ಬಸವನಗುಡಿ ಕಡಲೆಕಾಯಿ ಪರಿಷೆಗೆ ಅದ್ದೂರಿ ಚಾಲನೆ
ಬೆಂಗಳೂರು, ಡಿ.3: ಗ್ರಾಮೀಣ ಸೊಗಡಿನ ಐತಿಹಾಸಿಕ ಬಸವನಗುಡಿ ಕಡಲೆ ಕಾಯಿ ಪರಿಷೆಗೆ ಸೋಮವಾರ ಚಾಲನೆ ದೊರೆತಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಿದ್ದಾರೆ.
ಸೋಮವಾರ ನಗರದ ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನದ ಬಳಿ ಆಯೋಜಿಸಿರುವ ಕಡಲೆ ಕಾಯಿ ಪರಿಷೆಗೆ ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಚಾಲನೆ ನೀಡಿದರು. ಡಿ.4ರ ರಾತ್ರಿ 10ಗಂಟೆವರೆಗೂ ಈ ಕಡಲೆ ಕಾಯಿ ಪರಿಷೆ ನಡೆಯಲಿದೆ.
ಪರಿಷೆಯನ್ನು ಪ್ಲಾಸ್ಟಿಕ್ ಮುಕ್ತ ಮಾಡಿ, ಸ್ವಚ್ಛತೆ ಕಾಪಾಡುವಂತೆ ಮನವಿ ಮಾಡಲಾಗಿದ್ದು, ಸೂಕ್ತ ವ್ಯವಸ್ಥೆಯನ್ನೂ ಮಾಡಲಾಗಿದೆ. ಅದೇ ರೀತಿ, ಪ್ಲಾಸ್ಟಿಕ್ ಚೀಲಕ್ಕೆ ಬದಲಾಗಿ ಪರಿಸರ ಸ್ನೇಹಿ ಬ್ಯಾಗ್‌ಗಳನ್ನು ಬಳಸಲು ವ್ಯವಸ್ಥೆ ಮಾಡಲಾಗಿದೆ.
ವ್ಯಾಪಾರ ಜೋರು: ದೊಡ್ಡ ಗಣಪತಿ ದೇವಸ್ಥಾನದ ಸುತ್ತಮುತ್ತಲಿನ ರಸ್ತೆಗಳೆಲ್ಲ ಕಡಲೆ ಕಾಯಿಗಳಿಂದ ಸಜ್ಜುಗೊಂಡಿದ್ದು, ಪರಿಷೆಯಲ್ಲಿ ತರಹೇವಾರಿ ಕಡಲೆಕಾಯಿ ಕಾಣುತ್ತವೆ. ಬಣ್ಣ ಹಾಗೂ ಗಾತ್ರ ಆಧರಿಸಿ ಹಸಿ ಕಾಯಿ, ಬೇಯಿಸಿದ ಕಾಯಿ ಹಾಗೂ ಹುರಿದ ಕಾಯಿಗೆ ಪ್ರತ್ಯೇಕವಾದ ಬೆಲೆಯನ್ನು ವ್ಯಾಪಾರಿಗಳು ನಿಗದಿ ಪಡಿಸಿದ್ದಾರೆ. ಗಿಡ್ಡ, ಮಧ್ಯಮ ಹಾಗೂ ದೊಡ್ಡ ಗಾತ್ರದ ಕಡಲೆಕಾಯಿಗಳು ಹೆಚ್ಚಿದ್ದು, ಕೋಲಾರ, ಮಾಲೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ರಾಮನಗರ, ದೊಡ್ಡಬಳ್ಳಾಪುರ, ಹೊಸಕೋಟೆ, ಮಾಗಡಿ, ತಮಿಳುನಾಡು ಹಾಗೂ ಆಂಧ್ರಪ್ರದೇಶದ ರೈತರು, ವ್ಯಾಪಾರಿಗಳು ಪರಿಷೆಯಲ್ಲಿ ಡೇರೆ ಹಾಕಿದ್ದಾರೆ.
