ನಿಮ್ಮ ಭವಿಷ್ಯನಿಧಿ ಖಾತೆ ನಿಮಗೆ ಆರು ಲ.ರೂ.ವರೆಗೆ ಜೀವವಿಮೆ ರಕ್ಷಣೆಯನ್ನೂ ನೀಡುತ್ತದೆ ಎನ್ನುವುದು ನಿಮಗೆ ಗೊತ್ತೇ?

Update: 2018-11-30 11:24 GMT

ನೀವು ವೇತನ ಪಡೆಯುವ ಉದ್ಯೋಗಿಯಾಗಿದ್ದರೆ ನೌಕರರ ಭವಿಷ್ಯನಿಧಿ (ಇಪಿಎಫ್),ಆರೋಗ್ಯ ವಿಮೆ,ಪ್ರಯಾಣ ಮತ್ತು ಮನೋರಂಜನಾ ಭತ್ಯೆಯಂತಹ ನಿಮ್ಮ ಉದ್ಯೋಗದಾತರಿಂದ ದೊರೆಯುವ ಲಾಭಗಳ ಬಗ್ಗೆ ನಿಮಗೆ ಗೊತ್ತಿರಬಹುದು. ಆದರೆ ಇಪಿಎಫ್‌ನ ಎಂಪ್ಲಾಯೀಸ್ ಡಿಪೋಸಿಟ್ ಲಿಂಕ್ಡ್ ಇನ್ಶುರನ್ಸ್(ಇಡಿಎಲ್‌ಐ)ನಡಿ ತಮಗೆ ಜೀವವಿಮೆಯ ರಕ್ಷಣೆಯೂ ದೊರೆಯುತ್ತದೆ ಎನ್ನುವುದು ಹೆಚ್ಚಿನವರಿಗೆ ಗೊತ್ತಿಲ್ಲ.

ಏನಿದು ಇಡಿಎಲ್‌ಐ?

ಸೇವೆಯಲ್ಲಿರುವ ಅವಧಿಯಲ್ಲಿ ಭವಿಷ್ಯನಿಧಿ ಚಂದಾದಾರ ಮೃತಪಟ್ಟರೆ ಆತನ ಕುಟುಂಬಕ್ಕೆ ಈ ವಿಮಾ ಮೊತ್ತವನ್ನು ನೀಡಲಾಗುತ್ತದೆ. ಸರಳವಾಗಿ ಹೇಳುವುದಾದರೆ ನೌಕರರು ಇಪಿಎಫ್ ಯೋಜನೆಗೆ ಸೇರ್ಪಡೆಗೊಂಡಾಗ ಇಡಿಎಲ್‌ಇ ಲಾಭವನ್ನೂ ಪಡೆಯಲು ಅರ್ಹರಾಗಿರುತ್ತಾರೆ. ಆದರೆ ಉದ್ಯೋಗದಾತ ಕಂಪನಿಯು ತನ್ನ ನೌಕರರಿಗೆ ಇತರ ಯಾವುದೇ ಯೋಜನೆಯ ಮೂಲಕ ವಿಮೆ ರಕ್ಷಣೆಯನ್ನು ಒದಗಿಸುತ್ತಿದ್ದರೆ ಅದು ಇಡಿಎಲ್‌ಐಗೆ ದೇಣಿಗೆಯನ್ನು ಪಾವತಿಸುವುದರಿಂದ ವಿನಾಯಿತಿಯನ್ನು ಹೊಂದಿರುತ್ತದೆ. ಇಡಿಎಲ್‌ಐ ಯೋಜನೆಯ ಅತ್ಯುತ್ತಮ ಅಂಶವೆಂದರೆ ಈ ಯೋಜನೆಗೆ ಕೇವಲ ಉದ್ಯೋಗದಾತರು ವಂತಿಗೆ ಸಲ್ಲಿಸಬೇಕಾಗುತ್ತದೆ ಮತ್ತು ಉದ್ಯೋಗಿಯ ವೇತನದಿಂದ ಈ ಮೊತ್ತ ಕಡಿತವಾಗುವುದಿಲ್ಲ. 

