ದೀವಿ ಹಲಸು ಅಥವಾ ಜೀಗುಜ್ಜೆಯ ಆರೋಗ್ಯಲಾಭಗಳು ಗೊತ್ತೇ.....?

Update: 2018-12-02 11:17 GMT

ಬ್ರೆಡ್ ಫ್ರುಟ್ ಅಥವಾ ದೀವಿ ಹಲಸು(ಜೀಗುಜ್ಜೆ) ಹಲವಾರು ಪೌಷ್ಟಿಕಾಂಶಗಳನ್ನು ಹೊಂದಿದ್ದು,ನಮ್ಮ ಶರೀರಕ್ಕೆ ಬಹಳಷ್ಟು ಆರೋಗ್ಯಲಾಭಗಳನ್ನು ನೀಡುತ್ತದೆ.

►ಅದು ರಕ್ತದೊತ್ತಡವನ್ನು ಕ್ರಮಬದ್ಧಗೊಳಿಸುತ್ತದೆ

ದೀವಿ ಹಲಸು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ರಕ್ತದೊತ್ತಡವನ್ನು ಕ್ರಮಬದ್ಧಗೊಳಿಸುತ್ತದೆ. ಮುಖ್ಯವಾಗಿ ಅದರ ಎಲೆಗಳಲ್ಲಿ ಈ ಗುಣವಿದ್ದು, ಸಾಂಪ್ರದಾಯಿಕವಾಗಿ ರಕ್ತದೊತ್ತಡವನ್ನು ನಿಯಂತ್ರಿಸಲು ಇವು ಬಳಕೆಯಾಗುತ್ತಿವೆ. ಅಲ್ಲದೆ ದೀವಿ ಹಲಸಿನ ತಿರುಳಿನಲ್ಲಿ 490 ಎಂಜಿ ಪೊಟ್ಯಾಷಿಯಂ ಮತ್ತು ಕೇವಲ 2 ಎಂಜಿ ಸೋಡಿಯಂ ಇರುತ್ತದೆ. ಸಮೃದ್ಧ ಪ್ರಮಾಣದಲ್ಲಿರುವ ಪೊಟ್ಯಾಷಿಯಂ ಅಧಿಕ ರಕ್ತದೊತ್ತಡ ರೋಗಿಗಳಲ್ಲಿ ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ. ಪೊಟ್ಯಾಷಿಯಂ ಜೊತೆ ಕಡಿಮೆ ಸೋಡಿಯಂ ಅನುಪಾತವಿರುವುದರಿಂದ ರಕ್ತದೊತ್ತಡವನ್ನು ಕ್ರಮಬದ್ಧಗೊಳಿಸಲೂ ನೆರವಾಗುತ್ತದೆ.

►ದೇಹತೂಕ ಇಳಿಸಲು ನೆರವಾಗುತ್ತದೆ

ಇದರಲ್ಲಿ ಅಧಿಕ ಪ್ರಮಾಣದಲ್ಲಿರುವ ನಾರು ಹೊಟ್ಟೆ ತುಂಬಿದ ಅನುಭವವನ್ನುಂಟು ಮಾಡುತ್ತದೆ ಮತ್ತು ಇದರಿಂದಾಗಿ ನಾವು ಸೇವಿಸುವ ಊಟದ ಪ್ರಮಾಣ ಕಡಿಮೆಯಾಗುತ್ತದೆ. ಇದು ದೇಹತೂಕವನ್ನು ಇಳಿಸಿಕೊಳ್ಳಲು ಪೂರಕವಾಗುತ್ತದೆ. ಅಲ್ಲದೆ ದೀವಿ ಹಲಸಿನಲ್ಲಿ ಕೊಬ್ಬು ಮತ್ತು ಕ್ಯಾಲರಿಗಳು ಕಡಿಮೆ ಪ್ರಮಾಣದಲ್ಲಿ ಹಾಗೂ ಪ್ರೋಟಿನ್ ಹೆಚ್ಚಿನ ಪ್ರಮಾಣದಲ್ಲಿರುವುದು ಮಾಂಸಖಂಡಗಳ ಬೆಳವಣಿಗೆಗೆ ನೆರವಾಗುತ್ತದೆ. ಕೊಬ್ಬು ಸಂಗ್ರಹವಾಗುವುದನ್ನೂ ಇದು ತಡೆಯುತ್ತದೆ.

