ಬೆಂಗಳೂರಿನಲ್ಲಿ ಕಟ್ಟಡ ಕಾರ್ಮಿಕರಿಗೆ ಬಾಂಗ್ಲಾ ವಲಸಿಗರ ಪಟ್ಟ !
#ಆಧಾರ್ ಕಾರ್ಡ್, ವೋಟರ್ ಐಡಿ ಹೊಂದಿರುವ ಕಾರ್ಮಿಕರು
ಬೆಂಗಳೂರು, ಡಿ.5: ಹತ್ತು-ಹದಿನೈದು ವರ್ಷಗಳಿಂದ ರಾಜಧಾನಿ ಬೆಂಗಳೂರಿನಲ್ಲಿಯೇ ನೆಲೆ ಕಂಡುಕೊಂಡಿರುವ ಬಡ ಕಟ್ಟಡ ಕಾರ್ಮಿಕರನ್ನು ಇದೀಗ ಬಾಂಗ್ಲಾ ದೇಶದ ನಿವಾಸಿಗಳೆಂದು ಬಿಂಬಿಸಿ, ಒಕ್ಕಲೆಬ್ಬಿಸುವ ಹುನ್ನಾರ ನಡೆಯುತ್ತಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.
ನಗರದ ಮಹದೇವಪುರದ ತೂಬರಹಳ್ಳಿ ಹಾಗೂ ಕುಂದಲಹಳ್ಳಿ ವ್ಯಾಪ್ತಿಯಲ್ಲಿರುವ ನೂರಾರು ಕಟ್ಟಡ ಕಾರ್ಮಿಕರನ್ನು ಬಾಂಗ್ಲಾದೇಶದ ನಾಗರಿಕರು ಎಂದೆಲ್ಲಾ ಆರೋಪಿಸಿ ಒಕ್ಕಲೆಬ್ಬಿಸಿ ಅಲ್ಲಿನ ಭೂಮಿ ವಶಕ್ಕೆ ಪಡೆಯಲು ಕೆಲವರು ಹುನ್ನಾರ ನಡೆಸುತ್ತಿದ್ದಾರೆ. ಅದರ ಮೊದಲ ಹಂತವಾಗಿ, ಇಲ್ಲಿನ ಹತ್ತಾರು ಗುಡಿಸಲುಗಳಿಗೆ ಮೂರು ದಿನಗಳಿಂದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ತೊಂದರೆ ನೀಡಲಾಗುತ್ತಿದೆ ಎನ್ನುತ್ತಾರೆ ಸಂತ್ರಸ್ಥರು.
ಪ್ರತಿಭಟನೆ: ಬಡ ಕಟ್ಟಡ ಕಾರ್ಮಿಕರಿಗೆ ಮೂಲಸೌಕರ್ಯಗಳ ಜೊತೆಗೆ ಅವರ ಮಕ್ಕಳಿಗೆ ಶೈಕ್ಷಣಿಕ ಸವಲತ್ತುಗಳನ್ನು ಒದಗಿಸಬೇಕೆಂದು ಯುವ ಕರ್ನಾಟಕ ಸಂಘಟನೆ ಸದಸ್ಯರು, ನಟ, ಹೋರಾಟಗಾರ ಚೇತನ್ ಸೇರಿದಂತೆ ಪ್ರಮುಖರು ಪ್ರತಿಭಟನೆ ನಡೆಸಿ, ಇಲ್ಲಿನ ಗುಡಿಸಲು(ಶೆಡ್) ತೆರವುಗೊಳಿಸದಂತೆ ಬಿಬಿಎಂಪಿ ಮೇಯರ್ ಗಂಗಾಂಬಿಕೆ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಎಲ್ಲವೂ ಇದೆ: ಇಲ್ಲಿ ನೆಲೆಸಿರುವ ಪ್ರತಿಯೊಬ್ಬರ ಬಳಿ ಮತದಾನ ಗುರುತಿನ ಚೀಟಿ ಮಾತ್ರವಲ್ಲದೆ, ಆಧಾರ್ ಕಾರ್ಡ್ ಇದೆ. ಹತ್ತಾರು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕನ್ನಡ ಮಾತನಾಡುವ ಉತ್ತರ ಕರ್ನಾಟಕದ ಮಂದಿಯೂ ಇದ್ದಾರೆ. ಆದರೆ, ಕೆಲವರು ಉದ್ದೇಶಪೂರ್ವಕವಾಗಿ ಬಾಂಗ್ಲರು ಎಂದು ಬಿಂಬಿಸುತ್ತಿದ್ದಾರೆ ಎಂದು ಚೇತನ್ ಹೇಳಿದರು.
