ಹೊರ ರಾಜ್ಯದ ವಿದ್ಯಾರ್ಥಿಗಳ ಪುಂಡಾಟಕ್ಕೆ ಹೈಕೋರ್ಟ್ ಅಸಮಾಧಾನ

Update: 2018-12-06 17:33 GMT

ಬೆಂಗಳೂರು, ಡಿ.6: ನಗರದಲ್ಲಿರುವ ಹೊರ ರಾಜ್ಯದ ವಿದ್ಯಾರ್ಥಿಗಳ ಪುಂಡಾಟಕ್ಕೆ ಹೈಕೋರ್ಟ್ ಆತಂಕ ವ್ಯಕ್ತಪಡಿಸಿದ್ದು, ಶಿಕ್ಷಣ ಸಂಸ್ಥೆಗಳಲ್ಲಿ ಸಾಮಾಜಿಕ ಹೊಣೆಗಾರಿಕೆ ಎಂಬುದು ಇಲ್ಲವಾಗಿದೆ. ಅಲ್ಲದೆ, ಲಾಭದ ಆಸೆಗಾಗಿ ಇಂತಹ ಕಿಡಿಗೇಡಿಗಳನ್ನು ಸುಮ್ಮನೆ ಬಿಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ನಗರದ ಡೀಮ್ಡ್ ವಿಶ್ವ ವಿದ್ಯಾಲಯದ ಕಾನೂನು ವಿದ್ಯಾರ್ಥಿನಿಯೊಬ್ಬರು ಹೊರ ರಾಜ್ಯದಿಂದ ಬಂದ ತನ್ನ ಸಹಪಾಠಿಗಳು ಮಾನಸಿಕ ದೌರ್ಜನ್ಯ ನೀಡುತ್ತಿದ್ದಾರೆಂದು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು.

ಅರ್ಜಿದಾರರ ಪರ ವಾದಿಸಿದ ವಕೀಲೆ ಜಯ್ನ ಕೊಠಾರಿ ಅವರು, ಹೊಸದಿಲ್ಲಿಯಿಂದ ಬಂದು ಇಲ್ಲಿ ಕಲಿಯುತ್ತಿರುವ ಇಬ್ಬರು ಸಹಪಾಠಿಗಳು, ವಿದ್ಯಾರ್ಥಿನಿ ಮೊಬೈಲ್‌ಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೆ, ವಿದ್ಯಾರ್ಥಿಗಳು ಮೋಜಿನ ಜೀವನ ಮಾಡುತ್ತಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಡೀಮ್ಡ್ ಯೂನಿವರ್ಸಿಟಿ ಪರ ವಕೀಲರಿಗೆ ತೀವ್ರ ತರಾಟೆಗೆ ತಗೆದುಕೊಂಡರು. ಕಾಲೇಜು ಕ್ಯಾಂಪಸ್‌ಗಳಲ್ಲಿನ ಈ ರೀತಿಯ ಚಟುವಟಿಕೆಗಳನ್ನು ನಿಯಂತ್ರಣ ಮಾಡಬೇಕು. 19ರ ಹರೆಯದಲ್ಲಿರುವ ಇಂತಹ ವಿದ್ಯಾರ್ಥಿಗಳು ಮುಂದೆ ಸಮಾಜ ಘಾತುಕ ಶಕ್ತಿಗಳಾಗುತ್ತಾರೆ. ರಾಜ್ಯಕ್ಕೆ, ದೇಶಕ್ಕೆ ಕೆಟ್ಟ ಹೆಸರು ತರುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಅವರ ಅಪ್ಪಅಮ್ಮ ಕಷ್ಟಪಟ್ಟು ದುಡಿದು ಹಣ ಕಳುಹಿಸಿ ಓದಿಸುತ್ತಾರೆ. ಆದರೆ ಅವರು ಇಲ್ಲಿ ಬಂದು ಮೋಜಿನ ಜೀವನ ಮಾಡುತ್ತಿದ್ದಾರೆ. ಇಂತಹವರನ್ನೆಲ್ಲಾ ಒದ್ದು ಆಚೆಗೆ ಹಾಕಬೇಕು. ಇಂತಹ ವಿದ್ಯಾರ್ಥಿಗಳನ್ನು ಮಿಲಿಟರಿ ಶಿಸ್ತಿನಲ್ಲಿ ಸದೆ ಬಡಿದರೆ ಬುದ್ಧಿ ಬರುತ್ತದೆ ಎಂದು ನ್ಯಾಯಾಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಡೀಮ್ಡ್ ಪರ ವಾದಿಸಿದ ವಕೀಲರು, ಅಕಸ್ಮಾತ್ ಆಗಿ ಈ ರೀತಿಯ ಸಂದೇಶಗಳು ಮೊಬೈಲ್‌ನಲ್ಲಿ ರವಾನೆಯಾಗಿವೆ. ಅರ್ಜಿದಾರರು ಮುಗ್ಧರು ಅದಕ್ಕೆ ಅವರು ನೊಂದುಕೊಂಡಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು. ಆಗ ಮತ್ತೆ ಗರಂ ಆದ ನ್ಯಾಯಮೂರ್ತಿಗಳು, ನೀವು ರಾಜ್ಯ ವಕೀಲರ ಪರಿಷತ್ ಮಾಜಿ ಅಧ್ಯಕ್ಷರು ಎಂಬುದನ್ನು ಮರೆಯಬೇಡಿ. ಕಾನೂನು ಕಾಲೇಜಿನಲ್ಲಿ ಈ ರೀತಿಯ ಚಟುವಟಿಕೆ ನಡೆಯುತ್ತಿವೆ ಎಂದಾದರೆ ನೀವೇನು ಮಾಡುತ್ತಿದ್ದೀರಿ. ನಿಮಗೆ ಬರೀ ಪರಿಷತ್ ಚುನಾವಣೆಯದ್ದೇ ಧ್ಯಾನ ಎಂದು ತರಾಟೆ ತಗೆದುಕೊಂಡರು.

ಬಳಿಕ ಈ ಪ್ರಕರಣ ಅರ್ಜಿದಾರರು ಮತ್ತು ಪ್ರತಿವಾದಿಗಳ ಎರಡು ಕಡೆಯ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ. ಅರ್ಜಿದಾರರ ಪರ ವಕೀಲೆ ಜಯ್ನೆ ಕೊಠಾರಿ ಮತ್ತು ನೀವು ಕುಳಿತು ಮಾತುಕತೆ ನಡೆಸಿ. ಸಮಸ್ಯೆಗೆ ಪರಿಹಾರ ಕಂಡುಕೊಂಡು ಕೋರ್ಟ್‌ಗೆ ತಿಳಿಸಿ ಎಂದು ಸೂಚಿಸಿ, ಪ್ರಕರಣದ ವಿಚಾರಣೆಯನ್ನು ಡಿ.14ಕ್ಕೆ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News