ಅಡಿಲೇಡ್ ಟೆಸ್ಟ್: ಸಂಕಷ್ಟದಲ್ಲಿ ಭಾರತ

Update: 2018-12-06 03:44 GMT

ಅಡಿಲೇಡ್, ಡಿ.6: ಆಸ್ಟ್ರೇಲಿಯಾದಲ್ಲಿ ಮೊದಲ ಟೆಸ್ಟ್ ಸರಣಿ ಜಯದ ಕನಸು ಕಾಣುತ್ತಿರುವ ಭಾರತ ಕ್ರಿಕೆಟ್ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಗಿದ್ದು, ಮೊದಲ ಟೆಸ್ಟ್‌ನಲ್ಲಿ ಭಾರತ ಪ್ರಮುಖ ನಾಲ್ಕು ಮಂದಿ ಆಟಗಾರರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಭೋಜನ ವಿರಾಮದ ವೇಳೆಗೆ 27 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 56 ರನ್ ಗಳಿಸಿತ್ತು. 11 ರನ್ ಗಳಿಸಿದ ಚೇತೇಶ್ವರ ಪೂಜಾರ ಮತ್ತು 15 ರನ್ ಗಳಿಸಿದ ರೋಹಿತ್ ಶರ್ಮಾ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಎರಡನೇ ಓವರ್‌ನ ಕೊನೆಯ ಎಸೆತದಲ್ಲೇ ಭರವಸೆಯ ಆಟಗಾರ ಕೆ.ಎಲ್.ರಾಹುಲ್ (2) ಥರ್ಡ್‌ಸ್ಲಿಪ್‌ನಲ್ಲಿ ಅರೋನ್ ಫಿಂಚ್‌ಗೆ ಕ್ಯಾಚ್ ನೀಡಿ ಪೆವಿಲಿಯನ್ ಹಾದಿ ಹಿಡಿದಲ್ಲಿಂದ ಭಾರತ ಚೇತರಿಸಿಕೊಳ್ಳಲಿಲ್ಲ. ಹೇಸಲ್‌ವುಡ್ ಆಸ್ಟ್ರೇಲಿಯಾಗೆ ಮೊದಲ ವಿಕೆಟ್ ಗಳಿಸಿಕೊಟ್ಟರು.

ಏಳನೇ ಓವರ್‌ನಲ್ಲಿ ಮೈಕೆಲ್ ಸ್ಟಾರ್ಕ್ ಭಾರತಕ್ಕೆ ಮತ್ತೊಂದು ಆಘಾತ ನೀಡಿದರು. ಮತ್ತೊಬ್ಬ ಆರಂಭಿಕ ಆಟಗಾರ ಮುರಳಿ ವಿಜಯ್ (11), ಕೀಪರ್ ಟಿಪ್ ಪೈನ್ ಅವರಿಗೆ ಕ್ಯಾಚ್ ನೀಡಿದಾಗ ಭಾರತ 15 ರನ್ನುಗಳಿಗೆ ಎರಡು ವಿಕೆಟ್ ಕಳೆದುಕೊಂಡಿತು.

ಪ್ಯಾಟ್ ಕಮಿನ್ಸ್ ತಮ್ಮ ಮೊದಲ ಓವರ್‌ನಲ್ಲೇ ಭಾರತದ ನಾಯಕ ವಿರಾಟ್ (3) ಕೊಹ್ಲಿಯವರನ್ನು ಬಲಿ ಪಡೆದು ಭಾರತಕ್ಕೆ ಮತ್ತೊಮ್ಮೆ ಏಟು ನಿಡಿದರು. ಉಸ್ಮಾನ್ ಖ್ವಾಜಾ ಗಲ್ಲಿಯಲ್ಲಿ ಪಡೆದ ಅದ್ಭುತ ಕ್ಯಾಚ್‌ನಿಂದ ಭಾರತ 19 ರನ್ನುಗಳಿಗೆ 3ನೇ ವಿಕೆಟ್ ಕಳೆದುಕೊಂಡಿತು. ಅಜಿಂಕ್ಯ ರಹಾನೆ (13) ಕೂಡಾ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಎರಡನೇ ಸ್ಲಿಪ್‌ನಲ್ಲಿ ಪೀಟರ್ ಹ್ಯಾಂಡ್ಸ್‌ಕೋಮ್‌ಗೆ ಕ್ಯಾಚ್ ನೀಡಿದ ರಹಾನೆ, ಹ್ಯಾಸೆಲ್‌ವುಡ್‌ಗೆ ಎರಡನೇ ಬಲಿಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News