ಡಿ.7ರಂದು ಮೇಕೆದಾಟು ಯೋಜನೆ ಸ್ಥಳ ಪರಿಶೀಲನೆ: ಡಿ.ಕೆ.ಶಿವಕುಮಾರ್

Update: 2018-12-03 15:09 GMT

ಬೆಂಗಳೂರು, ಡಿ.3: ಮೇಕೆದಾಟು ಯೋಜನೆಗೆ ಡಿಪಿಆರ್ ಸಿದ್ಧಪಡಿಸಲು ಕೇಂದ್ರ ಜಲ ಆಯೋಗ ಅನುಮತಿ ನೀಡಿದ್ದು, ಡಿ.7ರಂದು ಅರಣ್ಯ ಇಲಾಖೆ, ಕಂದಾಯ ಇಲಾಖೆ, ಆರ್ಥಿಕ ಇಲಾಖೆಯ ಅಧಿಕಾರಿಗಳು, ತಜ್ಞರ ಜೊತೆ ಮೇಕೆದಾಟಿಗೆ ಹೋಗಿ ಪರಿಶೀಲನೆ ನಡೆಸಲಿದ್ದೇನೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೇಕೆದಾಟು ಬಳಿಕ ಶಿವನ ಸಮುದ್ರಕ್ಕೆ ಭೇಟಿ ನೀಡಿ, ಯೋಜನೆಯ ಕೊನೆಯ ಸ್ಥಳವನ್ನು ವೀಕ್ಷಿಸಲಾಗುವುದು. ಇದರಿಂದಾಗಿ, ಭೌಗೋಳಿಕವಾಗಿ ಯೋಜನೆಯ ಮಾಹಿತಿ ಪಡೆಯಲಾಗುವುದು ಎಂದರು.

ಡಿಪಿಆರ್ ಸಿದ್ಧಪಡಿಸಲು ಐದು ಕೋಟಿ ರೂ.ಗಳನ್ನು ಮೀಸಲಿಡಲಾಗಿದ್ದು, ಈ ಸಂಬಂಧ ಸಿದ್ದರಾಮಯ್ಯ ನೇತೃತ್ವದ ಸರಕಾರದ ಅವಧಿಯಲ್ಲೆ ಸಿದ್ಧತೆಗಳನ್ನು ಆರಂಭಿಸಲಾಗಿತ್ತು. ಈ ಯೋಜನೆ ಸಂಬಂಧ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ವ್ಯಕ್ತಪಡಿಸಿರುವ ಅಭಿಪ್ರಾಯದ ಕುರಿತು ನನಗೆ ಮಾಹಿತಿಯಿಲ್ಲ ಎಂದು ಅವರು ಹೇಳಿದರು.

ಮೇಕೆದಾಟು ಯೋಜನೆಯಿಂದಾಗಿ ಅರಣ್ಯ, ಕಂದಾಯ ಜೊತೆಗೆ ಖಾಸಗಿ ಭೂಮಿಯೂ ಮುಳುಗಡೆಯಾಗಲಿದೆ. ನನ್ನ ಕುಟುಂಬದ ಜಮೀನು ಈ ಯೋಜನೆಯಡಿ ಮುಳುಗಡೆಯಾಗಲಿದೆ ಎಂದು ಶಿವಕುಮಾರ್ ಮಾಹಿತಿ ನೀಡಿದರು.

ಡಿಪಿಆರ್ ಸಿದ್ಧವಾದ ನಂತರ ಕೇಂದ್ರ ಜಲ ಆಯೋಗ ಹಾಗೂ ತಮಿಳುನಾಡು ಸರಕಾರದ ಎದುರು ನಾವು ಯೋಜನೆ ಕುರಿತು ಪ್ರಾತ್ಯಕ್ಷಿಕೆ ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ವೈಯಕ್ತಿಕವಾಗಿ ನನಗೂ ಯೋಜನೆಗೆ ಸಂಬಂಧಿಸಿದ ಮಾಹಿತಿ ಅಗತ್ಯವಿದೆ ಎಂದು ಅವರು ಹೇಳಿದರು.

ಮೇಕೆದಾಟು ಯೋಜನೆಯಿಂದಾಗಿ ತಮಿಳುನಾಡಿಗೆ ಶೇ.95ರಷ್ಟು ಅನುಕೂಲವಾಗಲಿದೆ. ನ್ಯಾಯಾಲಯದ ಆದೇಶದಂತೆ ನಾವು ಅವರಿಗೆ ಪ್ರತಿ ವರ್ಷ ನೀರು ಬಿಡಲು ಈ ಯೋಜನೆ ಸಹಕಾರಿಯಾಗಲಿದೆ. ಇನ್ನುಳಿದಂತೆ ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆಗೂ ಪ್ರಯೋಜನವಾಗಲಿದೆ ಎಂದು ಶಿವಕುಮಾರ್ ತಿಳಿಸಿದರು.

