ಹಂಪಿ ಉತ್ಸವಕ್ಕೆ ಹಣವಿಲ್ಲದಷ್ಟು ದಾರಿದ್ರ್ಯ ರಾಜ್ಯ ಸರಕಾರಕ್ಕೆ ಬಂದಿಲ್ಲ: ಮುಖ್ಯಮಂತ್ರಿ ಕುಮಾರಸ್ವಾಮಿ
Update: 2018-12-04 21:16 IST
ಬೆಂಗಳೂರು, ಡಿ. 4: ಹಂಪಿ ಉತ್ಸವ ಆಚರಣೆ ಬಗ್ಗೆ ನಾವು ಯಾವುದೇ ಆದೇಶ ಹೊರಡಿಸಿಲ್ಲ. ಆದರೆ, ಜನರ ಅಪೇಕ್ಷೆ ಇದ್ದರೆ ಸರಳವಾಗಿ ಹಂಪಿ ಉತ್ಸವ ಆಚರಿಸಲು ನಿರ್ದೇಶನ ನೀಡುತ್ತೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಹಂಪಿ ಉತ್ಸವ ಮುಂದೂಡಿಕೆ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಉತ್ಸವ ರದ್ದುಗೊಳಿಸುವ ಬಗ್ಗೆ ಚರ್ಚಿಸಿದ್ದಾರೆ. ಈ ಸಂಬಂಧ ಸರಕಾರ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದರು.
ಹಂಪಿ ಉತ್ಸವಕ್ಕೆ ಹಣವಿಲ್ಲದಷ್ಟು ದಾರಿದ್ರ್ಯ ರಾಜ್ಯ ಸರಕಾರಕ್ಕೇನೂ ಬಂದಿಲ್ಲ. ಆದರೆ, ಉತ್ಸವ ಆಚರಣೆಗೆ ಭಿಕ್ಷೆ ಎತ್ತುತ್ತೇವೆಂದು ಹೇಳುವವರು ಈ ಹಿಂದೆ ಬಳ್ಳಾರಿಯನ್ನು ಎಷ್ಟರ ಮಟ್ಟಿಗೆ ಲೂಟಿಗೈದಿದ್ದಾರೆಂಬುದು ಗೊತ್ತಿದೆ ಎಂದು ಶಾಸಕ ಸೋಮಶೇಖರ ರೆಡ್ಡಿ, ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿಕೆಗೆ ತಿರುಗೇಟು ನೀಡಿದರು.