ಹೇಳುವ ವಿಧಾನಗಳಲ್ಲಿ ಸುಧಾರಣೆ

Update: 2018-12-02 07:01 GMT

ಅಧ್ಯಯನ ಮತ್ತು ಅರಿವು 

ಭಾಗ 8

►ಅನ್ವಯಗೊಳಿಸಲು ನೆರವಾಗಿ

ನಿರ್ಗಲಿಕೆಯ ಅಥವಾ ಡಿಸ್ಲೆಕ್ಸಿಯಾ ಇರುವ ಬಹುಪಾಲು ಮಕ್ಕಳಿಗೆ ಧ್ವನಿಗಳನ್ನು ಗುರುತಿಸುವುದರಲ್ಲಿ ಸಮಸ್ಯೆ ಇರುವುದು. ಪದಗಳಲ್ಲಿ ಉತ್ಪತ್ತಿಯಾಗುವ ಧ್ವನಿ ಅಥವಾ ಸ್ವರಗಳನ್ನು ಗುರುತಿಸಲು ಬಹಳಷ್ಟು ಕಷ್ಟಪಡುತ್ತಾರೆ. ಪದಗಳಲ್ಲಿ ಸ್ವರಗಳ ಮತ್ತು ಉಂಟಾಗುವ ಧ್ವನಿಗಳ ಪಾತ್ರವೇನು ಎಂಬುದನ್ನೇ ಗುರುತಿಸಲು ಆಗುವುದಿಲ್ಲ. ಅದು ತಾಯ್ನುಡಿಯಲ್ಲಾದರೂ, ಪ್ರಾದೇಶಿಕವಾಗಿ ಆಡುವ ಮಾತಿನಲ್ಲಾದರೂ ಅಥವಾ ಕಲಿಕೆಯ ಮಾಧ್ಯಮದ ಭಾಷೆಯಲ್ಲಾದರೂ ಆಗಬಹುದು. ಭಾರತದಲ್ಲಿ ಸಾಧಾರಣ ಇಂಗ್ಲಿಷ್ ಗೊತ್ತಿರುವ ವಯಸ್ಕರಿಗೂ ಕೂಡಾ (ಡಿಸ್ಲೆಕ್ಸಿಯಾ ಇಲ್ಲದಿದ್ದರೂ) ಹಾಲಿವುಡ್ ಸಿನೆಮಾ ನೋಡುವಾಗ ಇಂಗ್ಲಿಷ್ ಸಂಭಾಷಣೆಯು ದೀರ್ಘವಾಗಿದ್ದರೆ ಹೇಗೆ ಆಲಿಸಲು ಕಷ್ಟಪಡುತ್ತಾರೋ, ಹಾಗೇ ಈ ಮಕ್ಕಳಿಗೆ ಬೋಧನೆಯನ್ನು ಅಥವಾ ಸಾಮಾನ್ಯ ಸಂಭಾಷಣೆಯನ್ನು ಆಲಿಸಲು ಆಗುತ್ತಿರುತ್ತದೆ.

ಪ್ರಾಸದ ಧ್ವನಿಗಳು ಮತ್ತು ವಿವಿಧ ಬಗೆಯ ಧ್ವನಿಗಳು ಪದಗಳನ್ನು ಸಂಯೋಜಿಸುವ ರೀತಿಯೂ ಕೂಡ ಇವರಿಗೆ ಕಷ್ಟವಾಗುತ್ತದೆ. ಪದಗಳನ್ನು ಉಚ್ಚರಿಸುವ ಸ್ವರ ಮತ್ತು ಧ್ವನಿಗಳ ತುಣುಕುಗಳು ಯಾವ ರೀತಿಯಲ್ಲಿ ಪದವನ್ನು ಮಾಡುವುವು ಎಂಬುದೇ ಅವರಿಗೆ ತಿಳಿಯುವುದಿಲ್ಲ. ಧ್ವನಿಗಳ ಸಂಕೇತಗಳಿಗೂ ಮತ್ತು ಉಚ್ಚರಿಸುವ ಧ್ವನಿಗಳಿಗೂ ಯಾವ ರೀತಿಯಲ್ಲಿ ಸಂಪರ್ಕವನ್ನು ಕಲ್ಪಿಸಬೇಕು ಎಂಬುದರ ಸಮಸ್ಯೆ ಅವರದು.