ಇಡಿಎಲ್‌ಐಗೆ ಯಾರು ಅರ್ಹರು?

 ಭವಿಷ್ಯನಿಧಿ ಚಂದಾದಾರರಾಗಿರುವ ಎಲ್ಲ ಉದ್ಯೋಗಿಗಳೂ ಇಡಿಎಲ್‌ಐ ಯೋಜನೆಯ ಲಾಭ ಪಡೆಯಲು ಅರ್ಹರಾಗಿರುತ್ತಾರೆ. ಆದರೆ ಅವರು ನಿಯಮಿತವಾಗಿ ಇಪಿಎಫ್ ವಂತಿಗೆಯನ್ನು ಸಲ್ಲಿಸುತ್ತಿರಬೇಕು. ಉದ್ಯೋಗಿಯು ಇಡಿಎಲ್‌ಐ ಯೋಜನೆಗೆ ಸೇರಲು ಪ್ರತ್ಯೇಕ ಅರ್ಜಿಯನ್ನು ಸಲ್ಲಿಸಬೇಕಿಲ್ಲ.

 ಇಡಿಎಲ್‌ಐ ಅಡಿ ಲಾಭಗಳು ಮತ್ತು ವಿಮೆ ರಕ್ಷಣೆ

 ಈ ಯೋಜನೆಯಡಿ ಜೀವವಿಮೆಯ ಮೊತ್ತವು ಉದ್ಯೋಗಿಯ ಮೂಲ ವೇತನ(ತುಟ್ಟ್ಟಿಭತ್ಯೆ ಸೇರಿದಂತೆ)ವನ್ನು ಆಧರಿಸಿರುತ್ತದೆ ಮತ್ತು ಆತನ ಸೇವಾವಧಿಯನ್ನಲ್ಲ. ಅಂದರೆ ನೀವು ಇಪಿಎಫ್‌ಗೆ ಸೇರ್ಪಡೆಗೊಂಡ ಮೊದಲ ದಿನದಿಂದಲೇ ಇಡಿಎಲ್‌ಐ ರಕ್ಷಣೆಯನ್ನೂ ಪಡೆಯಲು ಅರ್ಹರಾಗಿರುತ್ತೀರಿ.

ಕಳೆದ ಫೆಬ್ರವರಿಯಲ್ಲಿ ಯೋಜನೆಗೆ ತಿದ್ದುಪಡಿಯನ್ನು ಮಾಡಲಾಗಿದ್ದು,ಕನಿಷ್ಠ ಜೀವವಿಮೆ ಮೊತ್ತವನ್ನು 2.5 ಲ.ರೂ. ಮತ್ತು ಗರಿಷ್ಠ ಮೊತ್ತವನ್ನು 6 ಲ.ರೂ.ಗಳಿಗೆ ಹೆಚ್ಚಿಸಲಾಗಿದೆ. ಇಪಿಎಫ್‌ಗೆ ನಿರ್ದೇಶಿಸಲಾಗಿರುವ ನಾಮಿನಿಗಳೇ ಇಡಿಎಲ್‌ಐಗೂ ನಾಮಿನಿಗಳಾಗಿರುತ್ತಾರೆ. ಅದಕ್ಕಾಗಿ ಪ್ರತ್ಯೇಕ ಅರ್ಜಿಯನ್ನು ತುಂಬುವ ಅಗತ್ಯವಿಲ್ಲ.

ಕೆಲಸದ ವೇಳೆಯಲ್ಲಿ ಅಥವಾ ಇತರ ಸಂದರ್ಭಗಳಲ್ಲಿ ಸಾವು ಸಂಭವಿಸಲಿ,ಸಾವಿಗೆ ಕಾರಣಗಳು ಏನೇ ಆಗಿರಲಿ...ಉದ್ಯೋಗಿಯ ಕುಟುಂಬಕ್ಕೆ ಜೀವವಿಮೆಯ ಹಣವು ದೊರೆಯುತ್ತದೆ.