►ಕ್ಯಾನ್ಸರ್ ಜೀವಕೋಶಗಳ ಚಟುವಟಿಕೆಯನ್ನು ತಡೆಯುತ್ತದೆ

ದೀವಿ ಹಲಸಿನಲ್ಲಿರುವ ಫೈಟೊಕೆಮಿಕಲ್‌ಗಳು ಕ್ಯಾನ್ಸರ್ ಜೀವಕೋಶಗಳ ಚಟುವಟಿಕೆಗಳಿಗೆ ಕಡಿವಾಣ ಹಾಕುತ್ತವೆ. ಇದಕ್ಕಾಗಿ ದೀವಿ ಹಲಸನ್ನು ನಿಯಮಿತವಾಗಿ ಸಾಕಷ್ಟು ಪ್ರಮಾಣದಲ್ಲಿ ಸೇವಿಸುತ್ತಿರಬೇಕು.

►ಶಕ್ತಿಯನ್ನು ಹೆಚ್ಚಿಸುತ್ತದೆ

100 ಗ್ರಾಂ ಬೀಜರಹಿತ/ಕಚ್ಚಾ ದೀವಿಹಲಸಿನ ಸೇವನೆಯು ನಮ್ಮ ಶರೀರಕ್ಕೆ 103 ಕೆಸಿಎಎಲ್(ಕಿಲೊಕ್ಯಾಲರಿ) ಶಕ್ತಿಯನ್ನು ಮತ್ತು ಬೀಜಸಹಿತ/ಹುರಿದ ದೀವಿಹಲಸು 207 ಕೆಸಿಎಎಲ್ ಶಕ್ತಿಯನ್ನು ನೀಡುತ್ತವೆ. ಅದರಲ್ಲಿರುವ 27.12 ಗ್ರಾಂ ಕಾರ್ಬೊಹೈಡ್ರೇಟ್,4.9 ಗ್ರಾಂ ನಾರು,11 ಗ್ರಾಂ ಸಕ್ಕರೆ ಮತ್ತು ರಿಬೊಫ್ಲಾವಿನ್‌ನಂತಹ ಘಟಕಗಳು ಸೇರಿಕೊಂಡು ಕ್ಯಾಲರಿಗಳನ್ನು ಒದಗಿಸುತ್ತವೆ ಮತ್ತು ಅದನ್ನು ಶಕ್ತಿಯ ಅತ್ಯುತ್ತಮ ಮೂಲವನ್ನಾಗಿಸಿವೆ.

►ಹೊಟ್ಟನ್ನು ನಿವಾರಿಸುತ್ತದೆ ಮತ್ತು ಕೂದಲುದುರುವುದನ್ನು ನಿಯಂತ್ರಿಸುತ್ತದೆ

ದೀವಿ ಹಲಸಿನಲ್ಲಿ ವಿಟಾಮಿನ್‌ಗಳು ಮತ್ತು ಖನಿಜಗಳು ಸಮೃದ್ಧವಾಗಿದ್ದು, ಒಮೆಗಾ-3 ಹಾಗೂ ಒಮೆಗಾ-6 ಫ್ಯಾಟಿ ಆ್ಯಸಿಡ್‌ಗಳು ಸಾಕಷ್ಟು ಪ್ರಮಾಣದಲ್ಲಿವೆ. ಇವು ತಲೆಗೂದಲಿನ ಬೆಳವಣಿಗೆಗೆ ನೆರವಾಗುವ ಜೊತೆಗೆ ಅವುಗಳನ್ನು ಸದೃಢಗೊಳಿಸುತ್ತವೆ. ಒಮೆಗಾ ಫ್ಯಾಟಿ ಆ್ಯಸಿಡ್‌ಗಳು ಚರ್ಮದಲ್ಲಿಯ ಹೊಟ್ಟನ್ನು ಕಡಿಮೆ ಮಾಡುವಲ್ಲಿಯೂ ನೆರವಾಗುತ್ತವೆ.

►ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ

ದೀವಿ ಹಲಸಿನಲ್ಲಿ ಪೊಟ್ಯಾಷಿಯಂ,ನಾರು ಮತ್ತು ಇತರ ಹೃದಯ ಸ್ನೇಹಿ ಸಂಯುಕ್ತಗಳು ಸಮೃದ್ಧವಾಗಿದ್ದು,ಇವು ಶರೀರದ ವಿವಿಧ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಒಟ್ಟಾರೆಯಾಗಿ ಹೃದಯ ರಕ್ತನಾಳ ವ್ಯವಸ್ಥೆಯ ಆರೋಗ್ಯವನ್ನು ಕಾಯ್ದುಕೊಳ್ಳುತ್ತವೆ. ಇದರ ಸೇವನೆಯು ಕೊಲೆಸ್ಟ್ರಾಲ್‌ನ್ನ್ನು ಕಡಿಮೆಗೊಳಿಸುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

►ಉತ್ಕರ್ಷಣಶೀಲ ಒತ್ತಡವನ್ನು ತಗ್ಗಿಸುತ್ತದೆ

ಶರೀರದಲ್ಲಿ ಫ್ರೀ ರ್ಯಾಡಿಕಲ್‌ಗಳ ಉತ್ಪಾದನೆ ಮತ್ತು ಉತ್ಕರ್ಷಣ ನಿರೋಧಕಗಳ ಮೂಲಕ ಇವುಗಳನ್ನು ನಿವಾರಿಸುವಲ್ಲಿ ಶರೀರದ ಅಸಾಮರ್ಥ್ಯದ ನಡುವೆ ಅಸಮತೋಲನವುಂಟಾದಾಗ ಅದು ಉತ್ಕರ್ಷಣಶೀಲ ಒತ್ತಡವನ್ನುಂಟು ಮಾಡುತ್ತದೆ. ಇದನ್ನು ಸಕಾಲದಲ್ಲಿ ನಿಯಂತ್ರಿಸದಿದ್ದರೆ ಹೆಚ್ಚು ಗಂಭೀರ ಸ್ಥಿತಿಗೆ ಕಾರಣವಾಗಬಹುದು. ದೀವಿ ಹಲಸು ಶರೀರದ ಉತ್ಕರ್ಷಣ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಉತ್ಕರ್ಷಣಶೀಲ ಒತ್ತಡವನ್ನು ನಿವಾರಿಸಲು ಮತ್ತು ನಿಯಂತ್ರಿಸಲು ನೆರವಾಗುತ್ತದೆ.

►ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ

ಈಗಾಗಲೇ ಹೇಳಿರುವಂತೆ ದೀವಿ ಹಲಸಿನಲ್ಲಿರುವ ಒಮೆಗಾ-3 ಮತ್ತು ಒಮೆಗಾ-6 ಫ್ಯಾಟಿ ಆ್ಯಸಿಡ್‌ಗಳು ನಮ್ಮ ಚರ್ಮ ಮತ್ತು ತಲೆಗೂದಲಿನ ಆರೋಗ್ಯದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಅಲ್ಲದೆ ಅದರಲ್ಲಿರುವ ವಿಟಾಮಿನ್ ಸಿ ಕೂಡ ಆರೋಗ್ಯಯುತ ಚರ್ಮಕ್ಕೆ ಅಗತ್ಯವಾಗಿದೆ. ಅದರಲ್ಲಿಯ ಉತ್ಕರ್ಷಣ ನಿರೋಧಕಗಳು ಚರ್ಮದ ಸೋಂಕುಗಳನ್ನು ತಡೆಯಲು ನೆರವಾಗುತ್ತವೆ.

►ನಿದ್ರಾಹೀನತೆಯನ್ನು ತಡೆಯಲು ನೆರವಾಗುತ್ತದೆ

100 ಗ್ರಾಂ ದೀವಿ ಹಲಸಿನಲ್ಲಿ 25 ಎಂಜಿ ಮ್ಯಾಗ್ನೀಷಿಯಂ ಇರುತ್ತದೆ ಮತ್ತು ಇದು ನಮಗೆ ಉತ್ತಮ ನಿದ್ರೆ ಬರುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ಹೊಂದಿದೆ. ಅಲ್ಲದೆ ದೀವಿ ಹಲಸು ತನ್ನ ಒತ್ತಡವನ್ನು ತಗ್ಗಿಸುವ ಗುಣದಿಂದಾಗಿ ನಿದ್ರೆಯ ಗುಣಮಟ್ಟವನ್ನು ಉತ್ತಮಗೊಳಿಸುತ್ತದೆ.

