ಬಯಲು ಸೀಮೆ ಕೆರೆಗಳಿಗೆ ಹರಿಸುತ್ತಿರುವ ಕೆಸಿ ವ್ಯಾಲಿ ನೀರು ಯೋಗ್ಯವಾಗಿಲ್ಲ: ವಿಜ್ಞಾನಿಗಳ ಆತಂಕ
ಬೆಂಗಳೂರು, ಡಿ.1: ಕೆಸಿ ವ್ಯಾಲಿ ಮೂಲಕ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶದ ಕೆರೆಗಳಿಗೆ ಬಿಡುತ್ತಿರುವ ಬೆಂಗಳೂರಿನ ಸಂಸ್ಕರಿಸಿದ ತ್ಯಾಜ್ಯ ನೀರು ಯೋಗ್ಯವಾಗಿಲ್ಲ. ನೀರಿನ ಶುದ್ಧೀಕರಣದಲ್ಲಿ ಇನ್ನಷ್ಟು ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಹಿರಿಯ ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶನಿವಾರ ಯುವಶಕ್ತಿ ನಗರದ ಗಾಂಧಿ ಭವನದಲ್ಲಿ ಪರಿಸರವಾದಿ ಡಾ.ಎ.ಎನ್.ಯಲ್ಲಪ್ಪ ರೆಡ್ಡಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಬಯಲು ಸೀಮೆಯ ಕೆರೆಗಳಿಗೆ ಬೆಂಗಳೂರಿನ ಸಂಸ್ಕರಿಸಿದ ಬೆಂಗಳೂರಿನ ತ್ಯಾಜ್ಯ ನೀರು ಕುರಿತು ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು.
ಭೂ ವಿಜ್ಞಾನಿ ಡಾ.ವಿ.ಎಸ್.ಪ್ರಕಾಶ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ರಾಸಾಯನ ಶಾಸ್ತ್ರಜ್ಞೆ ಡಾ.ಶಶಿರೇಖಾ, ಭಾರತೀಯ ವಿಜ್ಞಾನ ಸಂಸ್ಥೆಯ ಮುಖ್ಯ ಸಂಶೋಧಕ ಡಾ.ಜೆ.ಆರ್.ಮುದಕವಿ ಸೇರಿದಂತೆ ಹಲವು ಹಿರಿಯ ವಿಜ್ಞಾನಿಗಳು ಭಾಗವಹಿಸಿ, ಬಿಡಬ್ಲೂಎಸ್‌ಎಸ್‌ಬಿ ಬೆಂಗಳೂರಿನ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಇನ್ನಷ್ಟು ವೈಜ್ಞಾನಿಕ ಕ್ರಮಗಳನ್ನು ಅನುಸರಿಸದೆ ಬಯಲು ಸೀಮೆ ಕೆರೆಗಳಿಗೆ ಬಿಡಬಾರದು ಎಂದು ಎಚ್ಚರಿಸಿದರು.
ಬಯಲು ಸೀಮೆ ಕೆರೆಗಳಿಗೆ ಬಿಡುತ್ತಿರುವ ಬೆಂಗಳೂರಿನ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಯಾವ, ಯಾವ ವಿಧಾನಗಳ ಮೂಲಕ ಸಂಸ್ಕರಿಸಲಾಗಿದೆ ಎಂಬುದರ ಬಗ್ಗೆ ಬಿಡಬ್ಲೂಎಸ್‌ಎಸ್‌ಬಿ ಪಾರದರ್ಶಕತೆಯನ್ನು ಪಾಲಿಸಿಲ್ಲ. ಹಾಗೂ ತ್ಯಾಜ್ಯ ನೀರನ್ನು ಯಾವ ರೀತಿಯಲ್ಲಿ ಸಂಸ್ಕರಿಸಬೇಕು, ಅದಕ್ಕೆ ಬೇಕಾದ ಆಧುನಿಕ ಸಲಕರಣೆಗಳು ಯಾವುವು ಎಂಬುದರ ಮಾಹಿತಿಯೂ ಇಲ್ಲ. ಹೀಗಾಗಿ ಬೆಂಗಳೂರಿನ ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ಸಂಸ್ಕರಿಸದೆ, ಏಕಾಏಕಿ ಬಿಡಲಾಗಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಹಿರಿಯ ಸಂಶೋಧಕ ಮುದಕವಿ ಆತಂಕ ವ್ಯಕ್ತಪಡಿಸಿದರು.