ಇಡಿಎಲ್‌ಐಗೆ ದೇಣಿಗೆ ನಿಮ್ಮ ಮೂಲ ವೇತನದ(ಡಿಎ ಸೇರಿದಂತೆ) ಶೇ.12ರಷ್ಟು ಮೊತ್ತವು ಇಪಿಎಫ್‌ಗೆ ನಿಮ್ಮ ದೇಣಿಗೆಯಾಗಿರುತ್ತದೆ ಮತ್ತು ನಿಮ್ಮ ಉದ್ಯೋಗದಾತರೂ ಅಷ್ಟೇ ಮೊತ್ತವನ್ನು ಪಾವತಿಸುತ್ತಾರೆ ಎನ್ನುವುದು ನಿಮಗೆ ಗೊತ್ತು. ನಿಮ್ಮ ಸಂಪೂರ್ಣ ದೇಣಿಗೆಯು ಇಪಿಎಫ್ ಯೋಜನೆಯಲ್ಲಿ ಹೂಡಿಕೆಯಾದರೆ ಉದ್ಯೋಗದಾತರ ವಂತಿಗೆಯ ಶೇ.8.33ರಷ್ಟು ಉದ್ಯೋಗಿಯ ಪಿಂಚಣಿ ನಿಧಿಗೆ,ಶೇ.3.67ರಷ್ಟು ಇಪಿಎಫ್ ಯೋಜನೆಗೆ,0.51ರಷ್ಟು ನೌಕರರ ಇಡಿಎಲ್‌ಐ ಪ್ರೀಮಿಯಂ,ಶೇ.0.85ರಷ್ಟು ಇಪಿಎಫ್ ಆಡಳಿತಾತ್ಮಕ ವೆಚ್ಚಗಳು ಮತ್ತು 0.01ರಷ್ಟು ಇಡಿಎಲ್‌ಐ ಆಡಳಿತಾತ್ಮಕ ವೆಚ್ಚಗಳಿಗೆ ಹಂಚಿಹೋಗುತ್ತವೆ.

ಇಡಿಎಲ್‌ಐ ವಿಮೆ ರಕ್ಷಣೆಯನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?

ಇದಕ್ಕಾಗಿ ಉದ್ಯೋಗಿಯು ಮೃತಪಟ್ಟ ತಿಂಗಳಿನ ಹಿಂದಿನ 12 ತಿಂಗಳಲ್ಲಿ ಆತ ಪಡೆದಿದ್ದ ಮೂಲವೇತನ ಮತ್ತು ತುಟ್ಟಿಭತ್ಯೆಯ ಸರಾಸರಿಯನ್ನು ಮಾಸಿಕ ವೇತನವೆಂದು (15,000 ರೂ.ಗಳ ಗರಿಷ್ಠ ಮಿತಿಗೊಳಪಟ್ಟು)ಪರಿಗಣಿಸಲಾಗುತ್ತದೆ. ಇದನ್ನು 30ರಿಂದ ಗುಣಿಸಲಾಗುತ್ತದೆ ಮತ್ತು ಇದಕ್ಕೆ ಹಿಂದಿನ 12 ತಿಂಗಳುಗಳು ಅಥವಾ ಆತನ ಸದಸ್ಯತನದ ಅವಧಿ, ಇವುಗಳಲ್ಲಿ ಯಾವುದು ಕಡಿಮೆಯೋ ಆ ಅವಧಿಯಲ್ಲಿ ಮೃತನ ಪಿಎಫ್ ಖಾತೆಯಲ್ಲಿನ ಸರಾಸರಿ ಶಿಲ್ಕಿನ ಶೇ.50ರಷ್ಟು ಮೊತ್ತವನ್ನು ಸೇರಿಸಲಾಗುತ್ತದೆ. ಉದಾಹರಣೆಗೆ ಉದ್ಯೋಗಿಯ ಸಾವಿನ ಸಂದರ್ಭದಲ್ಲಿ ಹಿಂದಿನ 12 ತಿಂಗಳುಗಳಲ್ಲಿ ಆತನ ಸರಾಸರಿ ಮೂಲವೇತನ ಮತ್ತು ತುಟ್ಟಿಭತ್ಯೆ 10,000 ರೂ.ಆಗಿತ್ತು ಎಂದಿಟ್ಟುಕೊಳ್ಳೋಣ. ಇದನ್ನು 30ರಿಂದ ಗುಣಿಸಿದರೆ ಮೂರು ಲಕ್ಷ ರೂ.ಆಗುತ್ತದೆ. ಸಾವಿಗೆ ಹಿಂದಿನ 12 ತಿಂಗಳ ಅವಧಿಯಲ್ಲಿ ಆತನ ಪಿಎಫ್ ಖಾತೆಯಲ್ಲಿ 50,000 ರೂ. ಸಂಚಿತವಾಗಿತ್ತು ಎಂದಿಟ್ಟುಕೊಂಡರೆ ಇದರ ಶೇ.50ರಷ್ಟು,ಅಂದರೆ 25,000 ರೂ.ಗಳನ್ನು ಮೂರು ಲಕ್ಷ ರೂ.ಜೊತೆ ಸೇರಿಸಲಾಗುತ್ತದೆ. ಹೀಗೆ ಉದ್ಯೋಗಿಯ ನಾಮಿನಿಗೆ ದೊರೆಯುವ ಒಟ್ಟು ವಿಮೆ ಮೊತ್ತವು 3.25 ಲ.ರೂ.ಗಳಾಗುತ್ತವೆ.