ಸುಮ್ಮನೆ ಹಾಗೇ ಆಲೋಚಿಸಿ ನೋಡಿ, ಸಾಧಾರಣವಾಗಿ ಕನ್ನಡ ಮಾಧ್ಯಮದಲ್ಲಿ ಓದಿರುವ ನಮ್ಮಂಥವರು, ಇಂಗ್ಲಿಷನ್ನು ಅದೆಷ್ಟೇ ಚೆನ್ನಾಗಿ ಓದಿದ್ದರೂ, ಬರೆಯಲು ಬಂದರೂ ಇಂಗ್ಲಿಷ್ ಸಿನೆಮಾಗಳನ್ನು ನೋಡುವಾಗ, ಅವರು ನಿಧಾನವಾಗಿ ಪದಗಳನ್ನು ಬಿಡಿಸಿ ವಾಕ್ಯಗಳನ್ನು ಹೇಳಿದರೆ ತಿಳಿಯುವುದು. ಅದಲ್ಲದೇ ಅಮೆರಿಕನ್ ಉಚ್ಚಾರಣಾ ರೀತಿಯಲ್ಲಿ ಪಟಪಟನೆ ಮಾತುಗಳನ್ನಾಡಿಬಿಟ್ಟರೆ ಗ್ರಹಿಸಲು ಕಷ್ಟವಾಗುವುದು. ಅದೇ ಕಷ್ಟದ ಮಾದರಿ ಈ ನಿರ್ಗಲಿಕೆಯ ಮಕ್ಕಳಿಗೂ ಇರುವುದು. ಆದರೆ, ಈ ಲೇಖನದಲ್ಲಿ ನಾನು ಹೇಳುತ್ತಿರುವಂತೆ, ಅವರಿಗೆ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ. ‘‘ನಾನು ಕೇಳುತ್ತಿರುವ ಪದಗಳ ಅಕ್ಷರ ಸಂಕೇತಗಳಿಗೂ ಮತ್ತು ಅವುಗಳು ಹೊರಡುಸಿರುತ್ತಿರುವ ಧ್ವನಿಗೂ ಸಾಮ್ಯತೆಯನ್ನು ಗುರುತಿಸಲು ನನಗೆ ಸಾಧ್ಯವಾಗುತ್ತಿಲ್ಲ’’ ಎಂದು ಅವರು ಹೇಗೆ ಹೇಳಿಯಾರು?

