ರಾಮಮಂದಿರ ಅಲ್ಲಿ ಇತ್ತು ಎನ್ನುವುದಕ್ಕೆ ಸಾಕ್ಷಿಯೇ ಇಲ್ಲ

Update: 2018-12-06 05:38 GMT

 ಜಾತ್ಯತೀತ ನಿಲುವುಳ್ಳ ಪ್ರಗತಿಪರ ಚಳವಳಿಯಲ್ಲಿ ತೊಡಗಿಸಿಕೊಂಡಿರುವ ಸಾಮಾಜಿಕ ಹೋರಾಟಗಾರ ಡಾ. ಎಂ.ದಿಲೀಪ್ ನರಸಯ್ಯ ಅವರು ಪಿಎಚ್‌ಡಿ ಪದವೀಧರ. ಮಾಧ್ಯಮ ಮತ್ತು ಸಂವಹನ ವಿಭಾಗದ ವಿದ್ಯಾರ್ಥಿಯಾಗಿ ಪ್ರಸಕ್ತ ಮಾಧ್ಯಮ ಸಂಶೋಧಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ಬಾಬರಿ ಮಸೀದಿ ಧ್ವಂಸ ಘಟನೆಯನ್ನು ಖೇದದಿಂದ ನೆನೆಯುತ್ತಾರೆ.

ಬಾಬರಿ ಮಸೀದಿ ಧ್ವಂಸ ಘಟನೆ ನಡೆದಾಗ ನನಗೆ 8 ವರ್ಷ ವಯಸ್ಸು. ಆ ಸಮಯದಲ್ಲಿ ಗಲಾಟೆ ನಡೆಯುತ್ತಿದೆ ಎಂಬ ಮಾತುಗಳನ್ನು ನಾನು ಕೇಳುತ್ತಿದ್ದೆ. ಆಗ ನನಗೆ ಕೋಮು ಸಂಘರ್ಷ ಎಂದರೆ ಏನೆಂದು ಗೊತ್ತಿರಲಿಲ್ಲ. ನಾನು ಬೆಳೆದ ಜಾಗದಲ್ಲಿ ಯಾವುದೇ ಜಾತಿ, ಧರ್ಮ ಭೇದ ಎಂಬುದಿರಲಿಲ್ಲ. ಆದರೆ ನಾನು ಹೈಸ್ಕೂಲ್ ಓದುವ ಸಮಯದಲ್ಲಿ ಎನ್‌ಸಿಸಿ ಕೆಡೆಟ್ ಆಗಿದ್ದೆ. ಎನ್‌ಸಿಸಿ ಅಂಗವಾಗಿ ನಮಗೆ ಮೈಸೂರಿನ ವಸ್ತುಪ್ರದರ್ಶನ ಆವರಣದಲ್ಲಿ 10 ದಿನಗಳ ಕ್ಯಾಂಪ್ ಆಯೋಜನೆ ಮಾಡಿದ್ದರು. ಅಲ್ಲಿ ಕೆಲವು ಗುಂಪು ಸಂಘಪರಿವಾರದ ಪರ ಇದ್ದು ಅವರಲ್ಲಿ ಕೆಲವರು ಬಾಬರಿ ಮಸೀದಿ ಧ್ವಂಸದ ಕುರಿತು ಹಿಂದುತ್ವದ ಪಾಠ ಹೇಳುತ್ತಿದ್ದರು. ಕೋಮು ಸಂಘರ್ಷದ ಭಾಷಣಗಳು ಮೊದಲ ಬಾರಿಗೆ ನನ್ನ ಕಿವಿಗೆ ಬಿದ್ದದ್ದೂ ಅಲ್ಲಿಯೇ. ಬಾಬಾಸಾಹೇಬರು ಡಿ.6ರಂದು ನಿಧನರಾದರು. ಆ ದಿನವನ್ನು ದಲಿತರು, ಅಲ್ಪಸಂಖ್ಯಾತರು ಒಟ್ಟು ಸೇರಿ ಪರಿನಿಬ್ಭಾಣ ದಿನವನ್ನಾಗಿ ಆಚರಿಸಲು ಪ್ರಾರಂಭಿಸಿದರು. ಅವರ ಒಗ್ಗಟ್ಟನ್ನು ಒಡೆಯಲು ಆರೆಸ್ಸೆಸ್, ವಿಎಚ್‌ಪಿ, ಶ್ರೀರಾಮಸೇನೆ, ಹಿಂದೂ ಮಹಾಸಭಾ ಸೇರಿದಂತೆ ಬಲಪಂಥೀಯ ಸಂಘಟನೆಗಳು ಕೆಲಸ ಮಾಡುತ್ತಿವೆ.

