ಬಿಸಿಯೂಟ ನೌಕರರ ಅಹೋರಾತ್ರಿ ಧರಣಿ ಹಿಂದಕ್ಕೆ
ಬೆಂಗಳೂರು, ಡಿ.3: ಸರಕಾರಿ ಶಾಲೆಗಳ ಅಕ್ಷರ ದಾಸೋಹ ಯೋಜನೆಯಲ್ಲಿ ಬಿಸಿಯೂಟ ತಯಾರಿಸುವವರ ಸಮಸ್ಯೆಗಳ ಕುರಿತು ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿರುವ ಹಿನ್ನೆಲೆ ಬಿಸಿಯೂಟ ನೌಕರರು ಅಹೋರಾತ್ರಿ ಧರಣಿಯನ್ನು ತಾತ್ಕಲಿಕವಾಗಿ ಹಿಂದಕ್ಕೆ ಪಡೆದಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಎಐಟಿಯುಸಿ ಶಿವಣ್ಣ, ಬಿಸಿಯೂಟ ತಯಾರಕರ ಸಮಸ್ಯೆಗಳ ಕುರಿತು ಚಳಿಗಾಲದ ಅಧಿವೇಶನದ ನಂತರ ಮುಖ್ಯಮಂತ್ರಿ ಸಭೆ ಕರೆಯುವುದಾಗಿ ಭರವಸೆ ನೀಡಿರುವ ಹಿನ್ನೆಲೆ ಸದ್ಯಕ್ಕೆ ಪ್ರತಿಭಟನೆ ಹಿಂಪಡೆಯಲಾಗಿದ್ದು, ಸೂಕ್ತ ರೀತಿ ಪರಿಹಾರ ದೊರೆಯಲಿಲ್ಲ ಎಂದರೆ ಮತ್ತೆ ರಸ್ತೆಗಿಳಿಯಲಾಗುವುದು ಎಂದು ತಿಳಿಸಿದರು.
ಸಂಬಳ ಕಡಿಮೆ, ಕೆಲಸ ಹೆಚ್ಚು. ಸೇವಾ ಭದ್ರತೆ ಇಲ್ಲವೇ ಇಲ್ಲ. ಹೀಗೆ ಹತ್ತಾರು ಸಮಸ್ಯೆಗಳ ಪರಿಹಾರಕ್ಕಾಗಿ ಬಿಸಿಯೂಟ ತಯಾರಕರು, ರವಿವಾರದಿಂದಲೇ ಅಹೋರಾತ್ರಿ ಧರಣಿ ಆರಂಭಿಸಿದ್ದರು.
ನಗರದ ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಧರಣಿ ಆರಂಭಿಸಿ ಚಳಿಯಲ್ಲಿಯೇ ರಸ್ತೆಗಳಲ್ಲಿ ಮಲಗಿದ್ದ ಬಿಸಿಯೂಟ ತಯಾರಕರು, ಬಿಸಿಯೂಟ ಕಾರ್ಯಕರ್ತೆಯರ ಕೆಲಸ ಖಾಯಂಗೊಳಿಸಬೇಕು. ವಿಮೆ, ಇಎಸ್‌ಐ, ಪಿಎಫ್ ನೀಡಬೇಕು. ತಮಿಳುನಾಡು ರೀತಿಯಲ್ಲಿ ಕರ್ನಾಟಕ ರಾಜ್ಯದ ಬಿಸಿಯೂಟ ಕಾರ್ಯಕರ್ತರಿಗೂ ಸಂಬಳ ನೀಡಬೇಕು. ಬಿಸಿಯೂಟ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸಬಾರದು ಎಂದು ಒತ್ತಾಯಿಸಿದರು.
ಕಳೆದ ಬಾರಿ ನಮ್ಮ ಬೇಡಿಕೆಗಳನ್ನು ಮಾಜಿ ಶಿಕ್ಷಣ ಸಚಿವ ತನ್ವೀರ್ ಸೇಠ್ ಸೇರಿ ವಿವಿಧ ನಾಯಕರು ಈಡೇರಿಸಿರಲಿಲ್ಲ. ಆಶ್ವಾಸನೆ ಕೊಟ್ಟು ಮೋಸ ಮಾಡಿರುವ ಎಲ್ಲ ಸರಕಾರಗಳಿಗೆ ನಮ್ಮ ಧಿಕ್ಕಾರವಿದೆ. ಬೇಡಿಕೆಗಳು ಈಡೇರದಿದ್ದರೆ ಪ್ರತಿಭಟನಾ ಧರಣಿ ಮುಂದುವರೆಯುವುದು ಎಂದು ಬಿಸಿಯೂಟ ಕಾರ್ಯಕರ್ತೆಯರ ರಾಜ್ಯ ಸಂಘಟನೆಯ ರುದ್ರಮ್ಮ ಬೆಳಲ್ಗೆರೆ ಪತ್ರಿಕೆಗೆ ತಿಳಿಸಿದರು.
ಬೇಡಿಕೆಗಳೇನು..?
* ಸಂಬಳವನ್ನು ಹೆಚ್ಚಳ ಮಾಡಬೇಕು
* ಕೆಲಸ ಖಾಯಂಗೊಳಿಸಬೇಕು.
* ಇನ್ಶೂರೆನ್ಸ್, ಇಎಸ್‌ಐ ಪಿಎಫ್ ನೀಡಬೇಕು.
* ತಮಿಳುನಾಡು ರೀತಿಯಲ್ಲಿ ರಾಜ್ಯದ ಬಿಸಿಯೂಟ ಕಾರ್ಯಕರ್ತರಿಗೂ ಸಂಬಳ ನೀಡಬೇಕು.
* ಬಿಸಿಯೂಟ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸಬಾರದು.
* ಇಸ್ಕಾನ್‌ಗೆ ನೀಡಬೇಕೆಂದಿರುವ ಗುತ್ತಿಗೆಯನ್ನು ರದ್ದುಗೊಳಿಸಬೇಕು.