►ಮಕ್ಕಳು ಭೌತಿಕವಾಗಿ ಮಾತ್ರ ವ್ಯಕ್ತಪಡಿಸಬಲ್ಲರು

ಒಂದು ವಿಷಯವನ್ನು ಸ್ಪಷ್ಟಗೊಳಿಸಿಕೊಳ್ಳೋಣ. ಮಕ್ಕಳು ತಮ್ಮ ಯಾವುದೇ ಸಮಸ್ಯೆಯನ್ನು ಭೌತಿಕವಾಗಿ ಹೇಳಲು ಸಾಧ್ಯವೇ ಹೊರತು, ಅದರ ಮೂಲ ಕಾರಣದ ಬಗ್ಗೆ ವಿಶ್ಲೇಷಿಸಿಕೊಂಡು ಹೇಳಲು ಸಾಧ್ಯವಿಲ್ಲ. ಮಕ್ಕಳಿಗೆ ತಮ್ಮ ಸಮಸ್ಯೆಗಳಿಗೆ ಏನು ಕಾರಣ ಎಂದೂ ತಿಳಿದಿರುವುದಿಲ್ಲ. ಅವುಗಳನ್ನು ನಾವೇ ನಾನಾ ವಿಧಾನಗಳಿಂದ ತಿಳಿದುಕೊಳ್ಳಬೇಕು. ಅವರು ಹೊರ ನೋಟಕ್ಕೆ, ಹೊರಾನುಭವಕ್ಕೆ ದಕ್ಕುವ ಸಮಸ್ಯೆಯನ್ನು ಮಾತ್ರ ವ್ಯಕ್ತಪಡಿಸಬಲ್ಲರು. ಆದರೆ ಅದಕ್ಕೆ ಕಾರಣವನ್ನು, ಅದರ ಪ್ರಭಾವಗಳನ್ನು ಮತ್ತು ಅದರಿಂದ ಉಂಟಾ ಗುವ ಪರಿಣಾಮಗಳನ್ನು ಪೋಷಕರು ಮತ್ತು ಶಿಕ್ಷಕರು ತಾವೇ ತಿಳಿಯಬೇಕು. ಸಮಸ್ಯೆಯ ಮೂಲ ಅಥವಾ ಕಾರಣವನ್ನು ತಿಳಿದುಕೊಂಡು ನಾವೇ ಅವರ ಸಮಸ್ಯೆಯನ್ನು ನಿವಾರಿಸುವ ಯೋಜನೆ ಮಾಡಬೇಕು. ಆಮೇಲೆ ಇನ್ನೊಂದು ವಿಷಯ, ಮಕ್ಕಳ ಯಾವುದೇ ಸಮಸ್ಯೆಯು ‘‘ಪ್ರಾಬ್ಲಮ್ ಸಾಲ್ವ್‌ಡ್’’ ಎಂಬಂತೆ ಒಮ್ಮಿಂದೊಮ್ಮೆಲೆ ತೀರಿಬಿಡುವುದಿಲ್ಲ. ಸಮಸ್ಯೆಯು ರೂಪು ಗೊಳ್ಳಲು ಹೇಗೆ ಒಂದು ಪ್ರಕ್ರಿಯೆಯು ಇದ್ದಿತ್ತೋ, ಅದರಂತೆಯೇ ಸಮಸ್ಯೆಯು ಪರಿಹಾರವಾಗಲೂ ಕೂಡಾ ಪ್ರಕ್ರಿಯೆಯು ಉಂಟಾಗಬೇಕು. ಕ್ರಿಯೆ ಮತ್ತು ಪ್ರತಿಕ್ರಿಯೆಗಳಿಂದ ನಡೆಯುವ ಕೆಲಸಗಳು ಮತ್ತು ಸನ್ನಿವೇಶಗಳು ಬಹಳಷ್ಟು ಇವೆ. ಆದರೆ, ಕಲಿಕೆಯ ಸಾಮರ್ಥ್ಯದ ಅಭಿವೃದ್ಧಿ, ಮನೋವಿಕಾಸ, ಬೌದ್ಧಿಕ ಬೆಳವಣಿಗೆಗಳು ಪ್ರಕ್ರಿಯೆಗಳ ಮೂಲಕ ನಡೆಯುವುದು.

