ಆಪರೇಷನ್ ಕಮಲ ಆರೋಪ: ಪೊಲೀಸ್ ಆಯುಕ್ತರಿಗೆ ಕಾಂಗ್ರೆಸ್ ದೂರು

Update: 2018-12-04 15:40 GMT

ಬೆಂಗಳೂರು, ಡಿ.4: ಆಪರೇಷನ್ ಕಮಲ ಎಂದು ಹೇಳಿಕೊಂಡು, ಕಾಂಗ್ರೆಸ್ ಶಾಸಕರ ಖರೀದಿಗೆ ಕೆಲ ವ್ಯಕ್ತಿಗಳು ಸಂಭಾಷಣೆ ನಡೆಸಿದ್ದು, ಈ ಸಂಬಂಧ ತನಿಖೆ ನಡೆಸುವಂತೆ ಒತ್ತಾಯಿಸಿ ಕಾಂಗ್ರೆಸ್ ನಾಯಕರು, ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಅವರಿಗೆ ಲಿಖಿತ ದೂರು ನೀಡಿದ್ದಾರೆ.

ಮಂಗಳವಾರ ನಗರದ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿದ ಕೆಪಿಸಿಸಿ ಸಂವಹನ ವಿಭಾಗದ ಅಧ್ಯಕ್ಷ ರಿಝ್ವನ್ ಅರ್ಶದ್ ನೇತೃತ್ವದ ತಂಡ, ಬಿಜೆಪಿ ಹಿರಿಯ ನಾಯಕರು ಆಪರೇಷನ್ ಕಮಲ ಮಾಡಲು ಹೊರಟ್ಟಿದ್ದು, ಈ ಕುರಿತು ಧ್ವನಿಯೊಂದು ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಈ ಹಿನ್ನೆಲೆ ಸೂಕ್ತ ತನಿಖೆ ನಡೆಸುವಂತೆ ಕೋರಿ ದೂರು ಸಲ್ಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ಒಂದು ಧ್ವನಿ ಪ್ರಸಾರವಾಗಿದ್ದು, ಅದರಲ್ಲಿ ಶಾಸಕ ಶ್ರೀರಾಮಲು ಆಪ್ತ ಸಹಾಯಕನೋರ್ವ, ಆಪರೇಷನ್ ಕಮಲದ ಬಗ್ಗೆ ಮಾತನಾಡಿದ್ದಾನೆ. ಇದೊಂದು ಗಂಭೀರ ಪ್ರಕರಣವಾಗಿದ್ದು, ಸೂಕ್ತ ತನಿಖೆ ನಡೆಸುವ ಅಗತ್ಯವಿದೆ ಎಂದು ಹೇಳಿದರು.

ದುಬೈ ಮೂಲದ ಉದ್ಯಮಿ ಜೊತೆ ಶ್ರೀರಾಮಲು ಮಾತನಾಡುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ ಅವರು, ಬಿಜೆಪಿ ಈಗ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಮೈತ್ರಿ ಸರಕಾರಕ್ಕೆ ಧಕ್ಕೆ ತರಲು ಪ್ರಯತ್ನ ಮಾಡುತ್ತಿದೆ. ಈ ಸಂಬಂಧ ಪೊಲೀಸರ ತನಿಖೆ ಅಗತ್ಯ ಎಂದು ರಿಝ್ವನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News