ಮೌಖಿಕ ಕಾವ್ಯ ಅನುವಾದದ ವೇಳೆ ಸಂದಾನ ಸೂತ್ರ ಅಗತ್ಯ: ವಿಮರ್ಶಕ ಸಿ.ಎನ್.ರಾಮಚಂದ್ರನ್

Update: 2018-11-30 16:51 GMT

ಬೆಂಗಳೂರು, ನ.30: ವೌಖಿತ ಕಾವ್ಯ ಪರಂಪರೆಗಳ ಪಠ್ಯಗಳು ನಿರಂತರವಾಗಿ ಬದಲಾಗುತ್ತಿರುತ್ತದೆ. ಹೀಗಾಗಿ ಈ ಕಾವ್ಯಗಳನ್ನು ಇತರೆ ಭಾಷೆಗಳಿಗೆ ಅನುವಾದ ಮಾಡುವಾಗ ಸಂದಾನ ಸೂತ್ರಗಳನ್ನು ಪಾಲಿಸುವುದು ಅಗತ್ಯವಿದೆ ಎಂದು ಹಿರಿಯ ವಿಮರ್ಶಕ ಸಿ.ಎನ್.ರಾಮಚಂದ್ರನ್ ತಿಳಿಸಿದರು.

ಶುಕ್ರವಾರ ಶಬ್ದನಾ ಭಾಷಾಂತರ ಕೇಂದ್ರವು ನಗರದ ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿ ಆಯೋಜಿಸಿದ್ದ ‘ಮೌಖಿಕ ಸಾಹಿತ್ಯಾನುವಾದದ ಸವಾಲುಗಳು’ ಕುರಿತು ಅವರು ಮಾತನಾಡಿದರು.

ಮಲೆಮಹದೇಶ್ವರ, ಜುಂಜಪ್ಪ, ಮಂಟೆಸ್ವಾಮಿ ಸೇರಿದಂತೆ ಮೌಖಿಕ ಕಾವ್ಯಗಳು ನಿರಂತರವಾಗಿ ಬದಲಾಗುತ್ತಲೇ ಇರುತ್ತದೆ. ಹಾಡುಗಾರರಿಂದ ಹಾಡುಗಾರರಿಗೆ, ಪ್ರದರ್ಶನದಿಂದ ಪ್ರದರ್ಶನಕ್ಕೆ ಹಾಗೂ ಮೌಖಿಕ ಕಾವ್ಯಗಳನ್ನು ಕೇಳುವ ಪ್ರೇಕ್ಷಕರು, ಪ್ರದರ್ಶನಗೊಳ್ಳುವ ಸಮಯಕ್ಕೆ ಅನುಗುಣವಾಗಿ ನಿರಂತರವಾಗಿ ಬದಲಾಗುತ್ತಿರುತ್ತದೆ. ಇವೆಲ್ಲವುಗಳ ಬಗ್ಗೆ ಅನುವಾದಕನಿಗೆ ಸ್ಪಷ್ಟ ಅರಿವಿರಬೇಕು ಎಂದು ಅವರು ಹೇಳಿದರು.

ಹಾಡುಗಾರರು ಮೌಖಿಕ ಕಾವ್ಯಗಳನ್ನು ಪ್ರೇಕ್ಷಕರ ಮುಂದೆ ಕಥನವಾಗಿ ಹಾಡುವ ಸಂದರ್ಭದಲ್ಲಿ ಸಮಯದ ಅನುಸಾರವಾಗಿ ಕಥನವನ್ನು ಕುಗ್ಗಿಸುವುದು ಹಾಗೂ ಹಿಗ್ಗಿಸುವುದನ್ನು ಮಾಡುತ್ತಾರೆ. ಹಾಗೂ ಕಾವ್ಯಗಳ ಪ್ರದರ್ಶನದ ವೇಳೆ ಹಾಡುಗಾರರು ವೈಯಕ್ತಿಕ ಆಸಕ್ತಿಗಳ ಮೇರೆಗೆ ಉಪಕತೆಗಳನ್ನು ಹೇಳುತ್ತಿರುತ್ತಾರೆ. ಹೀಗಾಗಿ ಮೌಖಿಕ ಕಾವ್ಯಗಳನ್ನು ಅನುವಾದ ಮಾಡುವಾಗ ಕಾವ್ಯಗಳಲ್ಲಿರುವ ಉಪಕತೆಗಳು ಬೇಕೆ, ಬೇಡವೆ ಎಂಬುದನ್ನು ಪರಿಶೀಲಿಸಬೇಕು ಎಂದು ಅವರು ಹೇಳಿದರು.

ವಿಮರ್ಶಕ ಸುರೇಶ್ ನಾಗಲಮಡಿಕೆ ಮಾತನಾಡಿ, ದೇಶದ ವಿವಿಧ ರಾಜ್ಯಗಳಲ್ಲಿರುವ ವೌಖಿಕ ಕಾವ್ಯಗಳು ಹಾಗೂ ಜನಪದೀಯ ಕಥನಗಳು ಇಂಗ್ಲಿಷ್ ಭಾಷೆಗೆ ಅನುವಾದವಾಗಿರುಷ್ಟು ದೇಶಿಯ ಇತರೆ ಭಾಷೆಗಳಿಗೆ ಅನುವಾದವಾಗಿಲ್ಲ. ಈ ಬಗ್ಗೆ ಅನುವಾದಕರು ಗಮನ ವಹಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು.

ರಾಜ್ಯ ಇಲ್ಲವೆ ದೇಶದ ಯಾವುದೆ ಭಾಗದ ಮೌಖಿಕ ಕಾವ್ಯ ಪರಂಪರೆಗಳು ಯಾವುದೆ ಒಂದು ಜಾತಿಗೆ ಸಂಬಂಧಿಸಿಲ್ಲ. ಕಾವ್ಯಗಳು, ಪುರಾಣಗಳು ಆಯಾ ಪ್ರದೇಶದಲ್ಲಿ ವಾಸಿಸುವ ಎಲ್ಲ ಜಾತಿ, ಸಮುದಾಯದ ಸಮ್ಮಿಶ್ರಣದಿಂದ ರೂಪು ತಾಳಿರುತ್ತದೆ. ಹೀಗಾಗಿ ಮೌಖಿಕ ಕಾವ್ಯಗಳು ಸೀಮಿತ ಚೌಕಟ್ಟಿಗೆ ಸಿಲುಕಿಸದೆ, ವಿಶಾಲಾರ್ಥದಲ್ಲಿ ವಿಶ್ಲೇಷಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು. ಈ ವೇಳೆ ಲೇಖಕಿ ವತ್ಸಲಾ ಮೋಹನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News