ಗೌರಿ ಹತ್ಯೆ ಪ್ರಕರಣದಲ್ಲಿ ಸನಾತನ ಸಂಸ್ಥೆಯನ್ನು ಸಿಲುಕಿಸಲು ಕಾಂಗ್ರೆಸ್ ಸಂಚು: ಚೇತನ್ ರಾಜಹಂಸ

Update: 2018-12-04 16:29 GMT
ಗೌರಿ ಲಂಕೇಶ್

ಬೆಂಗಳೂರು, ಡಿ.4: ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಸನಾತನ ಸಂಸ್ಥೆಯನ್ನ ಸಿಲುಕಿಸಲಾಗಿದೆ. ಈ ಮೂಲಕ ಮಾಲೆಗಾಂವ್-2 ಮಾಡಲು ಕಾಂಗ್ರೆಸ್ ಸಂಚು ರೂಪಿಸಿದೆ ಎಂದು ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ ಚೇತನ್ ರಾಜಹಂಸ ಆರೋಪ ಮಾಡಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಸುಖಾಸುಮ್ಮನೆ ಸನಾತನ ಸಂಸ್ಥೆಯನ್ನು ಸಿಲುಕಿಸಲಾಗಿದೆ. ಸನಾತನ ಗ್ರಂಥಗಳನ್ನು ಓದಿ ಹತ್ಯೆ ನಡೆದಿದೆ ಅನ್ನುವುದು ಹಾಸ್ಯಾಸ್ಪದ ವಿಷಯವಾಗಿದೆ. ಹಾಗಾದರೆ, ಲಕ್ಷಗಟ್ಟಲೆ ಬಲಿ ಪಡೆಯುತ್ತಿರುವ ಜಿಹಾದಿ ಉಗ್ರಗಾಮಿಗಳು ಮತ್ತು ನಕ್ಸಲರು ಯಾವ ಗ್ರಂಥ ಓದಿದ್ದಾರೆ ಎಂದು ಪ್ರಶ್ನೆ ಮಾಡಿದರು.

ಸನಾತನ ಸಂಸ್ಥೆ ವಿರುದ್ದ ಷಡ್ಯಂತ್ರ ನಡೆಯುತ್ತಿದೆ. ಇದರಲ್ಲಿ ಅವರು ಯಶಸ್ವಿಯಾಗಲ್ಲ. ಇದು ಕಾಲ್ ದ ಡಾಗ್ ಮ್ಯಾಡ್ ಅಂಡ್ ಶೂಟ್ ಇಟ್ ಹಿಮ್ ಎಂಬಂತೆ ಸನಾತನ ಸಂಸ್ಥೆಯನ್ನು ನಿಷೇಧಿಸಿ ಹಿಂದುತ್ವ ಕಾರ್ಯವನ್ನು ನಿಲ್ಲಿಸುವ ಸಂಚಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕ್ಷಾತ್ರಧರ್ಮತೇಜಸ್ಸು ಪುಸ್ತಕ ಓದಿ ಪ್ರೇರಿತರಾಗಿ ಹತ್ಯಗೈದಿದ್ದಾರೆ ಎಂದು ಎಸ್‌ಐಟಿ ಪ್ರೆಸ್‌ನೋಟ್‌ನಲ್ಲಿ ತಿಳಿಸಿದೆ. ಆರೋಪಿಗಳಿಗೆ ಇನ್ನೂ ಚಾರ್ಚ್‌ಶೀಟ್ ಕಾಪಿ ಕೊಟ್ಟಿಲ್ಲ. ಎಸ್‌ಐಟಿ ತನಿಖೆ ಬೆಟ್ಟ ಅಗೆದು ಇಲಿ ಹಿಡಿದಂತಾಗಿದೆ. ತನಿಖಾ ಲೋಪ ಗೊತ್ತಾಗಿಬಿಡುತ್ತೆ ಎಂದು ಕೋಕಾ ಕಾಯಿದೆ ಹಾಕಿದ್ದಾರೆ. ಕಥೆ ಹೇಳೋದಕ್ಕೆ 9 ಸಾವಿರ ಪೇಜ್ ಚಾರ್ಜ್ ಶೀಟ್ ಬೇಕಿತ್ತಾ? ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಿತ್ತಾ ಎಂದರು.

ದಂಡುಪಾಳ್ಯ ರಿಲೀಸ್ ಆದಾಗ ಬೆಂಗಳೂರಿನಲ್ಲಿ ಒಂದು ತಿಂಗಳು ಕ್ರೈಂ ರೇಟ್ ಜಾಸ್ತಿಯಾಗಿತ್ತು. ಅಲ್ಲದೆ, ಓಂ ಮೂವಿಯಲ್ಲಿ ಲಾಂಗ್‌ಗಳ ಅಬ್ಬರ ಜೋರಾಗಿತ್ತು. ಹಾಗಾದ್ರೆ ಆ ಸಿನಿಮಾಗಳನ್ನು ಯಾಕೆ ಸ್ವಾಮಿ ಬ್ಯಾನ್ ಮಾಡಿಲ್ಲ ಅಂತ ವಕೀಲರಾದ ಅಮೃತೇಶ್ ಪ್ರಶ್ನೆ ಮಾಡಿದರು.

ರಾಂಗೋಪಾಲ್ ವರ್ಮಾ ಚಿತ್ರದಲ್ಲಿ ನೈಜತೆ ಬರಬೇಕು ಅಂತಾ ತಲೆ ಕಡಿಯೋದನ್ನು ನೇರವಾಗಿ ತೋರಿಸ್ತಾರೆ. ಈ ಚಾರ್ಜ್‌ಶೀಟ್‌ನ್ನು ಫಿಲ್ಮ್ ಚೇಂಬರ್‌ನವರಿಗೆ ಕೊಟ್ಟರೆ ಒಂದೊಳ್ಳೆ ಸಿನಿಮಾ ನಿರ್ಮಾಣ ಮಾಡುತ್ತಾರೆ ಎಂದು ವ್ಯಂಗ್ಯ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News