ದೇವರಾಜ ಅರಸು ಪ್ರಶಸ್ತಿಗೆ ಶಿವಾಜಿ ಛತ್ರಪ್ಪ ಕಾಗಣಿಕಾರ ಆಯ್ಕೆ: ಡಿ.5ರಂದು ಪ್ರಶಸ್ತಿ ಪ್ರದಾನ

Update: 2018-12-04 16:22 GMT

ಬೆಂಗಳೂರು, ಡಿ.4: 2018ನೇ ಸಾಲಿನ ಡಿ.ದೇವರಾಜ ಅರಸು ರಾಜ್ಯ ಮಟ್ಟದ ಪ್ರಶಸ್ತಿಗೆ ಸಾಮಾಜಿಕ ಮತ್ತು ಪ್ರಗತಿಪರ ಸುಧಾರಕ ಬೆಳಗಾವಿಯ ಶಿವಾಜಿ ಛತ್ರಪ್ಪಕಾಗಣಿಕಾರ ಆಯ್ಕೆಯಾಗಿದ್ದಾರೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಸಿ.ಪುಟ್ಟರಂಗ ಶೆಟ್ಟಿ ತಿಳಿಸಿದರು.

ಮಂಗಳವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಡಿ.5ರಂದು ಬೆಳಗ್ಗೆ 10.30ಕ್ಕೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಈ ಪ್ರಶಸ್ತಿಯು 5 ಲಕ್ಷ ರೂ.ನಗದು ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿರುತ್ತದೆ ಎಂದರು. ಶಿವಾಜಿ ಛತ್ರಪ್ಪಕಾಗಣಿಕಾರ ಜನ ಜಾಗರಣಾ ಸಂಸ್ಥೆ ಸ್ಥಾಪಿಸಿ, ರಾತ್ರಿ ಶಾಲೆಗಳನ್ನು ನಡೆಸಿದರು. ಅರಣ್ಯ ಪ್ರದೇಶಗಳಲ್ಲಿ ಸುತ್ತಾಡಿ ಅಲ್ಲಿನ ಜನರಿಗೆ ಶೈಕ್ಷಣಿಕ ವಿಷಯ ಕುರಿತು ಜಾಗೃತಿ ಮೂಡಿಸಿದರು ಎಂದು ಅವರು ಹೇಳಿದರು.

‘ಧೀನಬಂಧು’ ಎಂಬ ಸರಳ ಗೊಬರ್ ಗ್ಯಾಸ್‌ಗಳನ್ನು ಸರಕಾರೇತರ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಪ್ರತಿ ಮನೆಯಲ್ಲೂ ಆಂದೋಲನ ರೀತಿಯಲ್ಲಿ ಆರಂಭಿಸಿದರು. ಇದರ ಬಳಕೆಯಲ್ಲಿ ಸರಕಾರ ಪ್ರಥಮ ಸ್ಥಾನದಲ್ಲಿ ಇದ್ದರೆ ಅದಕ್ಕೆ ಶಿವಾಜಿ ಅವರೇ ಕಾರಣಕರ್ತರು ಎಂದು ಪುಟ್ಟರಂಗ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು. 1978 ರಲ್ಲಿ ‘ಮಹಿಳಾ ಬಚತ್ ಘಟ್’ ಎಂಬ ಮಹಿಳಾ ಸ್ವಸಹಾಯ ಗುಂಪುಗಳನ್ನು ರಚಿಸಿ ಸಾವಿರಾರು ಸದಸ್ಯರನ್ನು ನೇಮಿಸಿ ಮಹಿಳಾ ಸಶಕ್ತಿಕರಣಕ್ಕೆ ಬುನಾದಿ ಹಾಕಿದರು. ಅಲ್ಲದೆ ಕೆರೆ ಸುತ್ತಮುತ್ತ ಗಿಡ ನೆಡುವ ಕಾರ್ಯಕ್ರಮ, ಉದ್ಯೋಗ ಖಾತರಿ ಬಗ್ಗೆ ಅರಿವು, ಹೀಗೆ ಹತ್ತು ಹಲವು ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಮನ ಗೆದ್ದಿದ್ದಾರೆ ಎಂದು ಅವರು ಹೇಳಿದರು.

ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಹಾಗೂ ಹಿರಿಯ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಮಾತನಾಡಿ, ರಾಜ್ಯ ಸರಕಾರವು ನನ್ನ ಅಧ್ಯಕ್ಷತೆಯಲ್ಲಿ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲು ಸಮಿತಿಯನ್ನು ರಚಿಸಿತ್ತು. ಒಬ್ಬ ಅರ್ಹ, ಸರಳ ಸಮಾಜ ಪರವಾದ ವ್ಯಕ್ತಿ ಬೆಳಗಾವಿಯ ಶಿವಾಜಿ ಛತ್ರಪ್ಪ ಕಾಗಣಿಕಾರರನ್ನು ಆಯ್ಕೆ ಮಾಡಿರುವುದು ತಮಗೆ ಸಂತಸ ತಂದಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News