×
Ad

ಬೆಂಗಳೂರು: ಪೊಲೀಸ್ ವಶದಲ್ಲಿದ್ದ ಆರೋಪಿ ಮೃತ್ಯು?

Update: 2018-12-03 21:24 IST

ಬೆಂಗಳೂರು, ಡಿ.3: ರಾಮಮೂರ್ತಿ ನಗರ ಠಾಣೆ ಪೊಲೀಸರ ವಶದಲ್ಲಿದ್ದ ಕೊಲೆ ಆರೋಪಿಯೋರ್ವ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

ರಾಮಮೂರ್ತಿ ನಗರದ ಒಎಂಬಿಆರ್ ಲೇಔಟ್‌ನ ನಿವಾಸಿ, ಎಂಇಜಿಯಲ್ಲಿ ಲಿಫ್ಟ್ ಆಪರೇಟರ್ ಆಗಿದ್ದ ಕೃಷ್ಣಮೂರ್ತಿ(52) ಸಾವನ್ನಪ್ಪಿರುವ ಕೊಲೆ ಆರೋಪಿ ಎಂದು ಹೇಳಲಾಗುತ್ತಿದೆ.

ಏನಿದು ಪ್ರಕರಣ?: ನ.20 ರಂದು ಕೃಷ್ಣಮೂರ್ತಿ ಪತ್ನಿ ಮೇಘಲಾದೇವಿ (50) ಅವರು ಮನೆಯಲ್ಲಿ ಒಂಟಿಯಾಗಿದ್ದ ವೇಳೆ ಚಾಕುವಿನಿಂದ ಇರಿದು ಕೊಲೆ ಮಾಡಿ ಅವರ ಮೈ ಮೇಲಿದ್ದ ಸರ ತೆಗೆದುಕೊಂಡು ಪರಾರಿಯಾಗಿರುವ ಆರೋಪದ ಮೇಲೆ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ದೂರಿನನ್ವಯ, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡು, ಕೃತ್ಯ ನಡೆದ ಅಕ್ಕಪಕ್ಕದಲ್ಲಿನ ಸಿಸಿ ಟಿವಿಗಳನ್ನು ಪರಿಶೀಲನೆ ನಡೆಸಿದರು. ತನಿಖೆಯ ಒಂದು ಹಂತದಲ್ಲಿ ಕೊಲೆಯಾದ ಮೇಘಲಾ ದೇವಿ ಪತಿ ಕೃಷ್ಣಮೂರ್ತಿ ಅವರ ಬಗ್ಗೆ ಸಂಶಯ ಉಂಟಾಗಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಕೃಷ್ಣಮೂರ್ತಿ ನೀಡಿದ ಹೇಳಿಕೆ ಹಾಗೂ ಸಾಕ್ಷ್ಯಾಧಾರಗಳಿಂದ ಈತನೇ ಕೊಲೆ ಮಾಡಿರುವುದು ಎಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಕೃತ್ಯಕ್ಕೆ ಬಳಸಿದ್ದ ಚಾಕು ಹಾಗೂ ಪತ್ನಿಯ ಕೊರಳಲ್ಲಿದ್ದ ಸರವನ್ನು ಕಲ್ಕೆರೆ ರಸ್ತೆ ಬದಿ ಬಚ್ಚಿಟ್ಟಿರುವುದಾಗಿ ಆರೋಪಿ ವಿಚಾರಣೆ ಸಂದರ್ಭದಲ್ಲಿ ತಿಳಿಸಿದ್ದಾನೆ ಎನ್ನಲಾಗಿದೆ. ನಂತರ ರಾತ್ರಿ 8 ಗಂಟೆಯಲ್ಲಿ ಕೃಷ್ಣಮೂರ್ತಿಯನ್ನು ಕರೆದುಕೊಂಡು ಪೊಲೀಸ್ ವಾಹನದಲ್ಲಿ ಸ್ಥಳ ಮಹಜರಿಗೆ ಪೊಲೀಸರು ತೆರಳಿದ್ದರು.

ಆಗ ಕೃಷ್ಣಮೂರ್ತಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಪೊಲೀಸರು, ಆತನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರಾದರೂ ಚಿಕಿತ್ಸೆ ಫಲಿಸದೆ ರಾತ್ರಿ 10 ಗಂಟೆಯಲ್ಲಿ ಆತ ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ನಗರದ ಹೆಚ್ಚುವರಿ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಮಹಜರಿಗೆ ಹೋದಾಗ ಮಾಹಿತಿ ನೀಡುವ ವೇಳೆ ಆರೋಪಿ ಸಾವನ್ನಪ್ಪಿದ್ದಾನೆ. ಕಸ್ಟಡಿ ವೇಳೆ ಸಾವನ್ನಪ್ಪಿರುವುದರಿಂದ ಈ ಪ್ರಕರಣ ಸಿಐಡಿಗೆ ವಹಿಸಲಾಗಿದೆ. ಜೊತೆಗೆ ಮರಣೋತ್ತರ ಪರೀಕ್ಷೆಯ ವರದಿಯನ್ನು ಸಿಐಡಿಗೆ ರವಾನಿಸಲಾಗುತ್ತದೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News