ಸಿನೆಮಾ ನಿರ್ದೇಶಕ ಎ.ಆರ್.ಬಾಬು ನಿಧನ

Update: 2018-12-04 16:32 GMT

ಬೆಂಗಳೂರು, ಡಿ.4: ಸಿನೆಮಾ ನಿರ್ದೇಶಕ, ನಟ ಎ.ಆರ್.ಬಾಬು ಮಂಗಳವಾರ ನಿಧನ ಹೊಂದಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಬಾಬು ಅವರನ್ನು ನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಬೆಳಗ್ಗೆ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ ಎಂದು ಅವರ ಕುಟುಂಬವರ್ಗ ತಿಳಿಸಿದೆ.

ಎ.ಆರ್. ಬಾಬು ಅವರಿಗೆ 56 ವರ್ಷ ವಯಸ್ಸಾಗಿತ್ತು. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಅವರು, ಹಲೋ ಯಮ, ಖಳನಾಯಕ, ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ, ಕಾಸಿದ್ದವನೇ ಬಾಸು, ಚಮ್ಕಾಯಿಸಿ ಚಿಂದಿ ಉಡಾಯಿಸಿ, ಕೂಲಿ ರಾಜ, ಮರುಜನ್ಮ ಚಿತ್ರಗಳನ್ನು ನಿರ್ದೇಶಿಸಿದ್ದರು. ಹಿರಿಯ ನಿರ್ದೇಶಕರಾಗಿದ್ದ ಎ.ಆರ್.ಬಾಬು ಅವರ ಗರಡಿಯಲ್ಲಿ ನಿರ್ದೇಶಕ ಜೋಗಿ ಪ್ರೇಮ್ ಸೇರಿದಂತೆ ಪ್ರಮುಖರು ಪಳಗಿದ್ದರು. ಬಾಬು ಅವರ ನಿಧನಕ್ಕೆ ಚಿತ್ರರಂಗದ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಜಗ್ಗೇಶ್ ಟ್ವೀಟ್: ನನ್ನ ಆತ್ಮೀಯ ಸಹೋದರ ನಿರ್ದೇಶಕ ಎ.ಆರ್.ಬಾಬು ಅಲ್ಲಾಹುವಿನ ಪಾದ ಸೇರಿದ. ಯಾರದೋ ದುಡ್ಡು, ಕಾಸಿದ್ದವನೆ ಬಾಸ್ ಎರಡು ಚಿತ್ರಗಳಲ್ಲಿ ನನ್ನ ಜೊತೆ ಕೆಲಸ ಮಾಡಿದ್ದು, ಚಿತ್ರರಂಗಕ್ಕೆ ನಿರ್ದೇಶಕ ಪ್ರೇಮ್ ನನ್ನು ಪರಿಚಯಿಸಿದ ಮಹನೀಯ. ನಮ್ಮಿಬ್ಬರ ಗೆಳೆತನ 30 ವರ್ಷದ್ದು, ನೋವಿನಿಂದ ಮಿತ್ರನಿಗೆ ವಿದಾಯ ಹೇಳುತ್ತಿದ್ದೇನೆ ಎಂದು ಹಿರಿಯ ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News