►ಕರುಣೆಯಿಂದ ವರ್ತಿಸಿ

ಹಾಗಾಗಿಯೇ ಡಿಸ್ಲೆಕ್ಸಿಯಾ ಅಥವಾ ನಿರ್ಗಲಿಕೆಯ ಮಕ್ಕಳಿಗೆ, ಯಾವುದೇ ಬಗೆಯ ಕಲಿಕೆಯಲ್ಲಿ ನ್ಯೂನತೆಗಳಿರುವ ಮಕ್ಕಳನ್ನು ನಿಭಾಯಿಸುವ ಶಿಕ್ಷಕರು ಮತ್ತು ಪೋಷಕರು ಬಹಳ ಸಂಯಮದಿಂದಲೂ, ಕರುಣೆಯಿಂದಲೂ ಹಾಗೂ ವಾತ್ಸಲ್ಯದಿಂದಲೂ ಹೇಳಿಕೊಡಬೇಕು. ದೊಡ್ಡ ಮಕ್ಕಳಾಗಿದ್ದರೂ ಸಣ್ಣ ಸಣ್ಣ ಓದುವ ಪುಸ್ತಕಗಳಲ್ಲಿರುವ ಪದಗಳನ್ನು ಓದಲಾಗದೇ ಇರಬಹುದು. ಆಗ, ‘‘ಇಷ್ಟು ದೊಡ್ಡವನಾಗಿದ್ದೀಯಾ. ಇಷ್ಟು ಸಣ್ಣ ಪದವನ್ನು ಹೇಳಲು ಬಾರದೇ?’’ ಎಂದು ಕೇಳಬೇಡಿ. ಬರದೇ ಇರುವ ಕಾರಣದಿಂದಲೇ ಅವರಿಗೆ ಹೇಳಲು ಆಗುತ್ತಿಲ್ಲ ಎಂಬುದನ್ನು ನೆನಪಿನಲ್ಲಿಡೋಣ. ದೊಡ್ಡ ತರಗತಿಯ ಮಗುವನ್ನು ಸಣ್ಣ ತರಗತಿಯ ಮಗುವಿನ ಪುಸ್ತಕವನ್ನು ಕೊಟ್ಟರೆ ಲೀಲಾಜಾಲವಾಗಿ ಓದಿ ಬಿಸಾಡಿಬಿಡುತ್ತಾನೆ ಎಂಬ ಭ್ರಮೆ ಖಂಡಿತ ಬೇಡ. ಇದು ದೊಡ್ಡ ಮತ್ತು ಸಣ್ಣ ಮಕ್ಕಳ ಓದಿನ ಪುಸ್ತಕವೆಂಬ ಮಾನದಂಡದ ವಿಷಯವಲ್ಲ. ಓದುವ ಸಾಮರ್ಥ್ಯದಲ್ಲಿರುವ ಮೂಲ ದೋಷದ ವಿಷಯ. ಆದ್ದರಿಂದ ಹೈಸ್ಕೂಲ್‌ನಲ್ಲಿದ್ದೀಯ, ಪ್ರೈಮರಿ ಶಾಲೆಯ ಪುಸ್ತಕ ಓದಲು ಬಾರದೇ ಎಂದು ಎಂದಿಗೂ ಕೇಳುವುದು ಬೇಡ. ಆ ಮಗುವು ಪ್ರೈಮರಿಯಲ್ಲಿಯೂ ಹಾಗೇ ಇತ್ತು, ಹೈಸ್ಕೂಲಿನಲ್ಲಿಯೂ ಹಾಗೆಯೇ ಇದೆ. ಕಾರಣವೇನೆಂದರೆ, ಪೋಷಕರಾಗಲಿ, ಶಿಕ್ಷಕರಾಗಲಿ ಮಗುವಿಗೆ ಕಲಿಕೆಯ ನ್ಯೂನತೆ ಇದೆ ಅಥವಾ ನಿರ್ಗಲಿಕೆ ಇದೆ ಎಂದು ಗುರುತಿಸಲೇ ಇಲ್ಲ. ಬದಲಾಗಿ ಅವನು ಸೋಮಾರಿ, ಗಮನ ಕೊಡುವುದಿಲ್ಲ, ನೆನಪಿನ ಶಕ್ತಿ ಇಲ್ಲ, ಓದುವುದರಲ್ಲಿ ಆಸಕ್ತಿ ಇಲ್ಲ, ಇತ್ಯಾದಿಗಳ ಪಟ್ಟದಿಂದ ಅವನನ್ನು ಹಾಗೆಯೇ ಮುಂದೂಡಿಕೊಂಡು ಬಂದಿದ್ದಾರೆ.

