ನಿಮ್ಮ ಬಳಿ ಇರುವ 2000 ರೂ. ನೋಟು ನಕಲಿಯೇ, ಅಸಲಿಯೇ ಎಂದು ಪತ್ತೆಹಚ್ಚುವುದು ಹೇಗೆ?

Update: 2018-12-04 12:11 GMT

ಸರಕಾರವು ನೋಟು ನಿಷೇಧ ಅಥವಾ ಇನ್ಯಾವುದೇ ಕ್ರಮವನ್ನು ತೆಗೆದುಕೊಂಡರೂ ನಕಲಿ ನೋಟುಗಳ ಹಾವಳಿಯನ್ನು ನಿಲ್ಲಿಸಲು ಸಾಧ್ಯವೇ ಇಲ್ಲ ಎನ್ನುವುದು ಲೋಕಕ್ಕೇ ಜಾಹೀರಾಗಿದೆ. ನಮಗೆ ಗೊತ್ತಿಲ್ಲದೆ ನಕಲಿ ನೋಟು ನಮ್ಮ ಕೈಸೇರಿದಾಗ ನಾವು ನಷ್ಟ ಅನುಭವಿಸುವುದು ಮಾತ್ರವಲ್ಲ,ಅಧಿಕಾರಿಗಳ ಕೆಂಗಣ್ಣಿಗೂ ಗುರಿಯಾಗಬೇಕಾಗುತ್ತದೆ.

2000 ರೂ.ಮುಖಬೆಲೆಯ ನಕಲಿ ನೋಟುಗಳ ಹಾವಳಿ ಅತಿಯಾಗುತ್ತಿರು ವುದರಿಂದ ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕಾದ್ದು ಅಗತ್ಯವಾಗಿದೆ. ಅಲ್ಲದೆ ನಮ್ಮ ಕೈಸೇರಿರುವುದು ನಕಲಿ ನೋಟು ಎಂದಾದಾಗ ಅದನ್ನು ವಿನಿಮಯಿಸಿಕೊಳ್ಳುವುದೂ ಸಾಧ್ಯವಿಲ್ಲ,ತನಿಖೆಗೆ ಬೆದರಿ ಹೆಚ್ಚಿನವರು ಅದನ್ನು ನಾಶಗೊಳಿಸುತ್ತಾರೆ. ನಿಯಮದಂತೆ ನಕಲಿ ನೋಟು ನಮ್ಮ ಕೈ ಸೇರಿದರೆ ನಾವು ಸಮೀಪದ ಆರ್‌ಬಿಐ ಶಾಖೆ ಅಥವಾ ಪೊಲೀಸ್ ಠಾಣೆಗೆ ಅದನ್ನು ಒಪ್ಪಿಸಬೇಕಾಗುತ್ತದೆ. ಹೀಗಾಗಿ 2000 ರೂ.ನೋಟನ್ನು ಸ್ವೀಕರಿಸುವ ಮುನ್ನ ಕೆಲವು ಪರಿಶೀಲನೆಗಳನ್ನು ನಡೆಸಿ ಅದು ನಕಲಿ ಅಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಹಿತದೃಷ್ಟಿಯಿಂದ ಜಾಣ ನಡೆಯಾಗುತ್ತದೆ.

ನೋಟಿನ ಮುಂಭಾಗದಲ್ಲಿ ರೂ.2000 ಎನ್ನುವುದು ಎಡಗಡೆಯಲ್ಲಿ ದೇವನಾಗರಿ ಮತ್ತು ಬಲಗಡೆಯಲ್ಲಿ ಆಂಗ್ಲ ಭಾಷೆಯ ಅಂಕಿಗಳಲ್ಲಿರುತ್ತವೆ. ನೋಟನ್ನು ಬೆಳಕಿಗೆ ಹಿಡಿದಾಗ ಎಡಭಾಗದಲ್ಲಿ 2000 ಇರುವುದು ಕಂಡುಬರುತ್ತದೆ.

