ಅಡಿಲೇಡ್ ನಲ್ಲಿ ಭಾರತಕ್ಕೆ ಎದುರಾಗಲಿದೆ ಅಗ್ನಿಪರೀಕ್ಷೆ

Update: 2018-12-02 18:47 GMT

ಸಿಡ್ನಿ, ಡಿ.2: ಡಿಸೆಂಬರ್ 6ರಿಂದ ಅಡಿಲೇಡ್ ಓವಲ್‌ನಲ್ಲಿ ಆಸ್ಟ್ರೇಲಿಯ- ಭಾರತ ಟೆಸ್ಟ್ ಸರಣಿಯ ಮೊದಲ ಪಂದ್ಯ ಆರಂಭವಾಗಲಿದ್ದು, ಭಾರತ ಇಲ್ಲಿ ಗೆಲುವನ್ನು ಎದುರು ನೋಡುತ್ತಿದೆ. ಆದರೆ ಈ ಅಂಗಣದಲ್ಲಿ ಆತಿಥೇಯರ ಸ್ಪಿನ್ನರ್ ನಥಾನ್ ಲಿಯೊನ್ ಪ್ರವಾಸಿ ತಂಡದೆದುರು ಉತ್ತಮ ಸಾಧನೆ ತೋರಿದ್ದು, ಭಾರತೀಯರಿಗೆ ಅಗ್ನಿಪರೀಕ್ಷೆ ಒಡ್ಡುವ ಸಾಧ್ಯತೆಯಿದೆ . ಉತ್ತಮ ಆರಂಭ ಸಿಕ್ಕರೆ ಅರ್ಧ ಗೆಲುವು ಸಾಧಿಸಿದಂತೆ ಎಂಬ ಮಾತಿನಂತೆ ಭಾರತ ತನ್ನ ಆರಂಭಿಕ ಜೋಡಿಯಿಂದ ಉತ್ತಮ ಆರಂಭಿಕ ಜೊತೆಯಾಟವನ್ನು ನಿರೀಕ್ಷಿಸುತ್ತಿದೆ. ಆದರೆ ಅಡಿಲೇಡ್ ಓವಲ್‌ನಲ್ಲಿ ಭಾರತ ಕ್ರಿಕೆಟ್ ತಂಡದ ಸಾಧನೆ ಗಮನಾರ್ಹವಾಗಿಲ್ಲ ಎಂಬುದು ಅಂಕಿಅಂಶದಿಂದ ತಿಳಿದು ಬರುತ್ತಿದೆ. 2014ರ ಟೆಸ್ಟ್ ಸರಣಿಯ ಆರಂಭಿಕ ಪಂದ್ಯವೂ ಇದೇ ಕ್ರೀಡಾಂಗಣದಲ್ಲಿ ನಡೆದಿದ್ದು ಆರಂಭಿಕ ಮುನ್ನಡೆಯನ್ನು ಕಾಯ್ದುಕೊಳ್ಳುವಲ್ಲಿ ವಿಫಲವಾಗಿದ್ದ ಭಾರತೀಯರು ಅಂತಿಮವಾಗಿ 48 ರನ್‌ಗಳಿಂದ ಸೋಲನುಭವಿಸಿದ್ದರು. ಒಂದು ಹಂತದಲ್ಲಿ ಗೆಲುವಿನ ಹಾದಿಯಲ್ಲಿದ್ದ ಭಾರತ, ಬಳಿಕ 8 ವಿಕೆಟ್‌ಗಳನ್ನು ಕೇವಲ 73 ರನ್‌ಗಳಿಗೆ ಕಳೆದುಕೊಳ್ಳುವ ಮೂಲಕ ಪಂದ್ಯವನ್ನೂ ಕಳೆದುಕೊಂಡಿತ್ತು. ಈ ಪಂದ್ಯದಲ್ಲಿ ಆಸ್ಟ್ರೇಲಿಯದ ಸ್ಪಿನ್ನರ್ ನಥಾನ್ ಲಿಯೊನ್ ಆತಿಥೇಯರ ಪಾಲಿಗೆ ಗೆಲುವಿನ ರೂವಾರಿಯಾಗಿ ಮೂಡಿ ಬಂದಿದ್ದರು. ಭಾರತದ ದ್ವಿತೀಯ ಇನ್ನಿಂಗ್ಸ್‌ನಲ್ಲಿ 7 