ಅಹಿಂದ ವರ್ಗಗಳ ಐಕ್ಯತೆಯಿಂದ ರಾಜಕೀಯ ಪರಿಸ್ಥಿತಿ ಬದಲಾವಣೆ: ಮೌಲಾನ ಖಲೀಲುರ್ರಹ್ಮಾನ್

Update: 2018-12-04 16:50 GMT

ಬೆಂಗಳೂರು, ಡಿ.4: ದೇಶದಲ್ಲಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಹಾಗೂ ದಲಿತ, ತುಳಿತಕ್ಕೊಳಗಾದ ವರ್ಗಗಳ ಐಕ್ಯತೆಯಿಂದ ಮಾತ್ರ ರಾಜಕೀಯ ಹಾಗೂ ಸಾಮಾಜಿಕ ಪರಿಸ್ಥಿತಿಯನ್ನು ಬದಲಾಯಿಸಲು ಸಾಧ್ಯ ಎಂದು ಮುಂಬೈನ ರಹ್ಮಾನ್ ಫೌಂಡೇಷನ್ ಮುಖ್ಯಸ್ಥ ಹಝ್ರತ್ ಮೌಲಾನ ಖಲೀಲುರ್ರಹ್ಮಾನ್ ಸಜಾದ್ ನೊಮಾನಿ ತಿಳಿಸಿದರು.

ನಗರದ ಅರಮನೆ ಮೈದಾನದಲ್ಲಿರುವ ಟೆನ್ನಿಸ್ ಪೆವಿಲಿಯನ್‌ನಲ್ಲಿ ರಾಜ್ಯದ ಉಲಮಾಗಳ ಒಕ್ಕೂಟ ಆಯೋಜಿಸಿದ್ದ ಸಮಾರಂಭದಲ್ಲಿ ‘ದೇಶದಲ್ಲಿ ಪ್ರಸ್ತುತ ಪರಿಸ್ಥಿತಿ ಹಾಗೂ ನಮ್ಮ ಜವಾಬ್ದಾರಿಗಳು’ ಕುರಿತು ಅವರು ಉಪನ್ಯಾಸ ನೀಡಿದರು.

ದೇಶದಲ್ಲಿ ಯುವಕರು, ಮಹಿಳೆಯರು, ಕಾರ್ಮಿಕರು, ರೈತರು, ದಲಿತರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಎದುರಿಸುತ್ತಿರುವ ನೈಜ ಸಮಸ್ಯೆಗಳನ್ನು ಮರೆಮಾಚಿ ಧಾರ್ಮಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಜನರನ್ನು ದಿಕ್ಕು ತಪ್ಪಿಸಲಾಗುತ್ತಿದೆ ಎಂದು ಅವರು ಹೇಳಿದರು.

ಅಹಿಂದ ವರ್ಗಗಳು ದೇಶದಲ್ಲಿ ಶೇ.85ರಷ್ಟು ಜನರಿದ್ದಾರೆ. ನಾವು ಈ ದೇಶದ ಬಹುಸಂಖ್ಯಾತ ವರ್ಗವಾಗಿದ್ದೇವೆ. ಆದರೂ, ಬ್ರಾಹ್ಮಣಶಾಹಿಯ ಷಡ್ಯಂತ್ರದಿಂದಾಗಿ ನಾವು ಪರಸ್ಪರ ಅಪನಂಬಿಕೆಗಳಿಗೆ ಬಲಿಯಾಗಿ, ನಮ್ಮ ಶಕ್ತಿಯನ್ನು ನಾವೇ ಕ್ಷೀಣಿಸಿಕೊಳ್ಳುತ್ತಿದ್ದೇವೆ ಎಂದು ಸಜ್ಜಾದ್ ನೊಮಾನಿ ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯವು ಒಂದು ಚದುರಂಗದಾಟವಿದ್ದಂತೆ. ಇಲ್ಲಿ ತಾಳ್ಮೆ ಹಾಗೂ ವಿವೇಚನೆಯ ಅಗತ್ಯವಿದೆ. ಆದರೆ, ನಾವು ಯಾವುದೇ ಘಟನಾವಳಿಗಳು ಸಂಭವಿಸುತ್ತಿದ್ದಂತೆ ಅದರ ಹಿಂದಿನ ಷಡ್ಯಂತ್ರವನ್ನು ಅರ್ಥ ಮಾಡಿಕೊಳ್ಳದೇ ಭಾವನಾತ್ಮಕವಾಗಿ ಪ್ರತಿಕ್ರಿಯಿಸುವ ಮೂಲಕ ನಷ್ಟ ಅನುಭವಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.

ಸಂಘಪರಿವಾರ ಹಾಗೂ ಬಿಜೆಪಿಯಿಂದ ನಾವು ಏನು ನಿರೀಕ್ಷೆ ಮಾಡಲು ಸಾಧ್ಯ. ಅವರು ತಮ್ಮ ಸಿದ್ಧಾಂತದ ಪ್ರಕಾರ ತಮ್ಮ ಕಾರ್ಯಸೂಚಿಯನ್ನು ಅನುಷ್ಠಾನ ಗೊಳಿಸುವಲ್ಲಿ ಮಗ್ನರಾಗಿದ್ದಾರೆ. ಆದರೆ, ನಾವು ಕೇವಲ ಅವರನ್ನು ದೂಷಿಸುವುದರಲ್ಲೆ ಕಾಲಹರಣ ಮಾಡುತ್ತಿದ್ದೇವೆ ಎಂದು ಸಜ್ಜಾದ್ ನೊಮಾನಿ ಬೇಸರ ವ್ಯಕ್ತಪಡಿಸಿದರು.

ಜನರನ್ನು ಮೂಲ ವಿಷಯಗಳಿಂದ ವಿಮುಖರನ್ನಾಗಿಸುವಲ್ಲಿ ಬ್ರಾಹ್ಮಣಶಾಹಿ ಆಲೋಚನೆ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಆದರೆ, ನಾವು ಕಳೆದ 70 ವರ್ಷಗಳಿಂದಲೂ ಅವರ ಷಡ್ಯಂತ್ರಗಳನ್ನು ಅರ್ಥ ಮಾಡಿಕೊಳ್ಳದೆ ಬಲಿಪಶುಗಳಾಗುತ್ತಿದ್ದೇವೆ. ಅಹಿಂದ ವರ್ಗಗಳನ್ನು ಒಗ್ಗೂಡಿಸುವಲ್ಲಿ ನಾವು ಮುನ್ನಡೆಯಬೇಕಿದೆ ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದ ಸಂಚಾಲಕ ಮಾಜಿ ಸಚಿವ ಆರ್.ರೋಶನ್‌ ಬೇಗ್ ಸ್ವಾಗತ ಭಾಷಣ ಮಾಡಿದರು. ಮದ್ರಸಾ ಇಸ್ಲಾಹುಲ್ ಬನಾತ್‌ನ ಮುಖ್ಯಸ್ಥ ಮೌಲಾನ ಸಯ್ಯದ್ ಶಬ್ಬೀರ್‌ ಅಹ್ಮದ್ ನದ್ವಿ ಪ್ರಾಸ್ತಾವಿಕ ನುಡಿಗಳನ್ನಾಡಿದರೆ, ಬಿಜಾಪುರದ ಮೌಲಾನ ಸಯ್ಯದ್ ತನ್ವೀರ್ ಪೀರಾಂ ಹಾಶ್ಮಿ ವಂದನಾರ್ಪಣೆ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News