×
Ad

ಹಝ್ರತ್ ಅತಾವುಲ್ಲಾ ಶಾ ದರ್ಗಾ ಆಸ್ತಿಯ ಖಾತೆ ಸಿದ್ಧ: ಮುಹಮ್ಮದ್ ಉಬೇದುಲ್ಲಾ ಶರೀಫ್

Update: 2018-12-04 22:25 IST

ಬೆಂಗಳೂರು, ಡಿ.4: ಹಝ್ರತ್ ಅತಾವುಲ್ಲಾ ಶಾ, ನಬೀ ಶಾ ದರ್ಗಾಗೆ ಸೇರಿದ 10 ಎಕರೆ 33 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಖಾತೆಯನ್ನು ಮಾಡಿಸಲಾಗಿದೆ ಎಂದು ದರ್ಗಾ ಸಮಿತಿಯ ಅಧ್ಯಕ್ಷ ಮುಹಮ್ಮದ್ ಉಬೇದುಲ್ಲಾ ಶರೀಫ್ ತಿಳಿಸಿದರು.

ಮಂಗಳವಾರ ನಗರದ ಸಿದ್ದಯ್ಯ ರಸ್ತೆಯಲ್ಲಿರುವ ಹಝ್ರತ್ ಅತಾವುಲ್ಲಾ ಶಾ, ನಬೀ ಶಾ ದರ್ಗಾ ಸಮಿತಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹೈದರ್‌ ಅಲಿ ತಮ್ಮ ಆಡಳಿತಾವಧಿಯಲ್ಲಿ 33 ಎಕರೆ ಜಮೀನನ್ನು ಈ ದರ್ಗಾಕ್ಕೆ ನೀಡಿದ್ದರು. ಆನಂತರ, ಮೈಸೂರು ಮಹಾರಾಜರು ಈ ಭೂಮಿಯ ದಾಖಲೆಗಳನ್ನು ದರ್ಗಾ ಹೆಸರಿನಲ್ಲೆ ಮುಂದುವರೆಸಿದರು ಎಂದರು.

ಬ್ರಿಟಿಷ್ ಸರಕಾರದ ಅವಧಿಯಲ್ಲಿ ಈ ಆಸ್ತಿಗಳನ್ನು ಮುಸ್ಲಿಮ್ ಮುಜರಾಯಿ ವಕ್ಫ್ ಎಂದು ಘೋಷಿಸಿ, ಮುಜರಾಯಿ ಇಲಾಖೆಯ ಅಧೀನಕ್ಕೆ ಒಳಪಡಿಸಲಾಗಿತ್ತು. 1974ರ ಫೆ.7ರಂದು ಈ ಆಸ್ತಿಗಳನ್ನು ಮುಜರಾಯಿ ಇಲಾಖೆಯಿಂದ ವಕ್ಫ್ ಬೋರ್ಡ್‌ಗೆ ವರ್ಗಾವಣೆಗೊಳಿಸಲಾಗಿತ್ತು ಎಂದು ಅವರು ಹೇಳಿದರು. ಈ ದರ್ಗಾಗೆ ಸೇರಿದ 33 ಎಕರೆ ಜಮೀನಿನ ಪೈಕಿ ವಿವಿಧ ಸರ್ವೆ ನಂಬರ್‌ಗಳಲ್ಲಿನ ಜಮೀನನ್ನು ಬಿಬಿಎಂಪಿ ರಸ್ತೆ ನಿರ್ಮಾಣ, ವಿಲ್ಸನ್‌ ಗಾರ್ಡನ್‌ನ ಸ್ಮಶಾನ, ಲಾಲ್‌ಬಾಗ್ ವಿಸ್ತರಣೆಗೆ ಸರಕಾರ ವಶಪಡಿಸಿಕೊಂಡಿತ್ತು ಎಂದು ಉಬೇದುಲ್ಲಾ ಶರೀಫ್ ಹೇಳಿದರು.

ಸಿದ್ಧಾಪುರದ ಸರ್ವೆ ನಂ.1ರಲ್ಲಿ 10 ಎಕರೆ ಭೂಮಿ ಇತ್ತು. ಅದನ್ನು ಸರಕಾರ ವಶಪಡಿಸಿಕೊಂಡಿದೆ. ಅಣ್ಣೀಪುರ ಸರ್ವೆ ನಂ.1 ಹಾಗೂ 18, ಮಾವಳ್ಳಿ ಸರ್ವೆ ನಂ.28, ದೊಡ್ಡಬೈಲಖಾನೆಯಲ್ಲಿ 3 ಎಕರೆಗಿಂತ ಹೆಚ್ಚಿನ ಭೂಮಿ, ಸರ್ವೆ ನಂ.14ರಲ್ಲಿ 30 ಸಾವಿರ ಚದರ ಅಡಿ ಭೂಮಿ ದರ್ಗಾ ಸಮಿತಿಯ ಅಧೀನದಲ್ಲಿದೆ ಎಂದು ಅವರು ತಿಳಿಸಿದರು.