ಬಾಬರಿ ಮಸೀದಿ ಪುನರ್ ನಿರ್ಮಾಣ ಖಂಡಿತ ಅಗತ್ಯವಿದೆ. ಭಾರತ ಯಾವುದೇ ಒಂದು ಧರ್ಮದ ರಾಷ್ಟ್ರ ಅಲ್ಲ. ಒಕ್ಕೂಟದ ವ್ಯವಸ್ಥೆಯಲ್ಲಿ ಆಯಾ ಧರ್ಮಕ್ಕೆ ತಕ್ಕಂತೆ ಮಸೀದಿ, ಮಂದಿರ ಕಟ್ಟುವುದು ಸಹಜ. ಯಾವ ಧರ್ಮ ಅಲ್ಲಿ ನೆಲೆಸಿತ್ತು ಎಂಬುದನ್ನು ಮುಂದಿನ ಪೀಳಿಗೆಗೆ ತಿಳಿಯಬಯಸಬೇಗಿರುವುದರಿಂದ ಇದರ ಅಗತ್ಯವಿದೆ.

ರಾಮಮಂದಿರ ಅಲ್ಲಿ ಇತ್ತು ಎಂಬುದಕ್ಕೆ ಸಾಕ್ಷಿಯೇ ಇಲ್ಲ. ಆದರೂ ಕೆಲವು ಸಂಘಟನೆಗಳು ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿವೆ. 1992ರಿಂದ 2018 ರವರೆಗೆ ರಾಮಮಂದಿರ ವಿಚಾರವನ್ನು ಜೀವಂತವಾಗಿ ಇಡಲಾಗಿದೆ. ಅವರಿಗೆ ಧಾರ್ಮಿಕವಾಗಿ ರಾಮಮಂದಿರ ಬೇಕಿಲ್ಲ. ಕೇವಲ ರಾಜಕೀಯ ಹಿತಕ್ಕಾಗಿ ಬೇಕಾಗಿದೆ.

ರಾಮನ ಮೇಲಿನ ಪ್ರೀತಿ ಯಾವುದೇ ಬಲಪಂಥೀಯ ಸಂಘಟನೆಗಳಿಗಿಲ್ಲ. 1992ರಲ್ಲಿ ಪ್ರಾರಂಭವಾದ ಚಳವಳಿ 1998ರಲ್ಲಿ ವಾಜಪೇಯಿ ಸರಕಾರವನ್ನು ಆಧಿಕಾರಕ್ಕೆ ತರುವಲ್ಲಿ ಸಫಲವಾಯಿತು. ಆ ಸಂದರ್ಭದಲ್ಲಿ ರಾಮಮಂದಿರ ನಿರ್ಮಾಣದ ಪ್ರಶ್ನೆಯೇ ಎದ್ದಿರಲಿಲ್ಲ. 2002ರ ನಂತರ ರಾಮ ಮಂದಿರ ನಿರ್ಮಾಣದ ಘೋಷಣೆಯನ್ನು ವಿಎಚ್‌ಪಿ ಸಂಘಟನೆ ಘೋಷಿಸಿತು.

 ಕೇಂದ್ರದಲ್ಲಿ ಆಡಳಿತಕ್ಕೆ ಬಂದ ಬಿಜೆಪಿ ಸರಕಾರ ವರ್ಷಕ್ಕೆ 2ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿತ್ತು. ಆದರೆ ಐದು ಜನಕ್ಕೂ ಉದ್ಯೋಗ ನೀಡಲಿಲ್ಲ. ನಮಗೆ ಬೇಕಿರುವುದು ಗುಣಮಟ್ಟದ ಶಿಕ್ಷಣ. ಆಹಾರ ಭದ್ರತೆ ವುತ್ತು ಜೀವನ ನಿರ್ವಹಣೆಗೆ ಆದ್ಯತೆ.

 ಸಂವಿಧಾನದ ಸರ್ವಶ್ರೇಷ್ಠ ಸಂಸ್ಥೆಯಾದ ಸುಪ್ರೀಂ ಕೋರ್ಟ್ ಯಾವ ಧರ್ಮದ ಹೆಸರಿನಲ್ಲೂ ರಾಜಕೀಯ ಮಾಡಬಾರದು ಎಂಬ ತೀರ್ಪನ್ನು ನೀಡಿದೆ. ಅದರಂತೆ ನಾವು ನಡೆದುಕೊಳ್ಳಬೇಕಿದೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿರುವ ಸಂವಿಧಾನದ ಆಶಯದಂತೆ ನಾವೆಲ್ಲರೂ ನಡೆದುಕೊಳ್ಳಬೇಕಿದ್ದು, ಎಲ್ಲಾ ಧರ್ಮದವರು ಅಣ್ಣ ತಮ್ಮಂದಿರಂತೆ ಬದುಕಬೇಕು.

Writer - ಡಾ. ಎಂ.ದಿಲೀಪ್ ನರಸಯ್ಯ

contributor

Editor - ಡಾ. ಎಂ.ದಿಲೀಪ್ ನರಸಯ್ಯ

contributor

Similar News