿಸಿ ಬೃಹತ್ ಹೋರಾಟ ನಡೆಸಲು ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಗುರುವಾರ ಬಿಜೆಪಿ ಕಚೇರಿಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮೈತ್ರಿ ಸರಕಾರ ವಿಫಲವಾಗಿದೆ. ಹೀಗಾಗಿ ಸರಕಾರದ ಧೋರಣೆಯನ್ನು ಖಂಡಿಸಿ ಡಿ.10 ರಂದು ಬೆಳಗಾವಿಯಲ್ಲಿ 1 ಲಕ್ಷ ರೈತರನ್ನು ಸೇರಿಸಿ ಬೃಹತ್ ಪ್ರತಿಭಟನೆ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ರೈತರ ಸಮಸ್ಯೆ ಆಲಿಸಲು ಹಾಗೂ ಬರ ಪೀಡಿತ ಪ್ರದೇಶಗಳ ಅಧ್ಯಯನಕ್ಕಾಗಿ ಆರು ತಂಡಗಳಲ್ಲಿ ರಾಜ್ಯ ಪ್ರವಾಸಕ್ಕೆ ನಿರ್ಧರಿಸಲಾಗಿದೆ. ಡಿ. 3, 4 ಹಾಗೂ 5 ರಂದು ಮೂರು ದಿನಗಳ ಕಾಲ ಬರ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ನಡೆಸಿ ರೈತರ ಅಹವಾಲು ಆಲಿಸಲಿದೆ. ನಂತರ ರೈತರ ಸಮಸ್ಯೆಗಳನ್ನು ಸದನದಲ್ಲಿ ಪ್ರಸ್ತಾಪಿಸಿ ಹೋರಾಟ ನಡೆಸಲಿದ್ದೇವೆ ಎಂದು ಅವರು ತಿಳಿಸಿದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ರಾಜ್ಯದ ಅಭಿವೃದ್ಧಿ ಕಾರ್ಯಗಳ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿ ಶ್ವೇತಪತ್ರ ಹೊರಡಿಸಲಿ. ಅಲ್ಲದೆ, ಕಳೆದ ಐದು ತಿಂಗಳಲ್ಲಿ 250 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರು, ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಸಮ್ಮಿಶ್ರ ಸರಕಾರದ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.

ಸಂಯಮ ಕಳೆದುಕೊಂಡ ಸಿಎಂ

ಮುಖ್ಯಮಂತ್ರಿ ಸ್ಥಾನದಲ್ಲಿರುವವರಿಗೆ ಸಂಯಮ ಬಹಳ ಮುಖ್ಯ. ಆದರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಹಲವು ಸಂದರ್ಭದಲ್ಲಿ ಸಂಯಮ ಕಳೆದುಕೊಂಡಂತೆ ವರ್ತಿಸುತ್ತಿದ್ದಾರೆ. ವಿಷ್ಣು ಸ್ಮಾರಕರದ ಬಗ್ಗೆ ಕೇಳಿದರೂ ಅಭಿಮಾನಿಗಳ ವಿರುದ್ಧ ಹರಿಹಾಯುತ್ತಾರೆ. ಇದು ಹೀಗೆಯೇ ಮುಂದುವರೆದರೆ ಮೈತ್ರಿ ಸರಕಾರ ಹೆಚ್ಚು ದಿನ ಉಳಿಯುವುದಿಲ್ಲ.
-ಆರ್.ಅಶೋಕ್, ಮಾಜಿ ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News