ಮಾಡ್ರಿಕ್‌ಗೆ ಬ್ಯಾಲನ್ ಡಿ ಓರ್ ಪ್ರಶಸ್ತಿ: ರೊನಾಲ್ಡೊ, ಮೆಸ್ಸಿ ಯುಗಾಂತ್ಯ

Update: 2018-12-04 04:03 GMT

ಪ್ಯಾರಿಸ್, ಡಿ. 4: ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಕ್ರೊವೇಶಿಯಾ ತಂಡವನ್ನು ಮುನ್ನಡೆಸಿದ್ದ ಲ್ಯೂಕಾ ಮಾಡ್ರಿಕ್ ಈ ಬಾರಿಯ ಬ್ಯಾಲನ್ ಡಿ ಓರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.

33 ವರ್ಷದ ಮಾಡ್ರಿಕ್ 2018ರ ಫಿಫಾ ವಿಶ್ವಕಪ್‌ನ ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನೂ ಗೆದ್ದಿದ್ದರು. ಜತೆಗೆ ಈ ವರ್ಷದ ಫಿಫಾ ಅತ್ಯುತ್ತಮ ಆಟಗಾರ ಪ್ರಶಸ್ತಿಗೂ ಪಾತ್ರರಾಗಿದ್ದರು. ಇದರಿಂದ ಒಂದು ದಶಕದ ಬಳಿಕ ಫುಟ್‌ಬಾಲ್ ಲೋಕದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಲಿಯೊನೆಲ್ ಮೆಸ್ಸಿ ಏಕಸ್ವಾಮ್ಯ ಅಂತ್ಯವಾಗಿದ್ದು, 2007ರಿಂದೀಚೆಗೆ ರೊನಾಲ್ಡೊ ಅಥವಾ ಮೆಸ್ಸಿಯನ್ನು ಹೊರತುಪಡಿಸಿ ಇತರ ಆಟಗಾರರು ಈ ಗೌರವಕ್ಕೆ ಪಾತ್ರವಾಗುತ್ತಿರುವುದು ಇದೇ ಮೊದಲು.

"ಇದು ನಂಬಲು ಅಸಾಧ್ಯವಾದ ವಿಶಿಷ್ಟ ಅನುಭವ; ಈ ಆಟಗಾರರ ಜತೆ ಸೇರಿರುವುದು ಅತೀವ ಆನಂದ ತಂದಿದೆ. ಅದ್ಭುತ ಆಟಗಾರರ ಗುಂಪಿನ ಭಾಗವಾಗಲು ನಾನು ಇನ್ನೂ ಪ್ರಯತ್ನ ಮುಂದುವರಿಸುತ್ತೇನೆ. ಈ ಬಾರಿ ಪ್ರಶಸ್ತಿ ಬಂದಿದೆ ಎಂದರೆ ನಾನು ಉತ್ತಮವಾಗಿ ಈ ವರ್ಷ ಆಡಿದ್ದೇನೆ ಎಂಬ ಅರ್ಥ. ಈ ಕಾರಣದಿಂದ 2018 ನನ್ನ ವರ್ಷವಾಯಿತು" ಎಂದು ಮಾಡ್ರಿಕ್ ಪ್ರತಿಕ್ರಿಯಿಸಿದರು. ಈ ಗೌರವಕ್ಕೆ ಪಾತ್ರರಾದ ಮೊಟ್ಟಮೊದಲ ಕ್ರೊವೇಶಿಯಾ ಆಟಗಾರ ಎಂಬ ಹೆಗ್ಗಳಿಕೆಯೂ ಮಾಡ್ರಿಕ್ ಅವರದ್ದು.

2004ರಲ್ಲಿ ಆಂಡ್ರಿ ಶೆವ್‌ಚೆಂಕೊ ಈ ಪ್ರಶಸ್ತಿ ಗಳಿಸಿದ ಬಳಿಕ ಈ ಗೌರವಕ್ಕೆ ಪಾತ್ರರಾದ ಮೊಟ್ಟಮೊದಲ ಪೂರ್ವ ಯೂರೋಪ್ ಆಟಗಾರ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ.

ರೊನಾಲ್ಡೊ ಎರಡನೇ ಸ್ಥಾನ ಗಳಿಸಿದರೆ, ಫ್ರಾನ್ಸ್‌ನ ಮುನ್ಪಡೆ ಆಟಗಾರ ಆಂಟೊನಿ ಗ್ರೀರ್ಮನ್ ಮೂರನೇ ಸ್ಥಾನ ಪಡೆದರು. ಫ್ರಾನ್ಸ್‌ನ ಯುವ ಆಟಗಾರ ಕೈಲಿಯಾನ್ ಬಾಪೆ ನಾಲ್ಕನೇ ಸ್ಥಾನ ಗಳಿಸಿದರೆ, ಕಳೆದ ಬಾರಿ 3ನೇ ಸ್ಥಾನದಲ್ಲಿದ್ದ ಬ್ರೆಝಿಲ್‌ನ ಸ್ಟಾರ್ ಆಟಗಾರ ನೇಮರ್ 12ನೇ ಸ್ಥಾನಕ್ಕೆ ಕುಸಿದರು.
ನಾರ್ವೆಯ ಅಡಾ ಹೆಗೆರ್‌ಬರ್ಗ್ ಫುಟ್‌ಬಾಲ್ ಲೋಕದ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿಗೆ ಭಾಜನರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News