ಜ.18 ರಿಂದ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ
Update: 2018-12-05 21:56 IST
ಬೆಂಗಳೂರು, ಡಿ.5: ಪ್ರಸಕ್ತ ಸಾಲಿನ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನವನ್ನು ಜ.18 ರಿಂದ 27 ರವರೆಗೂ ಲಾಲ್‌ಬಾಗ್‌ನಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಲಾಲ್‌ಬಾಗ್‌ನಲ್ಲಿರುವ ಡಾ.ಎಂ.ಎಚ್.ಮರೀಗೌಡ ಸಭಾಂಗಣದಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ದಿನಾಂಕವನ್ನು ಆಯ್ಕೆ ಮಾಡಲಾಗಿದೆ. ಆದರೆ, ಹೂವಿನ ಪ್ರತಿಕೃತಿಗಳು ಹೇಗಿರಬೇಕು ಎಂಬುದರ ಕುರಿತು ಇನ್ನೂ ಅಂತಿಮಗೊಂಡಿಲ್ಲ. ಮುಂದಿನ ಸಭೆಯಲ್ಲಿ ಅದನ್ನು ಆಯ್ಕೆ ಮಾಡಲಾಗುತ್ತದೆ. ಜತೆಗೆ ಖರ್ಚು ವೆಚ್ಚಗಳನ್ನೂ ಚರ್ಚಿಸಿ ತೀರ್ಮಾನ ಮಾಡಲಾಗುತ್ತದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಜನವರಿ 18ರಿಂದ ನಡೆಯಲಿರುವ ಫಲಪುಷ್ಪ ಪ್ರದರ್ಶನಕೆ ಈಗಾಗಲೇ ಹೂವಿನ ಗಿಡಗಳನ್ನು ಬೆಳೆಸುವುದು, ಸ್ವಚ್ಛತೆ, ಉದ್ಯಾನದ ಪರಿಶೀಲನೆ ಮತ್ತಿತರ ಚಟುವಟಿಕೆಗಳು ಬಿರುಸುಗೊಂಡಿವೆ. ಪ್ರದರ್ಶನದ ಸಂದರ್ಭದಲ್ಲಿ ಲಕ್ಷಾಂತರ ಮಂದಿ ಭೇಟಿ ನೀಡುವುದರಿಂದ ಯಾವುದೇ ಅವಘಡಗಳು ನಡೆಯದಂತೆ ಕ್ರಮ ಕೈಗೊಳ್ಳಲು ಇಲಾಖೆ ಮುಂದಾಗಿದೆ.