ಬದಲಿ ನಿವೇಶನ ಹಂಚಿಕೆಗೆ ಬಿಡಿಎ ನಿರ್ಧಾರ
ಬೆಂಗಳೂರು, ಡಿ.5: ನಗರದ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಬಫರ್ ವಲಯದಲ್ಲಿ ಹಂಚಿಕೆಯಾಗಿದ್ದ ನಿವೇಶನಗಳಿಗೆ ಪ್ರತಿಯಾಗಿ ಬದಲಿ ನಿವೇಶನ ಗಳನ್ನು ನೀಡಲಾಗುತ್ತದೆ ಎಂದು ಬಿಡಿಎ ತಿಳಿಸಿದೆ.
ಎರಡನೇ ಹಂತದಲ್ಲಿ ಹಂಚಿಕೆ ಮಾಡಿದ್ದ ನಿವೇಶನಗಳಲ್ಲಿ ಕೆಲವು ಸ್ಮಶಾನ, ರಾಜಕಾಲುವೆ ಹಾಗೂ ನ್ಯಾಯಾಲಯದಲ್ಲಿ ಇರುವುದರಿಂದ ಹಂಚಿಕೆದಾರರು ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದರು. ಈ ನಿಟ್ಟಿನಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದ ಅಧಿಕಾರಿಗಳು ನಕ್ಷೆ ಮೂಲಕ ಖಾತರಿಪಡಿಸಿದ್ದು, ಸಮಸ್ಯೆಯುಳ್ಳ ನಿವೇಶನಗಳಿಗೆ ಬದಲಿ ನಿವೇಶನ ಹಂಚಿಕೆ ಮಾಡಲಾಗುವುದು. ಉಳಿದವರಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭೀಮನಕುಪ್ಪೆ ಗ್ರಾಮದ ಸರ್ವೆ ನಂಬರ್ 149ರಲ್ಲಿ ಬತ್ತಿದ ಕೆರೆ ಇದ್ದು, 75 ಮೀ. ಬಫರ್ ವಲಯ ಪರಿಗಣಿಸಿ 26 ನಿವೇಶನದಾರರಿಗೆ ಬದಲಿ ವ್ಯವಸ್ಥೆ ಮಾಡಲಾಗಿದೆ. ರಾಜಕಾಲುವೆ ಬಳಿ ಹಂಚಿಕೆಯಾಗಿದ್ದ ನಾಲ್ವರಿಗೆ ಬೇರೆಡೆ ನಿವೇಶನ ನೀಡಲಾಗಿದೆ. ತಗ್ಗು ಪ್ರದೇಶ ಹಾಗೂ ಹೈಟೆನ್ಶನ್ ಮಾರ್ಗದ ಬಳಿ ಸುರಕ್ಷಿತ ಸ್ಥಳ ಹೊರತುಪಡಿಸಿ ನಿವೇಶನ ನೀಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಂಚನಪುರ ಗ್ರಾಮದಲ್ಲಿ ಕೋರ್ಟ್ ಮೆಟ್ಟಿಲು ಹತ್ತಿದ್ದ ಪ್ರಕರಣವನ್ನು ಭೂಮಾಲಕರು ವಾಪಸ್ ಪಡೆದಿದ್ದಾರೆ. ಕೌಟುಂಬಿಕ ಕಾರಣಕ್ಕೆ ಕೆಲ ಮೂಲ ದಾವೆ ಇದ್ದರೂ, ಅವರ ಸಹಮತ ಪಡೆದೇ ನಿವೇಶನ ರಚಿಸಿ ಹಂಚಿಕೆ ಮಾಡಲಾಗಿದೆ. ಕನ್ನಹಳ್ಳಿ ಹಾಗೂ ಕೊಮ್ಮಘಟ್ಟ ಗ್ರಾಮದ ತಲಾ ಒಂದು ಸರ್ವೆ ನಂಬರ್‌ಗೆ ಸೇರಿದ ಜಮೀನು ಭೂಸ್ವಾಧೀನವಾಗಿದ್ದು, ಇಂಜಿನಿಯರ್ ವಿಭಾಗಕ್ಕೆ ಹಸ್ತಾಂತರ ಆಗಬೇಕಿದೆ. ಹೀಗಾಗಿ ಇಲ್ಲಿ ನಿರ್ಮಿಸಿರುವ ನಿವೇಶನಗಳಿಂದ ಹಂಚಿಕೆದಾರರಿಗೆ ತೊಂದರೆ ಉಂಟಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.