ನೋಟನ್ನು 45 ಡಿಗ್ರಿ ಕೋನದಲ್ಲಿ ಹಿಡಿದಾಗ ಎಡಭಾಗದ ಪುಟ್ಟ ಆಯತದಲ್ಲಿ ಸುಪ್ತವಾಗಿರುವ 2000 ಸಂಖ್ಯೆ ಕಾಣುತ್ತದೆ. ನೋಟಿನ ಎಡ ಮತ್ತು ಬಲಅಂಚುಗಳಲ್ಲಿ ಎತ್ತರಿಸಿದ ಭಾಗದಲ್ಲಿ ತಲಾ ಏಳು ಆ್ಯಂಗುಲರ್ ಬ್ಲೀಡ್ ಲೈನ್‌ಗಳಿರುತ್ತವೆ. ಮಧ್ಯಭಾಗದಲ್ಲಿ ಮಹಾತ್ಮಾ ಗಾಂಧಿಯವರ ಚಿತ್ರವಿದ್ದು,ಕನ್ನಡಕದ ಬಳಿ ಸಣ್ಣ ಅಕ್ಷರಗಳಲ್ಲಿ ಆರ್‌ಬಿಐ ಎಂದಿರುತ್ತದೆ ಮತ್ತು ಇದನ್ನು ಭೂತಗನ್ನಡಿಯ ಮೂಲಕ ಖಚಿತಪಡಿಸಿಕೊಳ್ಳಬಹುದಾಗಿದೆ. ಎಡಭಾಗದಲ್ಲಿ ಸಣ್ಣ ಅಕ್ಷರಗಳಲ್ಲಿ 2000 ಮತ್ತು ಆರ್‌ಬಿಐ ಎಂದು ಮುದ್ರಿತಗೊಂಡಿರುತ್ತದೆ. ಬಲಭಾಗದಲ್ಲಿ ಆರ್‌ಬಿಐ ಗವರ್ನರ್ ಸಹಿ,ಖಾತರಿ ಮತ್ತು ಆರ್‌ಬಿಐ ಲಾಂಛನ ಇರುತ್ತವೆ. ಭಾರತ(ಹಿಂದಿಯಲ್ಲಿ),ಆರ್‌ಬಿಐ ಮತ್ತು 2000 ಎಂದು ಉಬ್ಬಿದ ಅಕ್ಷರಗಳಲ್ಲಿರುವ ಸೆಕ್ಯೂರಿಟಿ ಥ್ರೆಡ್ ಇದ್ದು,ನೋಟನ್ನು ವಾರೆಯಾಗಿ ಹಿಡಿದಾಗ ಇದು ಹಸಿರು ಬಣ್ಣದಿಂದ ನೀಲಿ ಬಣ್ಣಕ್ಕೆ ತಿರುತ್ತದೆ. ಬಲಗಡೆಗೆ ಕೆಳಗೆ ಉಬ್ಬಿದ ಅಶೋಕ ಸ್ತಂಭ ಲಾಂಛನವಿದ್ದು,ಅದರ ಮೇಲ್ಗಡೆ ಆಯತದಲ್ಲಿ 2000 ಎಂದು ಉಬ್ಬಿದ ಅಂಕಿಗಳಲ್ಲಿರುತ್ತದೆ. ಬಲಗಡೆಯ ಖಾಲಿ ಜಾಗದಲ್ಲಿ ಮಹಾತ್ಮಾ ಗಾಂಧಿಯವರ ಚಿತ್ರ ಮತ್ತು ಎಲೆಕ್ಟ್ರೋಟೈಪ್‌ನಲ್ಲಿ 2000 ವಾಟರ್‌ಮಾರ್ಕ್‌ಗಳಿರುತ್ತವೆ.

ಬಲಭಾಗದಲ್ಲಿ ಕೆಳಗಡೆಗೆ ನೋಟಿನ ಸಂಖ್ಯೆಯಿದ್ದು ಅಂಕಿಗಳು ಎಡದಿಂದ ಬಲಕ್ಕೆ ದೊಡ್ಡದಾಗುತ್ತ ಹೋಗುತ್ತವೆ. ಬಲಗಡೆ ಕೆಲಭಾಗದಲ್ಲಿರುವ 2000 ನೋಟನ್ನು ವಾರೆಯಾಗಿಸಿದಾಗ ಹಸಿರಿನಿಂದ ನೀಲಿ ಬಣ್ಣಕ್ಕೆ ತಿರುಗುತ್ತದೆ.

ದೃಷ್ಟಿಮಾಂದ್ಯರು ಉಬ್ಬಿದ ಮಹಾತ್ಮಾ ಗಾಂಧಿಯವರ ಚಿತ್ರ,ಅಶೋಕ ಸ್ತಂಭ ಲಾಂಛನ,ಬ್ಲೀಡ್ ಲೈನ್‌ಗಳು ಮತ್ತು ಐಡೆಂಟಿಟಿ ಮಾರ್ಕ್‌ಗಳ ಮೂಲಕ ನೋಟಿನ ಸಾಚಾತನವನ್ನು ಖಚಿತಪಡಿಸಕೊಳ್ಳಬಹುದು,

ನೋಟಿನ ಹಿಂಭಾಗದಲ್ಲಿ ಎಡಅಂಚಿನಲ್ಲಿ ಅದು ಮುದ್ರಣಗೊಂಡ ವರ್ಷವನ್ನು ಉಲ್ಲೇಖಿಸಲಾಗಿರುತ್ತದೆ. ಎಡಭಾಗದಲ್ಲಿ ಕೆಳಗೆ ಸ್ವಚ್ಛ ಭಾರತ ಲಾಂಛನ ಮತ್ತು ಘೋಷಣೆಯನ್ನು ನೋಟು ಹೊಂದಿದೆ. ಮಧ್ಯಭಾಗದತ್ತ ಭಾಷೆಗಳ ಪಟ್ಟಿಯನ್ನು ಅಳವಡಿಸಲಾಗಿದೆ. ಅಲ್ಲದೆ ಹಿಂಭಾಗದಲ್ಲಿ ಮಂಗಳಯಾನದ ಚಿತ್ರವೂ ಇದೆ.

ನೀವು ನೋಟನ್ನು ಪರಿಶೀಲಿಸಿದಾಗ ವುಗಳಲ್ಲಿ ಯಾವುದೇ ಭದ್ರತಾ ಲಕ್ಷಣ ಕಂಡುಬರದಿದ್ದರೆ ಅದು ನಕಲಿ ಆಗಿರುತ್ತದೆ ಎನ್ನವುದು ನೆನಪಿರಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News