×
Ad

ಕಿಂಗ್‌ಪಿನ್ ಶಿವಕುಮಾರ್ ವಿಚಾರಣೆ ತೀವ್ರ: ಇನ್ನಿತರೆ ಪರೀಕ್ಷೆಗಳ ಪತ್ರಿಕೆಯೂ ಸೋರಿಕೆ ?

Update: 2018-11-30 22:08 IST

ಬೆಂಗಳೂರು, ನ.30: ನಾಗರಿಕ ಪೊಲೀಸ್ ಪೇದೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧಿತನಾಗಿರುವ ಪ್ರಮುಖ ರೂವಾರಿ ಶಿವಕುಮಾರ್‌ನ ವಿಚಾರಣೆ ಮುಂದುವರೆದಿದ್ದು, ಈತ ಪಿಡಿಒ ಸೇರಿದಂತೆ ಇನ್ನಿತರೆ ಇಲಾಖೆಗಳ ನೇಮಕಾತಿ ಪರೀಕ್ಷಾ ಪತ್ರಿಕೆಗಳನ್ನು ಸೋರಿಕೆ ಮಾಡಿರಬಹುದು ಎನ್ನುವ ಗಮಾನಿ ಬಂದಿದೆ.

ಬೆಂಗಳೂರು ತುಮಕೂರು ರಸ್ತೆಯ ಮೈಲ್ಸ್ಟೋನ್‌ನ ಅಪಾರ್ಟ್‌ಮೆಂಟ್‌ನ ಕೊಠಡಿಯೊಂದು ಈತನಿಗೆ ಸೇರಿದ್ದು, ದಾಳಿ ನಡೆಸಿದಾಗ ಲೋಕೋಪಯೋಗಿ, ಆರೋಗ್ಯ, ಅರಣ್ಯ ಸೇರಿದಂತೆ ಹತ್ತಾರು ಇಲಾಖೆಗಳ ನಡೆಯಬೇಕಿದ್ದ ಪರೀಕ್ಷೆಗಳ ವಿದ್ಯಾರ್ಥಿಗಳ ಪ್ರವೇಶ ಪತ್ರ ದೊರಕಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಇತ್ತೀಚಿಗಷ್ಟೇ, ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ) ಮೂಲಕ ವಿವಿಧ ಇಲಾಖೆಗಳಲ್ಲಿ ಖಾಲಿ ಉಳಿದಿರುವ ಹುದ್ದೆಗಳನ್ನು ಭರ್ತಿ ಮಾಡಲು ಸರಕಾರ ಅಧಿಸೂಚನೆ ಹೊರಡಿಸಿತ್ತು. ಕೆಪಿಎಸ್ಸಿ ಮೂಲಕವೇ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಮೂಲಕ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವುದು ಸರಕಾರದ ಉದ್ದೇಶವಾಗಿತ್ತು. ಆದರೆ, ಆರೋಪಿ ಶಿವಕುಮಾರ ಮನೆಯಲ್ಲಿ ವಿದ್ಯಾರ್ಥಿಗಳು ಬರೆಯಬೇಕಿದ್ದ ವಿವಿಧ ಪರೀಕ್ಷೆಗಳ 400 ಪ್ರವೇಶ ಪತ್ರಗಳು ಸಿಕ್ಕಿದ್ದು, ಈತನ ಹಿಂದೆ, ಪ್ರಭಾವಿ ವ್ಯಕ್ತಿಗಳಿರಬಹುದು ಎಂದು ಸಿಸಿಬಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

3 ದಶಕದ ಇದೇ ವೃತ್ತಿ: ಶಿವಕುಮಾರ್ 30 ವರ್ಷಗಳಿಂದ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವುದನ್ನೇ ವೃತ್ತಿ ಮಾಡಿಕೊಂಡಿದ್ದ. ಎಸೆಸ್ಸೆಲ್ಸಿ, ಪಿಯುಸಿ ಸೇರಿದಂತೆ ವಿವಿಧ ಇಲಾಖೆಗಳ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಮುಂಚಿತವಾಗಿಯೇ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿರುವುದು ತನಿಖೆಯಿಂದ ಗೊತ್ತಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News