ವಿಕೆಟ್‌ಗಳನ್ನು ಉರುಳಿಸಿದ್ದ ಲಿಯೊನ್, ಪಂದ್ಯದಲ್ಲಿ ಒಟ್ಟು 12 ವಿಕೆಟ್‌ಗಳನ್ನು ಉರುಳಿಸಿ ಆತಿಥೇಯರು 1-0 ಮುನ್ನಡೆ ಪಡೆಯಲು ಕಾರಣರಾಗಿದ್ದರು. ಇದೀಗ ಈ ಸರಣಿಯಲ್ಲೂ ಭಾರತಕ್ಕೆ ಲಿಯೊನ್ ಸಿಂಹಸ್ವಪ್ನವಾಗಿ ಕಾಡುವ ನಿರೀಕ್ಷೆಯಿದೆ. ಆಸ್ಟ್ರೇಲಿಯ ತಂಡದಲ್ಲಿರುವ ಅತ್ಯಂತ ಅನುಭವಿ ಆಟಗಾರನಾಗಿರುವ ಲಿಯೊನ್, ಟೆಸ್ಟ್‌ನಲ್ಲಿ ಇದುವರೆಗೆ 15 ಆಟಗಾರರನ್ನು ಐದಕ್ಕೂ ಹೆಚ್ಚು ಬಾರಿ ಔಟ್ ಮಾಡಿದ್ದು ಇವರಲ್ಲಿ ಐದು ಮಂದಿ ಭಾರತೀಯರು. ಇವರಲ್ಲಿ ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ವಿರಾಟ್ ಕೊಹ್ಲಿ ಸೇರಿದ್ದಾರೆ. ಪೂಜಾರರನ್ನು 7 ಬಾರಿ, ರಹಾನೆಯನ್ನು ಆರು ಬಾರಿ, ಕೊಹ್ಲಿಯನ್ನು ಐದು ಬಾರಿ ಲಿಯೊನ್ ಪೆವಿಲಿಯನ್‌ಗೆ ಕಳುಹಿಸಿದ್ದಾರೆ. ಸ್ವದೇಶದಲ್ಲಿ ಭಾರತದೆದುರು ಲಿಯೊನ್ ಸಾಧನೆ ಅತ್ಯುತ್ತಮವಾಗಿದ್ದು 30 ವಿಕೆಟ್ ಉರುಳಿಸಿದ್ದಾರೆ. ತನ್ನ ತವರೂರ ಮೈದಾನವಾಗಿರುವ ಅಡಿಲೇಡ್ ಓವಲ್‌ನಲ್ಲಿ ಲಿಯೊನ್ ಕೇವಲ 7 ಪಂದ್ಯಗಳಲ್ಲಿ 37 ವಿಕೆಟ್ ಉರುಳಿಸಿದ್ದಾರೆ. ಇಲ್ಲಿ ಬೌಲಿಂಗ್ ಮಾಡಿದ ಎಲ್ಲಾ ಇನ್ನಿಂಗ್ಸ್‌ಗಳಲ್ಲೂ ವಿಕೆಟ್ ಪಡೆದ ಸಾಧನೆ ಇವರದ್ದು. ಇಲ್ಲಿ 3 ಅಥವಾ ಹೆಚ್ಚು ವಿಕೆಟ್‌ಗಳನ್ನು ಆರು ಬಾರಿ ಉರುಳಿಸಿರುವ ಲಿಯೊನ್‌ರನ್ನು ಸಮರ್ಥವಾಗಿ ಎದುರಿಸಲು ಭಾರತೀಯರು ಶಕ್ತರಾದರೆ ಸರಣಿಯಲ್ಲಿ ಶುಭಾರಂಭ ಮಾಡಲು ಸಾಧ್ಯವಾದೀತು ಎನ್ನುವುದು ಕ್ರಿಕೆಟ್ ಪಂಡಿತರ ಅಭಿಪ್ರಾಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News