ಎಡಪಕ್ಷಗಳು, ಜಾತ್ಯತೀತ ಸಂಘಟನೆಗಳಿಂದ ಸಂವಿಧಾನ, ಜಾತ್ಯತೀತತೆ ಸಂರಕ್ಷಣೆಗಾಗಿ ಧರಣಿ

Update: 2018-12-06 18:17 GMT

ಬೆಂಗಳೂರು, ಡಿ.6: ಬಾಬರಿ ಮಸೀದಿ ಧ್ವಂಸಗೊಳಿಸಿದ ಕರಾಳ ದಿನ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಪರಿನಿರ್ವಾಣ ದಿನದ ಅಂಗವಾಗಿ ಎಡಪಕ್ಷಗಳು ಹಾಗೂ ಜಾತ್ಯತೀತ ಸಂಘಟನೆಗಳ ವತಿಯಿಂದ ಸಂವಿಧಾನ ಮತ್ತು ಜಾತ್ಯತೀತತೆ ಸಂರಕ್ಷಣೆಗಾಗಿ ಆಗ್ರಹಿಸಿ ಇಂದಿಲ್ಲಿ ಧರಣಿ ನಡೆಸಿದರು.

ನಗರದ ಪುರಭವನದ ಎದುರು ಸಿಪಿಎಂ, ಸಿಪಿಐ, ದಲಿತ ಸಂಘರ್ಷ ಸಮಿತಿ, ದಲಿತ ಹಕ್ಕುಗಳ ಸಮಿತಿ, ಟಿಪ್ಪು ಸುಲ್ತಾನ್ ಸಂಯುಕ್ತ ರಂಗ ಸೇರಿದಂತೆ ಹಲವು ಸಂಘಟನೆಗಳ ನಾಯಕತ್ವದಲ್ಲಿ ನೂರಾರು ಕಾರ್ಯಕರ್ತರು ಧರಣಿ ನಡೆಸಿ, ಅಂಬೇಡ್ಕರ್‌ರ ಪರಿನಿರ್ವಾಣ ದಿನದಂದೇ ರಾಜಕೀಯ ದುರುದ್ದೇಶದಿಂದ ಬಾಬರಿ ಮಸೀದಿ ಧ್ವಂಸ ಮಾಡಿದ್ದನ್ನು ಖಂಡಿಸಿ ಘೋಷಣೆಗಳು ಕೂಗಿದರು.

ಬಾಬರಿ ಮಸೀದಿ ಧ್ವಂಸಗೊಳಿಸಿ ಡಿ.6 ಕ್ಕೆ 26 ವರ್ಷಗಳಾಗುತ್ತಿದೆ. ಬಾಬರಿ ಮಸೀದಿ ವಿವಾದವು ನ್ಯಾಯಾಲಯದಲ್ಲಿರುವಾಗಲೇ ಮತ್ತೊಮ್ಮೆ ರಾಮಮಂದಿರ ನಿರ್ಮಾಣ ಮಾಡಬೇಕೆಂಬ ಕೂಗು ಕೇಳಿಬರುತ್ತಿದೆ. ಮಸೀದಿ-ಮಂದಿರಗಳ ಹೆಸರಿನಲ್ಲಿ ಬಿಜೆಪಿ ಮತ್ತು ಸಂಘಪರಿವಾರ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಅಧಿಕಾರಕ್ಕೇರುವ ಪ್ರಯತ್ನ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಕೇಂದ್ರ ಸಚಿವರು ಹಾಗೂ ಸಂಘಪರಿವಾರದ ಮುಖಂಡರೇ ಬಹಿರಂಗವಾಗಿ ಸಂವಿಧಾನವನ್ನು ಬದಲಿಸುತ್ತೇವೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಮತ್ತೊಂದು ಕಡೆ ದಲಿತ, ಪ್ರಗತಿಪರ, ಅಲ್ಪಸಂಖ್ಯಾತರು ಹಾಗೂ ಸಾಹಿತಿ, ಚಿಂತಕರ ಮೇಲೆ ದಾಳಿಗಳನ್ನು ಮಾಡಲಾಗುತ್ತಿದೆ. ಒಟ್ಟಾರೆಯಾಗಿ ಜಾತ್ಯತೀತತೆಯನ್ನು ನಾಶ ಮಾಡಲು ಮುಂದಾಗಿದ್ದಾರೆ ಎಂದು ಧರಣಿ ನಿರತರು ಆರೋಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಎಂ ಮುಖಂಡ ಸುರೇಂದ್ರರಾವ್, ಸ್ವಾತಂತ್ರ, ಸಮಾನತೆ, ಭ್ರಾತೃತ್ವ ಸಂವಿಧಾನದ ಮೂಲ ಆಶಯಗಳಾಗಿವೆ. ಆದರೆ, ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವವರು ಹಾಗೂ ಸಂಘಪರಿವಾರ ಸಂವಿಧಾನದ ಆಶಯಗಳನ್ನೇ ದಮನ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಮಠಗಳಲ್ಲಿ ಖಾದಿ ಧರಿಸಿಕೊಂಡು ಮುಖವಾಡ ಹಾಕಿಕೊಂಡಿರುವವರು ಎಲ್ಲರೂ ಸೇರಿ ಇದೀಗ ಸಂವಿಧಾನದ, ನ್ಯಾಯಾಂಗ ವಿರುದ್ಧವಾಗಿ ನಿಂತಿದ್ದಾರೆ. ಅದರ ಭಾಗವಾಗಿ ಇತ್ತೀಚಿಗೆ ಹಿಂದೂ ಸಂಘಟನೆಯೊಂದು ನಡೆಸಿದ ಧರ್ಮ ಸಂಸತ್‌ನೊಳಗೆ ಉಡುಪಿ ಮಠದ ಪೇಜಾವರ ಸ್ವಾಮಿಗಳು ನಾವು ಸಂವಿಧಾನಕ್ಕೆ, ಸುಪ್ರೀಂಕೋರ್ಟ್‌ಗೆ ಬದ್ಧರಲ್ಲ. ನಮ್ಮ ನಂಬಿಕೆಗೆ ಬದ್ಧರಾಗಿದ್ದು, ಅಯೋಧ್ಯೆಯಲ್ಲಿ ರಾಮಮಂದಿರವನ್ನು ಕಟ್ಟೇ ಕಟ್ಟುತ್ತೇವೆ ಎನ್ನುತ್ತಾರೆ. ಆ ಮೂಲಕ ನ್ಯಾಯಾಂಗದ ವಿರುದ್ಧ ನಡೆದುಕೊಳ್ಳುತ್ತಿದ್ದಾರೆ ಎಂದರು.