ಕೆಲವು ವ್ಯಾಪಾರಿಗಳು ನಡುರಸ್ತೆಯಲ್ಲಿ ಟಾರ್ಪಲ್‌ಗಳನ್ನು ಹಾಕಿಕೊಂಡಿದ್ದರು. ಇದು ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿತ್ತು. ಹಾಗಾಗಿ, ಸ್ಥಳದಲ್ಲಿದ್ದ ಪೊಲೀಸರು ಅವುಗಳನ್ನು ತೆರವುಗೊಳಿಸಿದರು. ಸುಮಾರು 5ರಿಂದ 6 ಲಕ್ಷಕ್ಕೂ ಅಧಿಕ ಮಂದಿ ಸೇರುವ ಈ ಪರಿಷೆಗೆ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದಾರೆ.
ಸಂಚಾರ ಬಂದ್: ನಗರದ ರಾಮಕೃಷ್ಣ ಆಶ್ರಮದಿಂದ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜುವರೆಗಿನ ರಸ್ತೆಯಲ್ಲಿ ಮಂಗಳವಾರ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಪರಿಷೆಗೆ ಆಗಮಿಸುವವರ ಅನುಕೂಲಕ್ಕಾಗಿ ಸಮೀಪದ ಎಪಿಎಸ್ ಕಾಲೇಜು ಆವರಣ ಮತ್ತು ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದ ಆವರಣದಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
ಚಾಲನೆ ವೇಳೆ ಶಾಸಕರಾದ ರವಿಸುಬ್ರಮಣ್ಯ, ಉದಯ್ ಗರುಡಾಚಾರ್, ವಿಧಾನ ಪರಿಷತ್ತು ಸದಸ್ಯ ಟಿ.ಎ.ಶರವಣ, ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ್, ಬಿಬಿಎಂಪಿ ಸದಸ್ಯರಾದ ನಂದಿನಿ, ಸವಿತಾ ಸೇರಿದಂತೆ ಪ್ರಮುಖರಿದ್ದರು.
ಮೋಸ ಮಾಡಿದರೆ ಕ್ರಮ
ಕಾನೂನು ಮಾಪನ ಶಾಸ್ತ್ರ ಇಲಾಖಾಧಿಕಾರಿಗಳು ಅಳತೆಯಲ್ಲಿ ಮೋಸ ಮಾಡುವವರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ವ್ಯಾಪಾರದಲ್ಲಿ ಮೋಸ ಕಂಡುಬಂದಲ್ಲಿ ಮೊಬೈಲ್ ಸಂಖ್ಯೆ 95353 05458 ದೂರು ನೀಡಬಹುದು.
ಐತಿಹಾಸಿಕ ಪುರಾತನ ಕಡಲೆಕಾಯಿ ಪರಿಷೆ, ನಾಡಪ್ರಭು ಕೆಂಪೇಗೌಡರ ಕಾಲದಿಂದಲೂ ನಡೆದು ಬಂದ ಸಂಪ್ರದಾಯ. ಇದೀಗ ಆಧುನಿಕ ಯುಗದಲ್ಲೂ ಮಹಿಳೆಯರು ಮಕ್ಕಳು ಸೇರಿದಂತೆ ಎಲ್ಲರೂ ಭಾಗವಹಿಸುತ್ತಾರೆ. ಈ ಪರಿಷೆಯನ್ನು ರಾಷ್ಟ್ರೀಯ ಪ್ರವಾಸಿ ತಾಣ ಎಂದು ಗುರುತಿಸಲು ಬಿಬಿಎಂಪಿಯಲ್ಲಿ ಚರ್ಚಿಸಲಾಗುವುದು.
-ಗಂಗಾಂಬಿಕೆ ಮಲ್ಲಿಕಾರ್ಜುನ, ಬಿಬಿಎಂಪಿ ಮೇಯರ್