ಲಂಚ ಸ್ವೀಕಾರ: ಸಹಕಾರ ಇಲಾಖೆ ಅಧಿಕಾರಿಗಳಿಬ್ಬರು ಎಸಿಬಿ ಬಲೆಗೆ

Update: 2018-12-04 15:37 GMT

ಬೆಂಗಳೂರು, ಡಿ.4: ಸಹಕಾರ ಸಂಘದ ಷೇರು ಸಂಗ್ರಹದ ಅನುಮತಿ ಪತ್ರ ನೀಡಲು 10 ಲಕ್ಷ ಲಂಚ ಕೇಳಿ 50 ಸಾವಿರ ನಗದು ಪಡೆಯುತ್ತಿದ್ದ ಆರೋಪದಡಿ ಸಹಕಾರ ಇಲಾಖೆಯ ಅಧಿಕಾರಿಗಳಿಬ್ಬರು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.

ಸಹಕಾರ ಇಲಾಖೆಯ ಆರ್.ಶ್ರೀಧರ್ ಹಾಗೂ ಪ್ರಥಮ ದರ್ಜೆ ಸಹಾಯಕಿ ಪುಷ್ಪಲತಾ ಎಂಬುವರನ್ನು ಎಸಿಬಿ ಮೊಕದ್ದಮೆ ದಾಖಲಿಸಿ ವಶಕ್ಕೆ ಪಡೆದಿದೆ ಎಂದು ತಿಳಿದುಬಂದಿದೆ. ಮಂಗಳವಾರ ನಗರದ ಆಲಿ ಆಸ್ಕರ್ ರಸ್ತೆಯ ಸಹಕಾರ ಇಲಾಖೆಯ ಸಹಕಾರ ಸಂಘಗಳ ನೋಂದಣಿ ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿದಾಗ ವಸತಿ ಮತ್ತು ಇತರ ಸಂಘಗಳ ನೋಂದಣಿ ಕಚೇರಿಯ ಹೆಚ್ಚುವರಿ ನೋಂದಣಿ ಅಧಿಕಾರಿ ಆರ್.ಶ್ರೀಧರ್ ಹಾಗೂ ಪ್ರಥಮ ದರ್ಜೆ ಸಹಾಯಕಿ ಪುಷ್ಪಲತಾ ಸಿಕ್ಕಿಬಿದ್ದಿದ್ದಾರೆ.

ನೋಂದಾಯಿತ ಸಹಕಾರ ಸಂಘ ಷೇರು ಸಂಗ್ರಹಕ್ಕೆ ಅನುಮತಿ ನೀಡಲು ಅರ್ಜಿ ಸಲ್ಲಿಸಿತ್ತು. ಈ ಅನುಮತಿ ಪತ್ರ ನೀಡಲು ಅರ್ಜಿದಾರರಿಂದ ಅಧಿಕಾರಿಗಳು 10 ಲಕ್ಷ ರೂ.ಗಳ ಬೇಡಿಕೆ ಇಟ್ಟಿದ್ದರು. ಕೊನೆ ಕ್ಷಣದಲ್ಲಿ 5 ಲಕ್ಷ ರೂ. ನೀಡಿ ಎಂದಿದ್ದರು. ಇಂದು ಮುಂಗಡವಾಗಿ 50 ಸಾವಿರ ರೂ. ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News