►ಸರಳಗೊಳಿಸಿ ಅರ್ಥೈಸಿ

ಇಂತಹ ಮಕ್ಕಳಿಗೆ ಯೋಜನಾಬದ್ಧ ರಚನಾತ್ಮಕ ಬೋಧನಾ ಪದ್ಧತಿ ಅನುಸರಿಸದೆಯೇ ಬೇರೆ ದಾರಿಯೇ ಇಲ್ಲ. ಶಿಕ್ಷಕರ ಮತ್ತು ಪೋಷಕರ ಬಹುದೊಡ್ಡ ಸವಾಲೆಂದರೆ ಮಕ್ಕಳು ಓದಬೇಕಾಗಿರುವುದನ್ನು ಸರಳಗೊಳಿಸುವುದು. ಮಕ್ಕಳಿಗೆಂದು ಇರುವ ಪಠ್ಯವೇ ಸರಳ. ಮಕ್ಕಳಿಗಾಗಿಯೇ ಇರುವ ಪುಸ್ತಕಗಳು ಅಗಾಧವಾಗೇನೂ ಇರುವುದಿಲ್ಲ ಎಂಬ ಮಿಥ್ಯಾಕಲ್ಪನೆ ದೊಡ್ಡವರಿಗೆ ಇರುವುದು. ಸುಮ್ಮನೆ ಈ ವಿಷಯವನ್ನು ಅರ್ಥ ಮಾಡಿಕೊಳ್ಳಲು ಒಂದು ಉದಾಹರಣೆಯನ್ನು ಗಮನಕ್ಕೆ ತಂದುಕೊಳ್ಳೋಣ. ಸಂಶೋಧನಾ ಅಥವಾ ಅಧ್ಯಯನ ಪ್ರಧಾನವಾದ ಗ್ರಂಥಗಳು ಬರೀ ಸಾಮಾನ್ಯ ನ್ಯೂಸ್ ಪೇಪರ್ ಅಥವಾ ಸಣ್ಣ ಸಣ್ಣ ಕತೆ ಮತ್ತು ಕಾದಂಬರಿ ಓದುವವರಿಗೇನೂ ತಟ್ಟನೆ ಅರ್ಥವಾಗಿಬಿಡುವುದಿಲ್ಲ. ನ್ಯೂಸ್ ಪೇಪರಲ್ಲಿರುವ ಅಥವಾ ಸರಳ ಕತೆಗಳಲ್ಲಿರುವ ಅಕ್ಷರಗಳು ಮತ್ತು ಪದಗಳೇ ಈ ಸಂಶೋಧನಾ ಗ್ರಂಥಗಳಲ್ಲಿಯೂ ಕೂಡ ಇರುವವು. ಆದರೆ, ಅಧ್ಯಯನದ ಸಾಮಗ್ರಿಗಳ ಪರಿಚಯ ಕೊರತೆ, ಅಂತಹ ಪುಸ್ತಕಗಳನ್ನು ಓದಿಲ್ಲದೇ ಇರುವುದರಿಂದ ಸಾಲುಗಳನ್ನು ಗ್ರಹಿಸಲು ಕಷ್ಟಪಡುತ್ತಾರೆ. ಯಾವುದೋ ತಮಗೆ ತಿಳಿಯದೇ ಇರುವಂತಹ ಕ್ಷೇತ್ರದ ಬಗ್ಗೆ ಒಮ್ಮಿಂದೊಮ್ಮೆಲೇ ತಿಳಿಯಲು ಪ್ರಯತ್ನಿಸಿದಂತಾಗುತ್ತದೆ. ಅದೇ ರೀತಿಯಲ್ಲಿಯೇ ಮಕ್ಕಳಿಗೂ ಆಗುವುದು.

