ಸರಕಾರ ರಕ್ಷಣೆಗೆ ‘ಆಪರೇಷನ್ ಹಸ್ತ’ ನಡೆಯಬಹುದು: ಬೇಳೂರು ಗೋಪಾಲಕೃಷ್ಣ

Update: 2018-12-06 17:39 GMT

ಬೆಂಗಳೂರು, ಡಿ.6: ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರವನ್ನು ಅಸ್ಥಿರಗೊಳಿಸಲು ಪ್ರತಿಪಕ್ಷ ಬಿಜೆಪಿ ಆಪರೇಷನ್ ಕಮಲ ನಡೆಸಲು ಮುಂದಾದರೆ, ಸರಕಾರವನ್ನು ರಕ್ಷಿಸಲು ಆಪರೇಷನ್ ಹಸ್ತವು ನಡೆಯಬಹುದು ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಯಾವ ಶಾಸಕರು ರಾಜೀನಾಮೆ ನೀಡಲು ಮುಂದಾಗುವುದಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಮತ್ತೆ ಚುನಾವಣೆ ಎದುರಿಸುವ ಶಕ್ತಿ ಯಾವ ಶಾಸಕರಿಗೂ ಇಲ್ಲ ಎಂದು ಅವರು ಹೇಳಿದರು.

ಇತ್ತೀಚೆಗೆ ನಡೆದ ಲೋಕಸಭೆ ಹಾಗೂ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಮುಖಭಂಗ ಅನುಭವಿಸಿದೆ. ಆಪರೇಷನ್ ಕಮಲದ ಕಿಂಗ್‌ಪಿನ್‌ಗಳು ದುಬೈ ಸೇರಿಕೊಂಡಿದ್ದು, ಅಲ್ಲಿಂದಲೇ ಕಾರ್ಯತಂತ್ರ ರೂಪಿಸುತ್ತಿರಬಹುದು ಎಂದು ಬೇಳೂರು ಗೋಪಾಲಕೃಷ್ಣ ತಿಳಿಸಿದರು.

ಈ ಹಿಂದೆ ಎರಡು ಬಾರಿ ಸರಕಾರ ರಚಿಸಲು ಮುಂದಾಗಿ ಕೈ ಸುಟ್ಟುಕೊಂಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಯಾಕೋ ಸುಮ್ಮನೆ ಕೂರುತ್ತಿಲ್ಲ. ಮೊದಲು ಚಿಕಿತ್ಸೆಗಾಗಿ ಜಿಂದಾಲ್‌ಗೆ ಹೋಗುತ್ತಿದ್ದರು. ಆದರೆ, ಈಗ ಕೇರಳಕ್ಕೆ ಹೋಗಿರುವುದು ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News