ಕಳೆದ ಎರಡು ತಿಂಗಳ ಹಿಂದೆ ದಿಲ್ಲಿಯ ಜಂತರ್ ಮಂತರ್‌ನಲ್ಲಿ ಸಂವಿಧಾನವನ್ನು ಸುಡುವ ಮೂಲಕ ಅಂಬೇಡ್ಕರ್‌ಗೆ ಧಿಕ್ಕಾರ, ಮನುಸ್ಕೃತಿಗೆ ಜಯವಾಗಲಿ ಎಂದು ಘೋಷಣೆ ಕೂಗಿದರು. ಆದರೆ, ಅವರ ವಿರುದ್ಧ ಸರಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದೀಗ ಒಂದು ಕಡೆ ಅಂಬೇಡ್ಕರ್‌ರನ್ನು ಆರಾಧಿಸುತ್ತಿದ್ದಾರೆ, ಮತ್ತೊಂದು ಕಡೆ ಸಂವಿಧಾನ ನಾಶ ಮಾಡಲು ಹೊರಟಿದ್ದಾರೆ. ಬಿಜೆಪಿ ಮತ್ತು ಸಂಘಪರಿವಾರದ ದ್ವಿಮುಖ ನೀತಿಯನ್ನು ಖಂಡಿಸಬೇಕು ಎಂದು ಹೇಳಿದರು. ಟಿಪ್ಪು ಸುಲ್ತಾನ್ ಸಂಯುಕ್ತ ರಂಗದ ಅಧ್ಯಕ್ಷ ಸರ್ದಾರ್ ಅಹಮದ್ ಖುರೇಷಿ ಮಾತನಾಡಿ, ಕೇಂದ್ರದಲ್ಲಿ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ನಂತರ ಜನರ ಬದುಕು ಅತ್ಯಂತ ದುಸ್ತರವಾಗಿದೆ. ಬೆಲೆ ಏರಿಕೆ ಮತ್ತು ಜನವಿರೋಧಿ ನೀತಿಗಳಿಂದ ದೇಶದ ಜನರು ಬೇಸತ್ತು ಹೋಗಿದ್ದಾರೆ ಎಂದು ಟೀಕಿಸಿದರು.

ದೇಶದಲ್ಲಿ ರೈತರು, ಕಾರ್ಮಿಕರು, ವಿದ್ಯಾರ್ಥಿ-ಯುವಜನರು, ಮಹಿಳೆಯರು ಕೇಂದ್ರ ಸರಕಾರ ವಿರುದ್ಧ ಇದೀಗ ಹೋರಾಟ ನಡೆಸುವ ಮೂಲಕ ಜನವಿರೋಧಿ ಸರಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮುಂದಿನ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಜನರ ಗಮನ ಬೇರೆಡೆ ಸೆಳೆಯಲು ಸಂಘಪರಿವಾರದ ಮೂಲಕ ರಾಮಮಂದಿರ ವಿವಾದವನ್ನು ಮುಂದಿಟ್ಟುಕೊಂಡಿದ್ದಾರೆ. ನಾಲ್ಕೂವರೆ ವರ್ಷದಲ್ಲಿ ಮಾಡದ ಸಾಧನೆ ಈಗ ಮಾಡುತ್ತಾರಾ ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಸಿಪಿಐನ ಜಿಲ್ಲಾ ಕಾರ್ಯದರ್ಶಿ ಬಾಬು, ಸಿಪಿಎಂ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಜನವಾದಿ ಮಹಿಳಾ ಸಂಘಟನೆಯ ಲಕ್ಷ್ಮಿ, ಗೌರಮ್ಮ, ದಲಿತ ಸಂಘಟನೆಯ ನಾಗರಾಜು, ರಾಜಶೇಖರಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News