►ಸಿಂಧುವನ್ನು ಬಿಂದು ಬಿಂದುವಾಗಿಸಿ

‘‘ರೂಮಲ್ಲಿ ಕಬೋರ್ಡಲ್ಲಿ ಮೇಲೆ ಗ್ರಹಾಂಬೆಲ್‌ದು ಒಂದು ಪುಸ್ತಕ ಇದೆ ತಗೊಂಡು ಬಾ’’ ಎಂದುಬಿಟ್ಟರೆ ನಿರ್ಗಲಿಕೆಯ ಮಗುವಿಗೆ ತಟ್ಟನೆ ತಿಳಿಯದಿರಬಹುದು. ಅವನು ರೂಮಿಗೆ ಹೋಗುತ್ತಾನೆ. ಕಬೋರ್ಡನ್ನೂ ತೆಗೆಯ ಬಹುದು. ಮುಂದಿನದೆಲ್ಲಾ ಗೊಂದಲ. ಅವನು ಏನನ್ನೋ ತರಬಹುದು. ಅಥವಾ ಏನನ್ನೂ ತರದಿರಬಹುದು. ಅಂತಹ ಸಮಯದಲ್ಲಿ, ‘‘ಹೇಳಿದ ಒಂದು ಪುಸ್ತಕ ತರಕ್ಕಾಗಲ್ವಾ ನಿನಗೆ’’ ಎಂದು ಹೇಳುವುದರಿಂದ ಆ ಮಗುವಿನಲ್ಲಿ ಕೀಳರಿಮೆಯನ್ನೂ ಮತ್ತು ಮುಜುಗರವನ್ನು ಉಂಟುಮಾಡುವುದಷ್ಟೇ ದೊಡ್ಡವರ ಸಾಧನೆ. ಅದರ ಬದಲು, ‘‘ರೂಮಿಗೆ ಹೋಗು. ಅಲ್ಲಿ ಎದುರಿಗೆ ಇರುವ ಕಬೋರ್ಡ್ ತೆಗೆ. ಬಲಗಡೆ ಭಾಗದಲ್ಲಿ ಮೇಲೆ ಪುಸ್ತಕಗಳಿವೆ. ಅದರಲ್ಲಿ ಇಂತಾ (ಬಣ್ಣ, ಗಾತ್ರ, ಚಿತ್ರ ಏನನ್ನಾದರೂ ತಿಳಿಸಿ) ಪುಸ್ತಕವನ್ನು ತೆಗೆದುಕೊಂಡು ಬಾ’’ ಎಂದರೆ ಅವನಿಗೆ ಅರ್ಥವಾಗುತ್ತದೆ. ಒಂದು ವಿಷಯವನ್ನು ಚೆನ್ನಾಗಿ ತಿಳಿದುಕೊಳ್ಳೋಣ. ನಾವು ಯಾರಿಗಾದರೂ ಏನಾದರೂ ಹೇಳಿದರೆ ಅವರಿಗೆ ಅರ್ಥವಾಗಲಿಲ್ಲವೆಂದರೆ, ಒಂದೋ ನಾವೇ ಸರಿಯಾಗಿ ಹೇಳಿರುವುದಿಲ್ಲ ಅಥವಾ ನಾವು ಹೇಳುವುದನ್ನು ಅರ್ಥ ಮಾಡಿಕೊಳ್ಳಲು ಅವರಿಗೆ ಸಾಮರ್ಥ್ಯವಿರುವುದಿಲ್ಲ. ಈ ಎರಡೇ ಆಗಿರುವುದು. ದೊಡ್ಡವರಾಗಲಿ, ಸಣ್ಣವರಾಗಲಿ ಇದು ಸಾಮಾನ್ಯ. ಹಾಗಾಗಿ ಅವರಿಗೆ ಅರ್ಥ ಮಾಡಿಸಲು ನಾವು ಎರಡು ದಿಕ್ಕುಗಳಿಂದ ಪ್ರಯತ್ನಿಸಬೇಕು. ಒಂದು ಹೇಳಿಕೆಯ ಕ್ರಮದಲ್ಲಿ ಸುಧಾರಣೆಯನ್ನು ತಂದುಕೊಳ್ಳಬೇಕು. ಮತ್ತೊಂದು ಅವರಿಗೆ ಅರ್ಥ ಮಾಡಿಕೊಳ್ಳುವುರಲ್ಲಿ ಇರುವ ತೊಡಕನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಏನೇ ಆದರೂ ನಾವು ಹೇಳುವ ಕ್ರಮದಲ್ಲಿ ಸುಧಾರಣೆಯನ್ನು ಅಥವಾ ಬದಲಾವಣೆಯನ್ನು ತಂದುಕೊಳ್ಳುವುದಂತೂ ಅನಿವಾರ್ಯ. ಅದನ್ನು ತಪ್ಪಿಸಲು ಸಾಧ್ಯವೇ ಇಲ್ಲ. ನಮ್ಮ ಹೇಳಿಕೆ ಅರ್ಥವಾದ ಮೇಲೆ ನಂತರ ಅವರು ಅದನ್ನು ಒಪ್ಪುವುದು ಬಿಡುವುದು