ಕೆಪಿಎಸ್‌ಸಿ ನೇಮಕಾತಿ ವಿಳಂಬ ಖಂಡಿಸಿ ಉದ್ಯೋಗಾಕಾಂಕ್ಷಿಗಳ ಧರಣಿ

Update: 2018-12-04 16:37 GMT

ಬೆಂಗಳೂರು, ಡಿ.4: ಕೆಪಿಎಸ್‌ಸಿ ನೇಮಕ ವಿಳಂಬವಾಗುತ್ತಿರುವುದನ್ನು ಖಂಡಿಸಿ ವಿವಿಧ ಇಲಾಖೆಗಳ ಉದ್ಯೋಗಾಕಾಂಕ್ಷಿಗಳು ಕೆಪಿಎಸ್‌ಸಿ ಕೇಂದ್ರ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು.

ಶಾಸಕ ಸುರೇಶ್ ಕುಮಾರ್ ನೇತೃತ್ವದಲ್ಲಿ ನಗರದ ವಿಧಾನಸೌಧದ ಹಿಂಭಾಗದಲ್ಲಿನ ಕೆಪಿಎಸ್‌ಸಿ ಕಚೇರಿ ಎದುರು ಜಮಾಯಿಸಿದ್ದ ನೂರಾರು ಉದ್ಯೋಗಾಕಾಂಕ್ಷಿಗಳು ಕೆಪಿಎಸ್‌ಸಿ ವಿರುದ್ಧ ಧಿಕ್ಕಾರಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

2015ನೆ ವೃಂದದ ಕೆಪಿಎಸ್‌ಸಿ ಪರೀಕ್ಷೆಗಾಗಿ 2017ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಅದೇ ರೀತಿ, 2017ರ ಆಗಸ್ಟ್‌ನಲ್ಲಿ ಪ್ರಾಥಮಿಕ ಪರೀಕ್ಷೆ ಹಾಗೂ ಡಿಸೆಂಬರ್ ತಿಂಗಳಲ್ಲಿ ಮುಖ್ಯ ಪರೀಕ್ಷೆ ನಡೆಸಲಾಗಿತ್ತು. ಆದರೆ, ಪರೀಕ್ಷೆಗಳು ನಡೆದು ಒಂದು ವರ್ಷವಾಗುತ್ತಿದ್ದರೂ ಫಲಿತಾಂಶ ಪ್ರಕಟಿಸಿಲ್ಲ. ಈ ಸಂಬಂಧ ಸರಕಾರಕ್ಕೆ ಹಾಗೂ ಕೆಪಿಎಸ್‌ಸಿ ಅಧಿಕಾರಿಗಳಿಗೆ ಹಲವು ಬಾರಿ ಪತ್ರ ಬರೆದು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕೆಪಿಎಸ್‌ಸಿಯಿಂದ ನೇಮಕಾತಿಗಳಿಗಾಗಿ ಅಧಿಸೂಚನೆ ಹೊರಡಿಸಿ ನಿಗದಿತ ವಯೋಮಿತಿಯನ್ನು ಅಳವಡಿಸಲಾಗುತ್ತದೆ. ಆದರೆ, ಅವರು ಅಧಿಸೂಚನೆಯ ನಂತರ ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಣೆ, ಅಂತಿಮ ಪಟ್ಟಿ ಪ್ರಕಟಣೆಗಾಗಿ ವಿಳಂಬ ಮಾಡುತ್ತಾರೆ. ಇದರಿಂದಾಗಿ ನಮ್ಮ ನೇಮಕಾತಿಯ ವಯೋಮಿತಿ ಮುಗಿದಿರುತ್ತದೆ. ಇಲ್ಲಿಗೆ ನಮ್ಮ ನೇಮಕಾತಿಗಳಿಗೆ ತಡೆ ನೀಡಲಾಗುತ್ತದೆ. ಕೆಪಿಎಸ್‌ಸಿ ಇಂತಹ ನೀತಿಗಳ ಮೂಲಕ ನಮ್ಮ ಜೀವನದ ಜತೆ ಚೆಲ್ಲಾಡವಾಡುತ್ತಿದೆ ಎಂದು ಕೆಎಎಸ್ ಅಭ್ಯರ್ಥಿ ರಘುನಾಥ್ ಬೇಸರ ವ್ಯಕ್ತಪಡಿಸಿದರು.