ಅಮೆರಿಕಾ, ಜಪಾನ್, ಜರ್ಮನಿ ದೇಶಗಳಲ್ಲಿ ನೀರಿನ ನಿರ್ವಹಣಾ ಕಾಮಗಾರಿ ಹಾಗೂ ಪೂರೈಕೆಯ ವ್ಯವಸ್ಥೆಯಲ್ಲಿ ಶೇ.50ರಷ್ಟು ಎಂಜಿನಿಯರ್‌ಗಳು ಇದ್ದರೆ, ಶೇ.50ರಷ್ಟು ವಿಜ್ಞಾನಿಗಳಿರುತ್ತಾರೆ. ಆದರೆ, ಭಾರತದಲ್ಲಿ ಶೇ.90ರಷ್ಟು ಎಂಜಿನಿಯರ್‌ಗಳೆ ಇದ್ದು, ವಿಜ್ಞಾನಿಗಳಿಗೆ ಅವಕಾಶವೆ ಕೊಡುವುದಿಲ್ಲ. ಹೀಗಾಗಿ ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ಏರುಪೇರು ಕಂಡುಬರುತ್ತಿದೆ ಎಂದು ಅವರು ಅಭಿಪ್ರಾಯಿಸಿದರು.
ಭೂ ವಿಜ್ಞಾನಿ ಡಾ.ವಿ.ಎಸ್.ಪ್ರಕಾಶ್ ಮಾತನಾಡಿ, ಸಂಸ್ಕರಿಸಿದ ತ್ಯಾಜ್ಯ ನೀರನ್ನು ಸಾರ್ವತ್ರಿಕವಾಗಿ ಬಳಸಲು ಬರುವುದಿಲ್ಲ. ಸಂಸ್ಕರಿಸಿದ ತ್ಯಾಜ್ಯ ನೀರು ಯಾವ ಪ್ರಮಾಣದಲ್ಲಿ ಶುದ್ಧೀಕರಣಗೊಂಡಿದೆ ಎಂಬುದು ಪ್ರಾಥಮಿಕ ಅಂಶವಾದರೆ, ಅದನ್ನು ಯಾವ ಪ್ರದೇಶಕ್ಕೆ ಕೊಡುತ್ತೇವೆ. ಅಲ್ಲಿನ ಭೂಪ್ರದೇಶದ ವಾತಾವರಣ ಹೇಗಿದೆ ಎಂಬುದನ್ನು ವೈಜ್ಞಾನಿಕವಾಗಿ ತಿಳಿಯದೆ, ತ್ಯಾಜ್ಯ ನೀರನ್ನು ಕೆರೆಗಳಿಗೆ ಹರಿಸುವುದು ಅವೈಜ್ಞಾನಿಕ ಎಂದು ಹೇಳಿದರು.
ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರದ ಅಂತರ್ ಜಲದ ಸ್ವರೂಪ ಹೇಗಿದೆ. ಕೆಸಿ ವ್ಯಾಲಿ ಮೂಲಕ ಬಿಡುವ ಸಂಸ್ಕರಿಸಿದ ತ್ಯಾಜ್ಯ ನೀರು ಅಂತರ್‌ಜಲಕ್ಕೆ ಹೋಗುವಾಗ ಆಗುವ ಪರಿಣಾಮಗಳೇನು. ಹಾಗೂ ಆ ಭಾಗದಲ್ಲಿ ಬೆಳೆಯುವ ಬೆಳೆಗಳಿಗೆ ಸಂಸ್ಕರಿಸಿದ ತ್ಯಾಜ್ಯ ನೀರಿನ ಬಳಕೆ ಯೋಗ್ಯವೆ ಎಂಬುದರ ಬಗ್ಗೆ ಸಂಶೋಧನೆಗಳು ನಡೆದಿಲ್ಲ. ಹೀಗಾಗಿ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಕೆರೆಗಳಿಗೆ ತುಂಬಿಸುವ ಮುನ್ನ ಹಲವು ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದರು. ಈ ವೇಳೆ ರಾಷ್ಟ್ರೀಯ ಜೀವ ವೈವಿಧ್ಯ ಪ್ರಾಧಿಕಾರದ ಸದಸ್ಯ ಡಾ.ಎಂ.ಕೆ.ರಮೇಶ್, ಪರಿಸರ ವಿಜ್ಞಾನಿ ಡಾ.ರಾಜ್‌ಮೋಹನ್, ನಿರ್ಮಲಾ ಗೌಡ ಮತ್ತಿತರರಿದ್ದರು.
ನೀರು ಕಾಯ್ದೆ ಜಾರಿಯಾಗಲಿ
ರಾಜ್ಯದಲ್ಲಿ ಕೆರೆ ನೀರು, ನದಿ ನೀರು, ಅಂತರ್‌ಜಲದ ನೀರನ್ನು ಹೇಗೆ ನಿರ್ವಹಿಸಬೇಕು ಎಂಬುದರ ಬಗ್ಗೆ ನೀತಿಯಿಲ್ಲ. ಇದರಿಂದ ನೀರಿನ ವಿಷಯದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಹೀಗಾಗಿ ನೀರಿನ ಸಮರ್ಪಕ ನಿರ್ವಹಣೆಗೆ ಸಂಬಂಧಿಸಿದಂತೆ ನೀರು ಕಾಯ್ದೆ ಜಾರಿಯಾಗಬೇಕಾದ ಅಗತ್ಯವಿದೆ. ಈ ಕುರಿತು ಕರಡು ಪ್ರತಿಯನ್ನು ಸಿದ್ಧಪಡಿಸಿ ಸಾರ್ವಜನಿಕ ಚರ್ಚೆಗೆ ಬಿಡಲಾಗುವುದು.
-ಡಾ.ಯಲ್ಲಪ್ಪ ರೆಡ್ಡಿ, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ
ಬಿಡಬ್ಲೂಎಸ್‌ಎಸ್‌ಬಿಯಲ್ಲಿ ನುರಿತ ರಸಾಯನ ಶಾಸ್ತ್ರಜ್ಞರಿಲ್ಲ. ಇದರಿಂದ ತ್ಯಾಜ್ಯ ನೀರಿನಲ್ಲಿ ಯಾವ, ಯಾವ ರಾಸಾಯನಿಕ ಅಂಶಗಳು ಮಿಶ್ರಣಗೊಂಡಿವೆ,ಇದನ್ನು ಹೋಗಲಾಡಿಸಲು ಅನುಸರಿಸಬೇಕಾದ ವಿಧಾನಗಳ್ಯಾವುವು ಎಂಬುದರ ಬಗ್ಗೆ ಪ್ರಾಥಮಿಕ ಜ್ಞಾನವಿಲ್ಲ. ಇಂತಹ ಸ್ಥಿತಿಯಲ್ಲಿ ಕೆ.ಸಿ.ವ್ಯಾಲಿ ಮೂಲಕ ಬೆಂಗಳೂರಿನ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಕೆರೆಗಳಿಗೆ ಬಿಡುವುದು ಸರಿಯಲ್ಲ.
-ಡಾ.ಜೆ.ಆರ್.ಮುದಕವಿ, ಹಿರಿಯ ಸಂಶೋಧಕ, ಭಾರತೀಯ ವಿಜ್ಞಾನ ಸಂಸ್ಥೆ