ಅವರ ನಿಲುವು ಮತ್ತು ಒಲವಿಗೆ ಸಂಬಂಧಪಟ್ಟಿದ್ದು. ಆದರೆ, ಅವರಿಗೆ ನಾವು ಅರ್ಥ ಮಾಡಿಸಲು ಅವರನ್ನು ದೂರಲು ಸಾಧ್ಯವೇ ಇಲ್ಲ. ನಮ್ಮ ಹೇಳಿಕೆಯ ರೀತಿ ಮತ್ತು ನೀತಿಗಳಲ್ಲಿ ಬದಲಾವಣೆ ಮತ್ತು ಸುಧಾರಣೆಗಳನ್ನು ಮಾಡಿಕೊಳ್ಳಲೇಬೇಕು. ನಾನು ಎಷ್ಟು ಹೇಳಿದರೂ ಇವನಿಗೆ ಅರ್ಥವೇ ಆಗುತ್ತಿಲ್ಲ. ತಲೆಗೆ ಹೋಗುತ್ತಿಲ್ಲ ಎಂದು ಯಾರಾದರೂ ದೂರಿದ್ದೇ ಆದರೆ ತಕ್ಷಣವೇ ತಿಳಿದುಕೊಳ್ಳಿ ಹೇಳುವವರು ತಮ್ಮ ಹೇಳುವ ವಿಧಾನದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಕೊಂಡಿಲ್ಲ. ತಮ್ಮ ಹೇಳುವ ಕ್ರಮವನ್ನು ಸುಧಾರಣೆ ಮಾಡಿಕೊಂಡಿಲ್ಲ ಎಂದು. ಮಕ್ಕಳಿಗೆ ವಿಷಯಗಳನ್ನು ಹೇಳುವುದರಲ್ಲಿ ಮತ್ತು ಅರ್ಥ ಮಾಡಿಸುವ ಕೆಲಸದಲ್ಲಿ ಶಿಕ್ಷಕರು ಮತ್ತು ಪೋಷಕರು ‘ಹೇಳುವ ವಿಷಯವನ್ನು ಭಾಗ ಭಾಗಗಳಾಗಿ ವಿಭಾಗಿಸಿ ಸರಳಗೊಳಿಸುವ’ ಕೆಲಸದಲ್ಲಿ ನಿಷ್ಣಾತರಾಗಿರಬೇಕು. ಅವರು ಎಷ್ಟು ಜ್ಞಾನಿಗಳಾಗಿದ್ದಾರೆ ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಸರಳಗೊಳಿಸುವಿಕೆಯಲ್ಲಿ ತಜ್ಞರಾಗಿದ್ದಾರೆಯೋ ಇಲ್ಲವೋ ಎಂಬುದರ ಬಗ್ಗೆ ಮಾತ್ರವೇ ಅವಗಾಹನೆಗೆ ತಂದುಕೊಳ್ಳಬೇಕು. ನಿಜವಾಗಿಯೂ ಅವರ ಪ್ರಬುದ್ಧ ಜ್ಞಾನ ಮುಖ್ಯವಲ್ಲ. ಸರಳಗೊಳಿಸುವ ತಂತ್ರಗಾರಿಕೆಯೇ ಮಾತ್ರವೇ ಶಿಕ್ಷಣದಲ್ಲಿ ಪ್ರಧಾನ ಪಾತ್ರವಹಿಸುವುದು. ಈ ನಿರ್ಗಲಿಕೆಯ ಮಕ್ಕಳಿಗೆ ಹೇಳಿಕೊಡುವ ಶಿಕ್ಷಣ ಸಂಸ್ಥೆಗಳು ತರಗತಿಯಲ್ಲಿ ಬೋಧನೆ ಮಾಡುವ ಶಿಕ್ಷಕರನ್ನು ಮಾತ್ರವಲ್ಲದೇ ಯಾರ್ಯಾರನ್ನೆಲ್ಲಾ ಗಮನದಲ್ಲಿಟ್ಟುಕೊಳ್ಳಬೇಕೆಂದರೆ, ಸಮಾಲೋಚಕರು, ಚಿಕಿತ್ಸಕರು, ಮಾರ್ಗದರ್ಶಿಗಳು ಕೂಡಾ. ಆದರೆ, ಶಿಕ್ಷಣ ಸಂಸ್ಥೆಗಳಿಗೆ ಇವುಗಳ ಪರಿವೆಯೇ ಇಲ್ಲದೇ ಬರಿಯ ಉಪಾಧ್ಯಾಯರಿಗೆ ಮಾತ್ರ ಮಾನ್ಯತೆ ಕೊಡುವುದು ನಮ್ಮ ಶಿಕ್ಷಣ ವ್ಯವಸ್ಥೆಯ ದುರಂತ.

Writer - ಯೋಗೇಶ್ ಮಾಸ್ಟರ್

contributor

Editor - ಯೋಗೇಶ್ ಮಾಸ್ಟರ್

contributor

Similar News