×
Ad

ಡಿ.5ರಂದು ಮಕ್ಕಳ ದಿನಾಚರಣೆ, ಪ್ರಶಸ್ತಿ ಪ್ರದಾನ: ಮಕ್ಕಳಿಗೆ ಹೊಯ್ಸಳ-ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ಪ್ರದಾನ

Update: 2018-12-04 21:50 IST

ಬೆಂಗಳೂರು, ಡಿ.4: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ವತಿಯಿಂದ ಪ್ರತಿ ವರ್ಷ ನ.14ರಂದು ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ರಾಜ್ಯ ಮಟ್ಟದಲ್ಲಿ ಆಚರಿಸಲಾಗುತ್ತಿದೆ. ಅದರಂತೆ ಈ ಸಾಲಿನಲ್ಲಿಯೂ ಕಾರ್ಯಕ್ರಮವನ್ನು ಆಚರಿಸಬೇಕಾಗಿತ್ತು. ಆದರೆ, ಕೇಂದ್ರ ಸಚಿವ ಅನಂತ್‌ ಕುಮಾರ್ ನ.12ರಂದು ನಿಧನರಾದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು.

ಇದೀಗ ಡಿ.5ರಂದು ಬೆಳಗ್ಗೆ 9.30ಕ್ಕೆ ನಗರದ ಕಬ್ಬನ್‌ಪಾರ್ಕ್‌ನಲ್ಲಿರುವ ಜವಾಹರ್ ಬಾಲಭವನದಲ್ಲಿ ಆಯೋಜಿಸಲಾಗಿರುವ ಮಕ್ಕಳ ದಿನಾಚರಣೆಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದು, ಧೈರ್ಯ ಸಾಹಸ ಪ್ರದರ್ಶಿಸಿದ ಮಕ್ಕಳಿಗೆ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.

ಧೈರ್ಯ ಸಾಹಸ ಪ್ರದರ್ಶಿಸಿ, ಸಮಯ ಪ್ರಜ್ಞೆಯಿಂದ ಇತರರ ಪ್ರಾಣವನ್ನು ಅಪಾಯದಿಂದ ರಕ್ಷಿಸಿದಂತಹ ಮಕ್ಕಳಿಗೆ ಶೌರ್ಯ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಮಕ್ಕಳಿಗೆ 10 ಸಾವಿರ ರೂ.ನಗದು ಬಹುಮಾನ, ಪ್ರಶಸ್ತಿ ಪತ್ರ, ನೆನೆಪಿನ ಕಾಣಿಕೆಯನ್ನು ನೀಡಲಾಗುತ್ತದೆ. 2018-19ನೇ ಸಾಲಿಗೆ 8 ಮಕ್ಕಳಿಗೆ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಬೆಳಗಾವಿ ಜಿಲ್ಲೆಯ ವಡಗಾಂವನ ನಿಖಿಲ ದಯಾನಂದ ಜಿತೂರಿ(17 ವರ್ಷ), ಗೋಕಾಕ ತಾಲೂಕಿನ ವಡೇರಹಟ್ಟಿಯ ಶಿವಾನಂದ ಹೊಸಟ್ಟಿ(10 ವರ್ಷ), ಸಿದ್ದಪ್ಪಾ ಕೆಂಪಣ್ಣ ಹೊಸಟ್ಟಿ(14 ವರ್ಷ), ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‌ನ ಜೆ.ಪ್ರಮಿತ್‌ ರಾಜ್(16 ವರ್ಷ), ಕಾರವಾರದ ಶಿರಸಿಯ ದಿವಂಗತ ಹೇಮಂತ್ ಎಸ್.ಎಂ., ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆರ್ತಿ ಕಿರಣ್ ಶೇಟ್(9 ವರ್ಷ), ಮೈಸೂರಿನ ಎಸ್.ಎನ್.ವೌರ್ಯ(13 ವರ್ಷ) ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಿಟ್ಟಡೆ ಗ್ರಾಮದ ಸುಜಯ(10 ವರ್ಷ)ರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಅದೇ ರೀತಿ, ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಸ್ವಯಂ ಸೇವಾ ಸಂಸ್ಥೆ ಮತ್ತು ವ್ಯಕ್ತಿಗಳ ಸೇವೆಯನ್ನು ಗುರುತಿಸಿ ಪ್ರತಿ ವರ್ಷ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಅದರಂತೆ 2018ನೇ ಸಾಲಿನಲ್ಲಿ 4 ಸಂಸ್ಥೆಗಳು ಹಾಗೂ 4 ವ್ಯಕ್ತಿಗಳನ್ನು ಆಯ್ಕೆ ಮಾಡಿ ಇವರಿಗೆ ರಾಜ್ಯ ಪ್ರಶಸ್ತಿಯನ್ನು ವಿತರಿಸಲಾಗುವುದು.

ಸಂಘ-ಸಂಸ್ಥೆಗಳಿಗೆ ನೀಡುವ ಪ್ರಶಸ್ತಿಯು ಒಂದು ಲಕ್ಷ ರೂ.ನಗದು ಹಾಗೂ ಪ್ರಶಸ್ತಿ ಪತ್ರ ಮತ್ತು ವೈಯಕ್ತಿಕ ಪ್ರಶಸ್ತಿಯು 25 ಸಾವಿರ ರೂ.ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಬೆಂಗಳೂರಿನ ಸುರಭಿ ಫೌಂಡೇಷನ್ ಟ್ರಸ್ಟ್(ರಿ), ಕೊಡಗು ಜಿಲ್ಲೆಯ ಚೆಶೈರ್ ಹೋಮ್ಸ್ ಇಂಡಿಯಾ ಕೂರ್ಗ್, ಬೆಳಗಾವಿಯ ನಂದನ ಮಕ್ಕಳ ಧಾಮ, ಕಲಬುರ್ಗಿಯ ಡಾನ್ ಬಾಸ್ಕೋ ಸೊಸೈಟಿಯನ್ನು ಆಯ್ಕೆ ಮಾಡಲಾಗಿದೆ. ವೈಯಕ್ತಿಕ ಪ್ರಶಸ್ತಿಗೆ ತುಮಕೂರು ಜಿಲ್ಲೆಯ ಅನ್ನಪೂರ್ಣ ವೆಂಕಟನಂಜಪ್ಪ, ಉಡುಪಿ ಜಿಲ್ಲೆಯ ಕುಂಜಿಬೆಟ್ಟುವಿನ ಜಯಶ್ರೀ ಭಟ್, ಬೆಳಗಾವಿ ಜಿಲ್ಲೆಯ ಭಾಗ್ಯನಗರದ ಉಮೇಶ ಜಿ.ಕಲಘಟಗಿ ಹಾಗೂ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಎಚ್.ಸಿ.ರಾಘವೇಂದ್ರ ಎಂಬವರನ್ನು ಆಯ್ಕೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News