ನಾಮಿನಿ ವಿಮೆ ಹಣ ಪಡೆಯುವುದು ಹೇಗೆ?

ಉದ್ಯೋಗಿಯು ಮೃತಪಟ್ಟ ಸಂದರ್ಭದಲ್ಲಿ ನಾಮಿನಿಯು ವಿಮೆ ಹಣವನ್ನು ಕೋರಿ ಫಾ.20 ಮತ್ತು 10ಡಿ/ಸಿ ಜೊತೆ ಲಿಖಿತ ಅರ್ಜಿಯನ್ನು ಉದ್ಯೋಗದಾತರ ಮೂಲಕ ಇಪಿಎಫ್ ಆಯುಕ್ತರಿಗೆ ಸಲ್ಲಿಸಬೇಕಾಗುತ್ತದೆ. ಮರಣ ಪ್ರಮಾಣಪತ್ರದಂತಹ ಅಗತ್ಯ ದಾಖಲೆಗಳನ್ನು ಈ ಅರ್ಜಿಯೊಂದಿಗೆ ಲಗತ್ತಿಸಬೇಕಾಗುತ್ತದೆ.

 ಅರ್ಜಿಯನ್ನು ಸ್ವೀಕರಿಸಲಾದ ದಿನಾಂಕದಿಂದ 30 ದಿನಗಳಲ್ಲಿ ನಾಮಿನಿಗೆ ವಿಮೆ ಹಣ ಪಾವತಿಯಾಗುತ್ತದೆ. ಇದಕ್ಕಾಗಿ ಅರ್ಜಿಯಲ್ಲಿ ಸರಿಯಾದ ಬ್ಯಾಂಕ್ ವಿವರಗಳನ್ನು ಕಾಣಿಸುವುದು ಅಗತ್ಯವಾಗಿರುತ್ತದೆ. ವಿಮೆ ಹಣ ಕೋರಿಕೆ ಅರ್ಜಿಯಲ್ಲಿ ಏನಾದರೂ ತಪ್ಪುಗಳಿದ್ದರೆ ಅರ್ಜಿಯನ್ನು ಸ್ವೀಕರಿಸಿದ 30 ದಿನಗಳಲ್ಲಿ ಅದನ್ನು ಅರ್ಜಿದಾರನಿಗೆ ತಿಳಿಸಬೇಕಾಗುತ್ತದೆ. 30 ದಿನಗಳೊಳಗೆ ವಿಮೆ ಹಣವನ್ನು ಪಾವತಿಸಲು ಆಯುಕ್ತರು ವಿಫಲರಾದರೆ ಅವರು ವಾರ್ಷಿಕ ಶೇ.12ರ ದರದಲ್ಲಿ ದಂಡ ಬಡ್ಡಿಯನ್ನು ತೆರಬೇಕಾಗುತ್ತದೆ,ಅದೂ ಸ್ವಂತ ವೇತನದಿಂದ!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News