×
Ad

ಮಂತ್ರಾಲಯ ರಾಘವೇಂದ್ರಸ್ವಾಮಿ ಮಠ ಮೊದಲು ಆರಾಧನೆ ನಡೆಸಲಿ: ಹೈಕೋರ್ಟ್ ಆದೇಶ

Update: 2018-12-04 21:19 IST

ಬೆಂಗಳೂರು, ಡಿ.4: ಕೊಪ್ಪಳ ಜಿಲ್ಲೆಯ ಆನೆಗೊಂದಿಯ ನವ ವೃಂದಾವನದಲ್ಲಿ ಡಿ.5ರಿಂದ ಮೂರು ದಿನಗಳ ಕಾಲ ನಡೆಯುವ ಪದ್ಮನಾಭ ತೀರ್ಥರ ಆರಾಧನೆಯನ್ನು ಮೊದಲು ಯಾರು ನಡೆಸಬೇಕು ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮೊದಲು ಆರಾಧನೆ ನಡೆಸಲು ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠಕ್ಕೆ ಅನುಮತಿ ನೀಡಿ ಆದೇಶಿಸಿದೆ.

ಮಂಗಳವಾರ ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರು ಈ ಮೇಲಿನ ಆದೇಶ ನೀಡಿತು. ಮೊದಲ ಒಂದೂವರೆ ದಿನ ಮಂತ್ರಾಲಯ ಮಠ ಹಾಗೂ ನಂತರದ ಒಂದೂವರೆ ದಿನ ಉತ್ತರಾದಿ ಮಠ ಆರಾಧನೆ ನಡೆಸುವಂತೆ ಹೇಳಿದೆ. ಅದರಂತೆ, ಡಿ.5ರ ಪೂರ್ತಿ ದಿನ ಹಾಗೂ ಡಿ.6ರ ಮಧ್ಯಾಹ್ನ 3 ಗಂಟೆವರೆಗೆ ಮಂತ್ರಾಲಯ ಮಠ ಆರಾಧನೆ ನಡೆಸಬೇಕು. ಡಿ. 6 ಮಧ್ಯಾಹ್ನ 3 ಗಂಟೆ 1 ನಿಮಿಷದಿಂದ ಡಿ.7ರ ಪೂರ್ತಿ ದಿನ ಉತ್ತರಾದಿ ಮಠ ಆರಾಧನೆ ನಡೆಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.

ವೃಂದಾವನ ಜಮೀನು ಮಾಲಕತ್ವ ವಿವಾದಕ್ಕೆ ಸಂಬಂಧಿಸಿದ ಮೂಲ ವ್ಯಾಜ್ಯ ಇತ್ಯರ್ಥವಾಗುವವರೆಗೆ ತಮಗೆ ಮೊದಲು ಆರಾಧನೆಗೆ ಅವಕಾಶ ಕೊಡಬೇಕು ಎಂದು ಕೋರಿ ಮಂತ್ರಾಲಯ ಮಠದ ಸ್ವಾಮೀಜಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ಆರಾಧನೆ ವೇಳೆ ಶಾಂತಿ-ಸುವ್ಯವಸ್ಥೆ ಕಾಪಾಡಲು ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಸೂಕ್ತ ಪೊಲೀಸ್ ಬಂದೂಬಸ್ತ್ ಒದಗಿಸಲು ಸಂಬಂಧಪಟ್ಟ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅಲ್ಲದೇ ಮೂಲ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಕಾಲಕಾಲಕ್ಕೆ ನೀಡಿರುವ ತೀರ್ಪುಗಳನ್ನು ಹೈಕೋರ್ಟ್‌ಗೆ ಹಾಜರುಪಡಿಸುವಂತೆ ಸೂಚಿಸಿ ವಿಚಾರಣೆಯನ್ನು ಡಿ.10ಕ್ಕೆ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News