►ಮಿದುಳಿನ ಕಾರ್ಯವನ್ನು ಉತ್ತಮಗೊಳಿಸುತ್ತದೆ

ಮಿದುಳು ಸೂಕ್ತವಾಗಿ ಕಾರ್ಯ ನಿರ್ವಹಿಸಲು ನಮ್ಮ ಶರೀರಕ್ಕೆ ವಿವಿಧ ವಿಟಾಮಿನ್‌ಗಳು,ಖನಿಜಗಳು ಮತ್ತು ಸಂಯುಕ್ತಗಳ ಅಗತ್ಯವಿದೆ. ದೀವಿ ಹಲಸು ಮಿದುಳಿನ ಕಾರ್ಯ ನಿರ್ವಹಣೆಗೆ ಮತ್ತು ಶರೀರ ಒಟ್ಟಾರೆ ಆರೋಗ್ಯಕ್ಕೆ ಅತ್ಯಗ್ಯವಾಗಿರುವ ಪೊಟ್ಯಾಷಿಯಂ, ಅಲ್ಝೀಮರ್ಸ್ ಕಾಯಿಲೆಯ ಅಪಾಯವನ್ನು ತಗ್ಗಿಸುವ ಫಾಲೇಟ್‌ನಂತಹ ವಿವಿಧ ಪೌಷ್ಟಿಕಾಂಶಗಳು ಹಾಗೂ ಮಿದುಳಿನ ಸೂಕ್ತ ಕಾರ್ಯನಿರ್ವಹಣೆಯೊಂದಿಗೆ ನೇರವಾಗಿ ಮತ್ತು ಪರೋಕ್ಷವಾಗಿ ಗುರುತಿಸಿಕೊಂಡಿರುವ ಇತರ ವಿಟಾಮಿನ್‌ಗಳು ಮತ್ತು ಖನಿಜಗಳನ್ನು ಒಳಗೊಂಡಿದೆ.

 ►ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ದೀವಿ ಹಲಸಿನಲ್ಲಿ ಸಾಕಷ್ಟು ಪ್ರಮಾಣದಲ್ಲಿರುವ ನಾರು ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ. ನಾರು ಮಲಬದ್ಧತೆಯನ್ನ್ನು ತಡೆಯುವ ಮೂಲಕ ದೊಡ್ಡಕರುಳಿನ ಅಪಾಯವನ್ನು ದೂರ ಮಾಡುತ್ತದೆ.

►ಹಲ್ಲುಗಳ ಆರೋಗ್ಯವನ್ನು ಹೆಚ್ಚಿಸುತ್ತದೆ

ದೀವಿ ಹಲಸಿನ ಮರದಲ್ಲಿ ಬಿಡುವ ಹೂವನ್ನು ಹಲ್ಲುನೋವನ್ನು ನಿವಾರಿಸಲು ಬಳಸಲಾಗುತ್ತದೆ. ಅಲ್ಲದೆ ದೀವಿ ಹಲಸಿನಲ್ಲಿರುವ ಕ್ಯಾಲ್ಸಿಯಂ ಹಲ್ಲುಗಳ ಒಟ್ಟಾರೆ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

►ಮಧುಮೇಹವನ್ನು ನಿಯಂತ್ರಿಸುತ್ತದೆ

ದೀವಿ ಹಲಸು ಟೈಪ್ 2 ಮಧುಮೇಹವನ್ನು ನಿಯಂತ್ರಿಸಲು ನೆರವಾಗುತ್ತದೆ ಎನ್ನುವುದನ್ನು ವಿವಿಧ ವೈಜ್ಞಾನಿಕ ಅಧ್ಯಯನಗಳು ದೃಢಪಡಿಸಿವೆ. ಅದು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವುದು ಇದಕ್ಕೆ ಕಾರಣಗಳಲ್ಲೊಂದಾಗಿದೆ. ರಕ್ತದಲ್ಲಿ ಗ್ಲುಕೋಸ್ ಮಟ್ಟವನ್ನು ತಗ್ಗಿಸುವ ಜೊತೆಗೆ ಗ್ಲುಕೋಸ್ ಸಹಿಷ್ಣುತೆಯನ್ನು ಹೆಚ್ಚಿಸುವ ಮೂಲಕ ಮಧುಮೇಹವನ್ನು ನಿಯಂತ್ರಿಸಲು ನೆರವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News