ಅನಧಿಕೃತ ಹೋರ್ಡಿಂಗ್ಸ್ ತೆರವು ವಿಚಾರ: ಐಟಿಐಎಲ್‌ಗೆ ಹೈಕೋರ್ಟ್ ನೋಟಿಸ್

Update: 2018-12-01 17:03 GMT

ಬೆಂಗಳೂರು, ಡಿ.1: ನಗರದಲ್ಲಿನ ಅನಧಿಕೃತ ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ಸ್ ತೆರವು ವಿಚಾರ ಸಂಬಂಧ ಶನಿವಾರ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆಯಿತು. ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಕಚೇರಿಯ ವ್ಯಾಪ್ತಿಯಲ್ಲಿ ಹೋರ್ಡಿಂಗ್ಸ್ ತೆಗೆದಿರಲಿಲ್ಲ. ಹೀಗಾಗಿ, ಕೋರ್ಟ್‌ಗೆ ಬಿಬಿಎಂಪಿ, ಐಟಿಐಎಲ್ ತನ್ನ ವ್ಯಾಪ್ತಿಯ ಯಾವುದೇ ಹೋರ್ಡಿಂಗ್ಸ್‌ಗಳನ್ನು ತೆರವುಗೊಳಿಸಿಲ್ಲ ಎಂದು ತಿಳಿಸಿತು. ಇದರಿಂದ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಅವರ ನೇತೃತ್ವದ ವಿಭಾಗಿಯ ನ್ಯಾಯಪೀಠ, ಐಟಿಐಎಲ್‌ಗೆ ನೋಟಿಸ್ ನೀಡಲು ಸೂಚಿಸಿತು.

ಬಿಎಂಟಿಸಿ ತನ್ನ ಆವರಣದಲ್ಲಿ ಹೋರ್ಡಿಂಗ್ಸ್ ತೆರವುಗೊಳಿಸದಿರುವ ಬಗ್ಗೆಯೂ ವಿಚಾರಣೆ ನಡೆಯಿತು. ಆಗ ಬಿಎಂಟಿಸಿ ಬೇರೆ ಜಾಹೀರಾತು ಕಂಪೆನಿಗೆ ಮೂರು ವರ್ಷ ಗುತ್ತಿಗೆ ನೀಡಿದೆ. ಅದರ ಅವಧಿ ಇನ್ನೂ ಮುಗಿದಿಲ್ಲ ಎಂದು ಬಿಎಂಟಿಸಿ, ಕೋರ್ಟ್‌ಗೆ ತಿಳಿಸಿತು. ಆಗ ನ್ಯಾಯಪೀಠವು ನೀವು ಏನು ಹೇಳಬೇಕು ಅಂದು ಕೊಂಡಿದ್ದೀರೋ ಅದನ್ನ ಅಫಿಡೆವಿಟ್ ಮೂಲಕ ಹೇಳುವಂತೆ ಸೂಚಿಸಿತು.

ಇನ್ನು, ಜಾಹೀರಾತು ಬೈಲಾ ರೂಪಿಸುವ ಬಗ್ಗೆ ಹೈಕೋರ್ಟ್‌ಗೆ ಬಿಬಿಎಂಪಿ ಮಾಹಿತಿ ನೀಡಿತು. ಬೈಲಾ ರೂಪಿಸುವ ಸಂಬಂಧ 1200 ಅರ್ಜಿಗಳು ಬಿಬಿಎಂಪಿಗೆ ಬಂದಿದ್ದವು. ಅದರಲ್ಲಿ 800 ಮಂದಿ ನೇರವಾಗಿ ಆಕ್ಷೇಪಣೆ ಸಲ್ಲಿಸುವುದಾಗಿ ಹೇಳಿದ್ದರು. ಬೈಲಾ ಹೊರಡಿಸಲು ಡಿಸೆಂಬರ್ 5ರಂದು ಸಾರ್ವಜನಿಕ ಸಭೆ ಮಾಡುತ್ತೇವೆ. 800 ಮಂದಿಯ ಜೊತೆ ಸಭೆ ನಡೆಸಿ ಮಾತನಾಡಿ ಬಳಿಕ ಬೈಲಾ ರೆಡಿ ಮಾಡಲಾಗುತ್ತದೆ. ಆನಂತರ ಅದನ್ನ ರಾಜ್ಯ ಸರಕಾರಕ್ಕೆ ಸಲ್ಲಿಸುವುದಾಗಿ ಬಿಬಿಎಂಪಿ ವಕೀಲರು ಕೋರ್ಟ್‌ಗೆ ಹೇಳಿದರು. ನಂತರ ವಿಚಾರಣೆಯನ್ನ ಡಿಸೆಂಬರ್ 4ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News