ಕೆಪಿಎಸ್‌ಸಿ ಅಧಿಕಾರಿಗಳೊಂದಿಗೆ ಸುಮಾರು ಒಂದೂವರೆ ಗಂಟೆಗಳ ಕಾಲ ಸುಧೀರ್ಷ ಚರ್ಚೆ ನಡೆಸಿದ ಬಳಿಕ ಮಾತನಾಡಿದ ಶಾಸಕ ಸುರೇಶ್ ಕುಮಾರ್, ವಿವಿಧ ಇಲಾಖೆಗಳಲ್ಲಿ ಬಾಕಿಯಿರುವ ನೇಮಕಾತಿಗಳಿಗೆ ಸಂಬಂಧಿಸಿದಂತೆ ಕೂಡಲೇ ಪಟ್ಟಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದೇನೆ. ಅವರು ಕಾಲಾವಕಾಶ ಕೇಳಿದ್ದಾರೆ ಎಂದರು.

ಡಿ.26 ರವರೆಗೂ ಅಧಿವೇಶನ ಹಾಗೂ ಸಾಲು ಸಾಲುಗಳ ರಜೆಗಳ ಹಿನ್ನೆಲೆಯಲ್ಲಿ ಕೆಪಿಎಸ್‌ಸಿ ಅಂತಿಮ ಪಟ್ಟಿ ಬಿಡುಗಡೆ ಮಾಡಲು ಕಾಲಾವಕಾಶ ನೀಡಲಾಗಿದೆ. ಅಷ್ಟರೊಳಗೆ ಅವರು ಪಟ್ಟಿ ಬಿಡುಗಡೆ ಮಾಡದಿದ್ದಲ್ಲಿ ಮತ್ತೊಮ್ಮೆ ಕೆಪಿಎಸ್‌ಸಿ ಬಾಗಿಲು ಕದ ತಟ್ಟಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕೆಪಿಎಸ್ಸಿ ಆಯ್ಕೆ ಮಾಡಿರುವ ಟೈಪಿಸ್ಟ್‌ಗಳ ಪಟ್ಟಿಗೆ ಅನುಮೋದನೆ ಸಿಗುವ ಸಾಧ್ಯತೆ ಇದೆ. ಅದೇ ರೀತಿ, ಅಬಕಾರಿ ಆರಕ್ಷಕ ಹುದ್ದೆಗಳಲ್ಲಿ ಮೂರು ದಿನಗಳಲ್ಲಿ ಮಹಿಳೆ, ಒಂದು ವಾರದಲ್ಲಿ ಪುರುಷರ ಆಯ್ಕೆ ಪಟ್ಟಿ ಬಿಡುಗಡೆಯಾಗಲಿದ್ದು, ಆರೋಗ್ಯ ನಿರೀಕ್ಷಕ ಹುದ್ದೆಗಳಿಗೆ ಒಂದು ವಾರದಲ್ಲಿ ಪಟ್ಟಿ ಪ್ರಕಟಿಸುವ ಭರವಸೆಯನ್ನು ಕೆಪಿಎಸ್ಸಿ ಅಧಿಕಾರಿಗಳು ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

ಇತ್ತೀಚಿನ ದಿನಗಳಲ್ಲಿ ಕೆಪಿಎಸ್‌ಸಿ ಹೆಸರು ಸಂಪೂರ್ಣ ಹಾಳಾಗಿದೆ. ಅದನ್ನು ಸರಿಪಡಿಸಿಕೊಳ್ಳಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿಯಿಲ್ಲ. ಹೀಗಾಗಿ, ಯಾವುದೇ ಪ್ರಕ್ರಿಯೆಗಳು ಸುಗಮವಾಗಿ ನೆರವೇರಲು ಸಾಧ್ಯವಾಗುತ್ತಿಲ್ಲ ಎಂದು ಸುರೇಶ್ ಕುಮಾರ್ ದೂರಿದರು.