ಅಣ್ಣೀಪುರದ ಸರ್ವೆ 1ರಲ್ಲಿ 16 ಎಕರೆ ಭೂಮಿಯಿದೆ. ಅದರಲ್ಲಿ 6 ಎಕರೆ 29 ಗುಂಟೆ ಜಮೀನು ಅಲ್ ಅಮೀನ್ ಎಜುಕೇಷನಲ್ ಸೊಸೈಟಿಗೆ ನೀಡಲಾಗಿದೆ. ಉಳಿದ ಭೂಮಿಯಲ್ಲಿ ಎರಡು ಖಬರಸ್ಥಾನ್, ಈದ್ಗಾ, ಮಸೀದಿ ಹಾಗೂ ಹಝ್ರತ್ ಅತಾವುಲ್ಲಾ ಶಾ, ನಬಿ ಶಾ ದರ್ಗಾ ಇದೆ. ಇದರ ಜೊತೆಗೆ, ಸಿದ್ದಯ್ಯರಸ್ತೆಯಲ್ಲಿರುವ 340 ವಾಣಿಜ್ಯ ಮಳಿಗೆಗಳು, ಬಡೇ ಮಕಾನ್‌ನಲ್ಲಿ ಸುಮಾರು 400 ಮನೆಗಳಿವೆ ಎಂದು ಅವರು ಹೇಳಿದರು.

ಆದರೆ, ದುರಾದೃಷ್ಟವಶಾತ್ ಬಿಬಿಎಂಪಿಯಲ್ಲಿ ಈ ಆಸ್ತಿಗೆ ಸಂಬಂಧಿಸಿದ ಖಾತೆಯನ್ನು ಮಾಡಿಸಿರಲಿಲ್ಲ. 2016ರಲ್ಲಿ ನಮ್ಮ ಸಮಿತಿ ರಚನೆಯಾದ ನಂತರ ಖಾತೆ ಮಾಡಿಸುವ ಪ್ರಯತ್ನ ಆರಂಭಿಸಲಾಯಿತು. 2016ರ ಜೂ.15ರಂದು ನಾವು ಖಾತೆಗಾಗಿ ಅರ್ಜಿ ಸಲ್ಲಿಸಿದೆವು. 2018ನೆ ಸಾಲಿನ ಅ.22ರಂದು ಅಣ್ಣೀಪುರ ಸರ್ವೇ ನಂ.1 ಹಾಗೂ ಮಾವಳ್ಳಿಯ ಸರ್ವೆ ನಂ.28ರಲ್ಲಿನ 10 ಎಕರೆ 33 ಗುಂಟೆ ಜಮೀನಿನ ಖಾತೆ ನಮ್ಮ ಕೈ ಸೇರಿದೆ ಎಂದು ಅವರು ಹೇಳಿದರು.

ವಕ್ಫ್ ಸಚಿವ ಝಮೀರ್‌ ಅಹ್ಮದ್‌ ಖಾನ್, ಮೇಯರ್ ಆಗಿದ್ದ ಕೆ.ಸಂಪತ್‌ ರಾಜ್ ಹಾಗೂ ಬಿಬಿಎಂಪಿಯ ಎಲ್ಲ ವಲಯಗಳ ಜಂಟಿ ಆಯುಕ್ತರೊಂದಿಗೆ ಎರಡು ಸಭೆ ನಡೆಸಿ, ವಕ್ಫ್ ಆಸ್ತಿಗಳ ಖಾತೆಗಾಗಿ ಸಲ್ಲಿಸಿರುವ ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸಲು ಸೂಚನೆ ನೀಡಿದ್ದರು. ಅಲ್ಲದೆ, ಬೆಂಗಳೂರು ನಗರ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಸಯ್ಯದ್ ಶುಜಾವುದ್ದೀನ್ ಈ ಬಗ್ಗೆ ಸಾಕಷ್ಟು ಶ್ರಮವಹಿಸಿದ್ದರು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ದರ್ಗಾ ಆಸ್ತಿಗೆ 2012 ರಿಂದ 2019ರವರೆಗೆ 1,82,18,555 ರೂ.ಗಳ ತೆರಿಗೆ ಪಾವತಿ ಮಾಡಬೇಕಿದೆ. ಅಲ್ಲದೆ, ವಾರ್ಷಿಕ ತೆರಿಗೆ 30 ಲಕ್ಷ ರೂ.ನಿಗದಿ ಮಾಡಲಾಗಿದೆ. ನಮ್ಮ ವಾರ್ಷಿಕ ಆದಾಯವೇ 30 ಲಕ್ಷ ರೂ.ಇದೆ. ಇದರಲ್ಲಿ, ಮಸೀದಿ, ದರ್ಗಾದ ನಿರ್ವಹಣೆಗೆ 15 ಲಕ್ಷ ರೂ.ಖರ್ಚಾಗುತ್ತದೆ ಎಂದು ಅವರು ಹೇಳಿದರು.

ಬಿಬಿಎಂಪಿಗೆ ಪಾವತಿಸಬೇಕಿರುವ ತೆರಿಗೆ ಸಂಬಂಧ ಏನು ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ವಕ್ಫ್ ಬೋರ್ಡ್‌ಗೆ ಪತ್ರ ಬರೆದು ಸಲಹೆ ಕೇಳಲಾಗಿದೆ. ಈ ಭಾಗದಲ್ಲಿರುವ ವಾಣಿಜ್ಯಪ್ರದೇಶದ ಅಭಿವೃದ್ಧಿಗೆ ಜನ ಸಹಮತ ವ್ಯಕ್ತಪಡಿಸಿದ್ದಾರೆ. ದಾನಿಗಳು, ಸರಕಾರದ ನೆರವಿನೊಂದಿಗೆ ಅಭಿವೃದ್ಧಿ ಕೆಲಸ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News