×
Ad

ರುದ್ರೇಶ್ ಕೊಲೆ ಪ್ರಕರಣ: 5ನೆ ಆರೋಪಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

Update: 2018-12-03 21:21 IST

ಬೆಂಗಳೂರು, ಡಿ.3: ಆರೆಸೆಸ್ಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣದ 5ನೆ ಆರೋಪಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

5ನೆ ಆರೋಪಿ ಅಸೀಂ ಶರೀಫ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಜಾಮೀನು ನೀಡಲು ನಿರಾಕರಿಸಿತು. ಅಲ್ಲದೆ, ಆರೋಪಿ ಅಸೀಂ ಶರೀಫ್ ಜಾಮೀನು ಕೋರಿ ಎನ್‌ಐಎ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯನ್ನೂ ವಜಾಗೊಳಿಸಿತ್ತು. ಹೀಗಾಗಿ, ಆರೋಪಿಯು ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದನು.

ಶಿವಾಜಿನಗರದ ಕಾಮರಾಜ ರಸ್ತೆಯ ಶ್ರೀನಿವಾಸ್ ಮೆಡಿಕಲ್ ಸ್ಟೋರ್ ಎದುರು ನಿಂತಿದ್ದಾಗ ರುದ್ರೇಶ್‌ನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹತ್ಯೆಗೈದಿದ್ದರು. ಅಸೀಂ ಶರೀಫ್ ಪರ ವಾದಿಸಿದ ವಕೀಲರು, ಎನ್‌ಐಎ ಯಾವುದೇ ಪ್ರಕರಣದ ತನಿಖೆ ನಡೆಸಬೇಕಾದರೆ ಅಂತಹ ಪ್ರಕರಣ ಅಕ್ರಮ ಕೂಟ ಕಾಯ್ದೆ 1967ರ ಅನುಸಾರ ಷೆಡ್ಯೂಲ್ಡ್ ಅಪರಾಧ ಪ್ರಕರಣ ಸ್ವರೂಪ ಹೊಂದಿರಬೇಕು. ಆದರೆ, ಇದೊಂದು ಕೊಲೆ ಪ್ರಕರಣ. ಸುಮ್ಮನೆ ಇದಕ್ಕೆ ಭಯೋತ್ಪಾದನೆಯ ಬಣ್ಣ ಕಟ್ಟಲಾಗುತ್ತಿದೆ ಎಂದು ಪೀಠಕ್ಕೆ ತಿಳಿಸಿದರು.

ಎನ್‌ಐಎ ಪರ ವಾದಿಸಿದ ವಕೀಲರು, ಎಲ್ಲ ಆರೋಪಿಗಳು ಪಿಎಫ್‌ಐ ಸಂಘಟನೆಯವರು. ಕೊಲೆಯಾದ ದಿನ ಪಥ ಸಂಚಲನ ಇತ್ತು. ಹತ್ಯೆಯಾದ ರುದ್ರೇಶ ಮತ್ತು ಆರೋಪಿಗಳ ನಡುವೆ ಯಾವುದೇ ದ್ವೇಷ ಇರಲಿಲ್ಲ. ಪರಿಚಯವೇ ಇರಲಿಲ್ಲ. ಆದರೆ, ಆ ದಿನ ಯಾರನ್ನಾದರೂ ಓರ್ವ ವ್ಯಕ್ತಿಯನ್ನು ಕೊಲ್ಲಬೇಕೆಂದು ಆರೋಪಿಗಳು ಸಂಚು ರೂಪಿಸಿ, ಆರೆಸೆಸ್ಸ್ ಕಾರ್ಯಕರ್ತ ಎಂಬ ಒಂದೇ ಕಾರಣಕ್ಕಾಗಿ ರುದ್ರೇಶ್‌ನನ್ನು ಹತ್ಯೆ ಮಾಡಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News