ಸೌಲಭ್ಯ ಬೇಕು: ತೂಬರಹಳ್ಳಿ ಹಾಗೂ ಕುಂದಲಹಳ್ಳಿ ಗುಡಿಸಲು ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು, ವಿದ್ಯುತ್, ರಸ್ತೆ ಬೇಕಾಗಿದೆ. ಆದರೆ, ಈ ಬೇಡಿಕೆಗಳನ್ನು ಈಡೇರಿಸುವ ಬದಲು, ಅಲ್ಲಿನ ನಿವಾಸಿಗಳನ್ನೇ ಒಕ್ಕಲೆಬ್ಬಿಸಿ ಕೈತೊಳೆದುಕೊಳ್ಳುವ ಹುನ್ನಾರವನ್ನು ಕೆಲವರು ಮಾಡುತ್ತಿದ್ದಾರೆ ಎಂದು ಸ್ಥಳೀಯರ ಮುಖಂಡ ರಾಮು ರಾವ್ ಆರೋಪಿಸಿದರು.
ಸಾಬೀತುಪಡಿಸಲಿ
ತೂಬರಹಳ್ಳಿ-ಕುಂದಲಹಳ್ಳಿ ವ್ಯಾಪ್ತಿಯ ಶೆಡ್‌ಗಳಲ್ಲಿ ವಾಸುತ್ತಿರುವವರು ಭಾರತೀಯರೇ ಹೊರತು, ವಿದೇಶಿಗರಲ್ಲ. ಹತ್ತಾರು ವರ್ಷ ಇಲ್ಲಿಯೇ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಇಂತಹ ವರ್ಗವನ್ನು ಬಾಂಗ್ಲರು ಎಂದು ಹೇಳುತ್ತಿರುವವರು ಮೊದಲು ದಾಖಲೆಗಳನ್ನು ಬಿಡುಗಡೆ ಮಾಡಿ ಸಾಬೀತುಪಡಿಸಲಿ.
-ಅನಂತ್‌ನಾಯ್ಕ, ವಕೀಲ
ಮಾನವೀಯ ಹೋರಾಟ
ಈ ಶೆಡ್‌ಗಳಲ್ಲಿ ಮಕ್ಕಳು, ಗರ್ಭಿಣಿ ಮಹಿಳೆಯರು ನೆಲೆಸಿದ್ದಾರೆ. ಇವರನ್ನು ಉದ್ದೇಶಪೂರ್ವಕವಾಗಿ ಒಕ್ಕಲೆಬ್ಬಿಸುವ ಶಕ್ತಿಗಳ ವಿರುದ್ಧ ಮಾನವೀಯತೆ ದೃಷ್ಟಿಯಿಂದ ಹೋರಾಟ ನಡೆಸಲಾಗುತ್ತಿದೆ. ಆದರೆ, ಬಾಂಗ್ಲಾ ವಲಸಿಗರಿಗೆ ಬೆಂಬಲ ಎಂದೆಲ್ಲಾ ಕೆಲವರು ಬಿಂಬಿಸುತ್ತಿದ್ದು, ಇವರ ವಿರುದ್ಧ ಕಾನೂನಿನ ಮೂಲಕ ಉತ್ತರ ನೀಡಲಾಗುವುದು ಎಂದು ನಟ ಚೇತನ್ ಎಚ್ಚರಿಕೆ ನೀಡಿದರು.
‘ಕೇಂದ್ರವೇ ತನಿಖೆ ನಡೆಸಲಿ’
ನಾವು ಭಾರತೀಯರು ಎನ್ನಲು ಎಲ್ಲ ಅಧಿಕೃತ ದಾಖಲೆಗಳಿವೆ. ವಿದೇಶಿಗರು ಎನ್ನುವವರು ಕೇಂದ್ರ ಸರಕಾರದ ತನಿಖಾ ಸಂಸ್ಥೆಗಳಿಂದಲೇ ತನಿಖೆ ನಡೆಸಿ ಸಾಬೀತು ಪಡಿಸಲಿ.
-ಸುದೇಶ್, ತೂಬರಹಳ್ಳಿ ನಿವಾಸಿ