ಡಿ.22 ರಂದು ಸಂಪುಟ ವಿಸ್ತರಣೆ ಅನುಮಾನ: ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ

Update: 2018-12-06 15:16 GMT

ಬೆಂಗಳೂರು, ಡಿ.6: ರಾಜ್ಯದ ಸಚಿವ ಸಂಪುಟ ವಿಸ್ತರಣೆಯು ಡಿ.22ರಂದು ನಡೆಯುವುದು ಅನುಮಾನ. ಶೂನ್ಯಮಾಸದಲ್ಲಿ ಯಾರೂ ಕೂಡ ಶುಭ ಕಾರ್ಯಗಳನ್ನು ಮಾಡುವುದಿಲ್ಲ ಎಂದು ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಚಿವ ಸ್ಥಾನಕ್ಕಾಗಿ ಯಾವ ಬಳಿಯೂ ಹೋಗಿ ಲಾಬಿ ಮಾಡಿಲ್ಲ. ನನಗೆ ಸಚಿವ ಸ್ಥಾನ ಯಾಕೆ ಕೊಟ್ಟಿಲ್ಲ ಎಂದು ಕೇಳಿಲ್ಲ. ಅದರ ಅಗತ್ಯವು ತನಗಿಲ್ಲ ಎಂದರು.

ಸಚಿವ ಸಂಪುಟ ವಿಸ್ತರಣೆಯೊಂದಿಗೆ, ನಿಗಮ, ಮಂಡಳಿಗಳಿಗೆ ಸದಸ್ಯರನ್ನಾಗಿ ಕಾರ್ಯಕರ್ತರನ್ನು ನೇಮಕ ಮಾಡಬೇಕಿದೆ. ಆಗ ಮಾತ್ರ ಸರಕಾರ ಇನ್ನೂ ಚೆನ್ನಾಗಿ ನಡೆದುಕೊಂಡು ಹೋಗುತ್ತದೆ. ಸಂಪುಟ ವಿಸ್ತರಣೆಗೆ ಈಗಾಗಲೆ ಹಲವು ಬಾರಿ ದಿನಾಂಕಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು.

ಸಂಪುಟ ವಿಸ್ತರಣೆಯನ್ನು ಮಾಡುವುದಿದ್ದರೆ ಮಾಡುತ್ತೇವೆ ಎನ್ನಬೇಕು. ಇಲ್ಲದಿದ್ದರೆ ಇಲ್ಲ ಎನ್ನಬೇಕು. ಅದರಲ್ಲಿ ಮುಚ್ಚುಮರೆ ಏನಿದೆ. ಬಾಕಿಯಿರುವ ಖಾತೆಗಳನ್ನು ಈಗಿರುವ ಸಚಿವರಿಗೆ ಹಂಚಿಕೆ ಮಾಡಿಬಿಡಲಿ. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಬೇಕು ಎಂದು ರಾಮಲಿಂಗಾರೆಡ್ಡಿ ಆಗ್ರಹಿಸಿದರು.

ನನ್ನ ಅಭಿಪ್ರಾಯದಲ್ಲಿ ಲೋಕಸಭೆ ಚುನಾವಣೆವರೆಗೆ ಸಚಿವ ಸಂಪುಟ ವಿಸ್ತರಣೆಯಾಗುವುದಿಲ್ಲ. ಒಂದು ವೇಳೆ ಹೈಕಮಾಂಡ್ ಒಪ್ಪಿದರೆ ಆಗಲೂಬಹುದು. ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ನಾನು ಹೇಳುವುದು ಇಷ್ಟೇ. ನಿಮಗೆ ಅದೃಷ್ಟವಿದ್ದರೆ, ಮನೆ ಬಾಗಿಲಿಗೆ ಸಚಿವ ಸ್ಥಾನ ಹುಡುಕಿಕೊಂಡು ಬರುತ್ತದೆ ಎಂದು ಅವರು ಹೇಳಿದರು. ನಿಮ್ಮ ನಿಮ್ಮ ಕ್ಷೇತ್ರದಲ್ಲಿದ್ದುಕೊಂಡು ಜನರಿಗಾಗಿ ಕೆಲಸ ಮಾಡಿಕೊಂಡು ಇರಿ. ಹೈಕಮಾಂಡ್ ಅಗತ್ಯವಿದ್ದಲ್ಲಿ ಕರೆದು ಸಚಿವ ಸ್ಥಾನ ನೀಡುತ್ತದೆ. ಹೊಸದಿಲ್ಲಿಗೆ ಹೋಗಿ ವರಿಷ್ಠರ ಮೇಲೆ ಒತ್ತಡ ಹೇರುವ ಕೆಲಸ ಮಾಡುವುದು ಬೇಡ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News