ಮೇಕೆದಾಟು ಯೋಜನೆಗಾಗಿ 5912 ಕೋಟಿ ರೂ.ವೆಚ್ಚದ ಡಿಪಿಆರ್ ಈ ಹಿಂದೆಯೇ ಸಿದ್ಧವಾಗಿದೆ. 64 ಟಿಎಂಸಿ ನೀರು ಶೇಖರಣೆಯ ಯೋಜನೆ ಇದಾಗಿದ್ದು, 7.7 ಟಿಎಂಸಿ ನೀರು ಡೆಡ್ ಸ್ಟೋರೆಜ್ ಇರಲಿದೆ. ಈ ಯೋಜನೆಯು ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಬರಲಿದೆ ಎಂದು ಅವರು ಹೇಳಿದರು.

ಮೇಕೆದಾಟು, ಶಿವನಸಮುದ್ರ ಭೇಟಿ ಬಳಿಕ ನಾನು ಕೆಆರ್‌ಎಸ್‌ಗೆ ತೆರಳಿ ಅಲ್ಲಿ ವಾಸ್ತವ್ಯ ಹೂಡಲಿದ್ದೇನೆ. ಕೆಆರ್‌ಎಸ್‌ನಲ್ಲಿರುವ ಬೃಂದಾವನ ಉದ್ಯಾನವನ್ನು ಅಂತರ್‌ರಾಷ್ಟ್ರೀಯ ಗುಣಮಟಕ್ಕೆ ಮೇಲ್ದರ್ಜೆಗೇರಿಸುವ ಸಂಬಂಧ ಸರಕಾರ ಬಜೆಟ್‌ನಲ್ಲಿ ಘೋಷಿಸಿರುವ ಡಿಸ್ನಿಲ್ಯಾಂಡ್ ಮಾದರಿಯ ಯೋಜನೆ ಕುರಿತು ಚರ್ಚೆ ನಡೆಸಲಾಗುವುದು ಎಂದು ಅವರು ಹೇಳಿದರು.

ಮೈಸೂರು ಡಿಸ್ನಿಲ್ಯಾಂಡ್ ನಿರ್ಮಾಣಕ್ಕೆ ಸಮಿತಿ ರಚನೆ

ಕನ್ನಂಬಾಡಿ ಅಣೆಕಟ್ಟಿನ ಸುರಕ್ಷತೆಯ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಅಣೆಕಟ್ಟು ಬಳಿ ಸಾರ್ವಜನಿಕರನ್ನು ಬಿಡುವುದಿಲ್ಲ. ಜಲಾಶಯದ ಸೌಂದರ್ಯವನ್ನು ಪ್ರವಾಸಿಗರು ಕಣ್ಣು ತುಂಬಿಸಿಕೊಳ್ಳಲು ಒಂದು ಎತ್ತರದ ಟವರ್ ನಿರ್ಮಿಸಲಾಗುವುದು. ಅದಕ್ಕೆ, ಕಾವೇರಿಯ ಆಕೃತಿ ನೀಡುವ ಪ್ರಸ್ತಾವನೆ ನಮ್ಮ ಮುಂದಿದೆ.

ದೇಶ ಇತಿಹಾಸ ಹಾಗೂ ರಾಜ್ಯದ ಸಂಸ್ಕೃತಿ, ಪಾರಂಪರಿಕ ತಾಣಗಳನ್ನು ಬಿಂಬಿಸುವ ಯೋಜನೆಯೂ ಇದರಲ್ಲಿ ಅಡಗಿದೆ. ಇದಕ್ಕಾಗಿ 296 ಎಕರೆ ಭೂಮಿಯನ್ನು ಮೀಸಲಿರಿಸಲಾಗಿದೆ. ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆ ಸಾಕಾರಗೊಳ್ಳಲಿದೆ. ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಪ್ರವಾಸೋದ್ಯಮ ಸಚಿವರು ಅಂದು ನಮ್ಮೊಂದಿಗೆ ಇರುವಂತೆ ಮನವಿ ಮಾಡಿದ್ದೇನೆ.

ಮೈಸೂರು ಡಿಸ್ನಿಲ್ಯಾಂಡ್ ನಿರ್ಮಾಣಕ್ಕೆ ಒಂದು ಸಮಿತಿ ರಚನೆ ಮಾಡುತ್ತೇವೆ. ಮೈಸೂರು ಮಹಾರಾಜರನ್ನು ಸಮಿತಿಯ ಸದಸ್ಯರನ್ನಾಗಿಸಲಾಗುವುದು. ಎಲ್ಲ ಅಭಿಪ್ರಾಯಗಳನ್ನು ಪಡೆಯಲಾಗುವುದು ಎಂದು ಶಿವಕುಮಾರ್ ಹೇಳಿದರು.

ಮೇಕೆದಾಟು ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿ ತಮಿಳುನಾಡು ಸರಕಾರ ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ದಾಖಲು ಮಾಡಿದೆ. ನ್ಯಾಯಾಲಯದಿಂದ ನಮಗೆ ನೋಟಿಸ್ ಬಂದ ಬಳಿಕ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತೇನೆ. ಅವರು ತುಂಬಾ ಒಳ್ಳೆಯವರು ಆದರೆ, ಯಾವುದೋ ಒತ್ತಡಕ್ಕೆ ಮಣಿದು ಹೀಗೆ ಮಾಡಿರುತ್ತಾರೆ.

-ಡಿ.ಕೆ.ಶಿವಕುಮಾರ್, ಜಲಸಂಪನ್ಮೂಲ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News