ನನ್ನ ಮಗುವಿಗೆ ಎರಡು ತಿಂಗಳಿದ್ದಾಗ ಪರೀಕ್ಷೆ ಬರೆದಿದ್ದೆ. ಈಗ ಮಗಳಿಗೆ ಎರಡು ವರ್ಷಗಳು ತುಂಬಿದೆ. ಇದುವರೆಗೂ ಫಲಿತಾಂಶ ಪ್ರಕಟವಾಗಿಲ್ಲ. ಕೆಪಿಎಸ್‌ಸಿ ಈ ನೀತಿಯಿಂದಾಗಿ ಸಂಕಷ್ಟದಲ್ಲಿದ್ದೇವೆ.

-ಪಲ್ಲವಿ, ಉದ್ಯೋಗಾಕಾಂಕ್ಷಿ, ಬೀದರ್

2016 ರಲ್ಲಿ ನೋಟಿಫಿಕೇಷನ್ ಬಂದು, ಪರೀಕ್ಷೆ ಬರೆದಿದ್ದೇವೆ. ಅದರ ಫಲಿತಾಂಶ ಪ್ರಕಟ ಮಾಡಲು ಒಂದು ವರ್ಷ ಬೇಕಾಯಿತು. ಇದೀಗ ಅಂತಿಮ ಪಟ್ಟಿ ಪ್ರಕಟಿಸಲು ಮುಂದಾಗುತ್ತಿಲ್ಲ. ನಾವು ಕೆಪಿಎಸ್‌ಸಿಯಲ್ಲಿ ಕೇಳಿದರೆ ಇವತ್ತು-ನಾಳೆ ಎಂದು ಅಲೆದಾಡಿಸುತ್ತಿದ್ದಾರೆ. ಪ್ರತಿಸಲ ಬೆಂಗಳೂರಿಗೆ ಬಂದು ಹೋಗಲು ಕನಿಷ್ಠ 2 ಸಾವಿರ ಬೇಕಾಗುತ್ತದೆ. ಅಲ್ಲದೆ, ನಾವು ಬೇರೆ ಕಡೆ ಕೆಲಸ ಹುಡುಕಿಕೊಳ್ಳಲು ಸಾಧ್ಯವಾಗುತ್ತಿಲ್ಲ.

-ರೇಖಾ, ಟೈಫಿಸ್ಟ್ ಉದ್ಯೋಗಾಕಾಂಕ್ಷಿ, ಬಳ್ಳಾರಿ

ನಾನು ಅಬಕಾರಿ ಆರಕ್ಷಕ ಹುದ್ದೆಗೆ ಪರೀಕ್ಷೆ ಬರೆದಿದ್ದೇನೆ. ಆದರೆ, ಇದುವರೆಗೂ ಅದರ ಫಲಿತಾಂಶ ಪ್ರಕಟಿಸಿಲ್ಲ. ನಾವು ಹಲವು ಬಾರಿ ಕೆಪಿಎಸ್‌ಸಿಗೆ ಪತ್ರ ಬರೆದು, ಖುದ್ದು ಭೇಟಿ ಮಾಡಿ ಕೇಳಿದರೂ ಸರಿಯಾದ ಉತ್ತರ ಸಿಗುತ್ತಿಲ್ಲ. ಪ್ರಾಧಿಕಾರ ಬೇಗ ಫಲಿತಾಂಶ ಪ್ರಕಟಿಸಿದರೆ, ಮುಂದಿನ ದಾರಿಯನ್ನು ಹುಡುಕಿಕೊಳ್ಳಲು ಸುಲಭವಾಗುತ್ತದೆ.

-ರವಿಕುಮಾರ್, ಉದ್ಯೋಗಾಕಾಂಕ್ಷಿ, ಚಿಕ್ಕಬಳ್ಳಾಪುರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News