ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ

Update: 2018-12-06 17:48 GMT

ಬೆಂಗಳೂರು, ಡಿ. 6: ‘ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕೆಂದು ಕೆಲ ಶಾಸಕರು ತಮ್ಮ ಅಭಿಪ್ರಾಯ ವ್ಯಕ್ತಿಪಡಿಸಿದ್ದಾರೆ. ಆದರೆ, ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ಮುಂದಿನ ಚುನಾವಣೆಯಲ್ಲಿ ಜನತೆ ಆಶೀರ್ವಾದ ಮಾಡಿದರೆ ನೋಡೋಣ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಾಸಕರು ತಮ್ಮ ಅಭಿಪ್ರಾಯ ವ್ಯಕ್ತಿಪಡಿಸಲು ಅವರು ಸ್ವತಂತ್ರರು. ಅದೇ ರೀತಿ ಕಂಪ್ಲಿ ಕ್ಷೇತ್ರದ ಶಾಸಕ ಗಣೇಶ್ ತಮ್ಮ ಹೇಳಿಕೆ ನೀಡಿದ್ದಾರೆ ಎಂದು ವಿವರಣೆ ನೀಡಿದರು.

ಚಳಿಗಾಲದ ಅಧಿವೇಶನದ ಬಳಿಕ ಡಿ.22ಕ್ಕೆ ಸಂಪುಟ ವಿಸ್ತರಣೆಯಾಗಲಿದೆ. ಡಿ.21ರ ಸಂಜೆ ನಾನು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಮುಖಂಡರೆಲ್ಲ ಹೊಸದಿಲ್ಲಿಗೆ ಹೋಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರೊಂದಿಗೆ ಚರ್ಚಿಸಿ, ಯಾರೆಲ್ಲ ಮಂತ್ರಿಯಾಗಲಿದ್ದಾರೆಂದು ಅಂದೇ ಘೋಷಣೆ ಮಾಡಲಾಗುವುದು ಎಂದರು.

ನಾವು ಯಾರೂ ಜೈಲಿಗೆ ಹೋಗಿಲ್ಲ: ತಮ್ಮ ಅವಧಿಯಲ್ಲಿ 35 ಸಾವಿರ ಕೋಟಿ ರೂ.ಹಗರಣ ನಡೆದಿದೆ ಎಂಬ ಬಿಜೆಪಿ ಆರೋಪಕ್ಕೆ ತಾನು ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ, ನಮ್ಮ ಆಡಳಿತಾವಧಿಯಲ್ಲಿ ಯಾರೂ ಜೈಲಿಗೆ ಹೋಗಿಲ್ಲ. ನಾವು ಯಾವುದೇ ಅಕ್ರಮವನ್ನು ನಡೆಸಿಲ್ಲ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News