ಅಲ್ಪಸಂಖ್ಯಾತ ಚಾಲಕರಿಗೆ ಟ್ಯಾಕ್ಸಿ- ಗೂಡ್ಸ್ ವಾಹನ ಭಾಗ್ಯ

Update: 2018-12-05 14:04 GMT

ಬೆಂಗಳೂರು, ಡಿ.5: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ 167 ಅಲ್ಪಸಂಖ್ಯಾತ ಫಲಾನುಭವಿಗಳಿಗೆ ಟ್ಯಾಕ್ಸಿ ಹಾಗೂ ಗೂಡ್ಸ್ ವಾಹನಗಳನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿತರಿಸಿದರು.

ಬುಧವಾರ ವಿಧಾನಸೌಧದ ಮುಂಭಾಗ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಫಲಾನುಭವಿಗಳ ವಾಹನಗಳಿಗೆ ಹಸಿರು ನಿಶಾನೆ ತೋರಿದ ಅವರು, ನಿರುದ್ಯೋಗಿ ಅಲ್ಪಸಂಖ್ಯಾತ ಯುವಕರು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು.

ವಾಹನಗಳ ವಿತರಣಾ ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಹಾಗೂ ಆಹಾರ ಸಚಿವ ಝಮೀರ್ ಅಹ್ಮದ್ ಖಾನ್, ಶಾಸಕ ಎನ್.ಎ.ಹಾರಿಸ್, ವಿಧಾನಪರಿಷತ್ ಸದಸ್ಯ ನಸೀರ್ ಅಹ್ಮದ್, ರಿಝ್ವಾನ್ ಅರ್ಶದ್ ಹಾಗೂ ಉರ್ದು ಅಕಾಡೆಮಿಯ ಅಧ್ಯಕ್ಷೆ ಮುಬೀನ್ ಮುನಾವರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

3 ಲಕ್ಷ ರೂ.ಸಹಾಯಧನ: ಸದರಿ ಯೋಜನೆಯಡಿ ಅಲ್ಪಸಂಖ್ಯಾತ ಫಲಾನುಭವಿಗಳು ಟ್ಯಾಕ್ಸಿ ಹಾಗೂ ಗೂಡ್ಸ್ ವಾಹನವನ್ನು ಖರೀದಿಸಲು ಪ್ರತಿ ಅರ್ಜಿದಾರರಿಗೆ 3ಲಕ್ಷ ರೂ. ಸಹಾಯಧನ ನೀಡಲಾಗುತ್ತದೆ. ಬ್ಯಾಂಕ್ ಸಾಲದ ಮೂಲಕ ಅರ್ಜಿದಾರರು ಈ ಸೌಲಭ್ಯವನ್ನು ಪಡೆಯಬಹುದಾಗಿದೆ.

ಅರ್ಹತೆಗಳು: ಅರ್ಜಿದಾರರು ಮತೀಯ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದು, ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ಕೌಟುಂಬಿಕ ವಾರ್ಷಿಕ ಆದಾಯ 4.50ಲಕ್ಷ ರೂ. ಮಿತಿಯಲ್ಲಿರಬೇಕು. ಫಲಾನುಭವಿಗಳು 18ರಿಂದ 45ವರ್ಷಗಳ ವಯೋಮಿತಿಯಲ್ಲಿರಬೇಕು.

ಅರ್ಜಿದಾರರು ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿಯನ್ನು ಹೊಂದಿರಬೇಕು. ಅರ್ಜಿದಾರರ ಕುಟುಂಬದ ಯಾವುದೆ ಸದಸ್ಯರು ರಾಜ್ಯ, ಕೇಂದ್ರ ಸರಕಾರದ ಉದ್ಯೋಗಿಯಾಗಿರಬಾರದು. ಹಾಗೂ ಆರ್‌ಟಿಒಯಿಂದ ನೀಡಲ್ಪಟ್ಟ ಚಾಲನಾ ಪರವಾನಿಗೆ ಮತ್ತು ಬ್ಯಾಡ್ಜನ್ನು ಹೊಂದಿರಬೇಕಾದದ್ದು ಕಡ್ಡಾಯ.

ನಾನು ಕಳೆದ 10-15ವರ್ಷಗಳಿಂದ ಇತರರ ಬಳಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದೆ. ಆಗ ನನಗೆ ಬರುತ್ತಿದ್ದ ಸಂಬಳ ಮನೆಯ ಖರ್ಚಿಗೆ ಸಾಕಾಗುತ್ತಿರಲಿಲ್ಲ. ಹೀಗಾಗಿ ಸ್ವಂತ ಕಾರನ್ನು ಹೊಂದಬೇಕೆಂದು ಕನಸು ಕಂಡಿದ್ದೆ. ಆ ನನ್ನ ಕನಸನ್ನು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನನಸು ಮಾಡಿದೆ. ನಿಗಮ ನೀಡಿದ 3ಲಕ್ಷ ರೂ. ಸಹಾಯ ಧನದಿಂದ ಸ್ವಂತ ಕಾರನ್ನು ಕೊಂಡು, ಸ್ವಾಭಿಮಾನದ ಬದುಕನ್ನು ರೂಪಿಸಿಕೊಂಡಿದ್ದೇನೆ.

-ವಿಲಿಯಂ ಮೋಹನ್, ಫಲಾನುಭವಿ ರಾಣಿ ಬೆನ್ನೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News