ವಿದೇಶಗಳಲ್ಲಿ ಭಾರತೀಯ ವೈದ್ಯಕೀಯ ಪದ್ಧತಿಗೆ ಮನ್ನಣೆ: ಡಾ.ರಾಜೇಶ್ ಕೊಟೇಚಾ

Update: 2018-12-06 18:20 GMT

ಬೆಂಗಳೂರು, ಡಿ.6: ವಿದೇಶಗಳಲ್ಲಿ ಭಾರತೀಯ ವೈದ್ಯಕೀಯ ಪದ್ಧತಿಗೆ ಮನ್ನಣೆ ಸಿಗುತ್ತಿದ್ದು, ನಮ್ಮಲ್ಲಿನ ಸಾಂಪ್ರದಾಯಿಕ ಚಿಕಿತ್ಸೆ ಬಗ್ಗೆ ಅಧ್ಯಯನ ಮಾಡಲು ಸಂಶೋಧಕರು ಆಗಮಿಸುತ್ತಿದ್ದಾರೆ ಎಂದು ಕೇಂದ್ರ ಆಯುಷ್ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ರಾಜೇಶ್ ಕೊಟೇಚಾ ಅಭಿಪ್ರಾಯಪಟ್ಟಿದ್ದಾರೆ.

ಗುರುವಾರ ನಗರದ ಸೆಂಟ್ರಲ್ ಕಾಲೇಜಿನ ಕ್ರಿಕೆಟ್ ಮೈದಾನದಲ್ಲಿ ಕೇಂದ್ರ ಆಯುಷ್ ಇಲಾಖೆ ಹಾಗೂ ಎಬಿವಿಪಿ ಸಹಯೋಗದಲ್ಲಿ ತಾರುಣ್ಯ ಶಿಕ್ಷಣ ಸೇವಾ ಟ್ರಸ್ಟ್ ಹಮ್ಮಿಕೊಂಡಿದ್ದ, ನಾಲ್ಕು ದಿನಗಳ ‘ಜಿಜ್ಞಾಸಾ ರಾಷ್ಟ್ರೀಯ ಆರೋಗ್ಯ ಹಬ್ಬ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಆಯುರ್ವೇದ ಚಿಕಿತ್ಸೆಗೆ ಸಹ ಒಳ್ಳೆಯ ಕಾಲ ಬರುತ್ತಿದ್ದು, ಭವಿಷ್ಯದಲ್ಲಿ ಭಾರತೀಯ ಪಾರಂಪರಿಕ ಚಿಕಿತ್ಸಾ ವಿಧಾನಕ್ಕೆ ಎಲ್ಲಿಲ್ಲದ ಬೇಡಿಕೆ ಉಂಟಾಗುವುದರಲ್ಲಿ ಅನುಮಾನವಿಲ್ಲ. ಈಗಾಗಲೇ ಸಾವಯವ ಆಹಾರಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿದೆ. ಅಷ್ಟೇ ಅಲ್ಲ, ಇಕೋ ಟೂರಿಸ್‌ಂ ಕಡೆ ಯುವಜನತೆ ಮುಖ ಮಾಡುತ್ತಿದ್ದಾರೆ ಎಂದು ಹೇಳಿದರು.

ವೈಜ್ಞಾನಿಕ ಸಾಕ್ಷದ ಅಭಾವದಿಂದ ಆಯುರ್ವೇದ ಚಿಕಿತ್ಸಾ ಪದ್ಧತಿ ಮುನ್ನೆಲೆಗೆ ಬರಲಿಲ್ಲ. ಇದೀಗ ಈ ಕೊರತೆಯನ್ನು ದೂರ ಮಾಡುವ ಕಾಲ ಸನ್ನಿಹಿತವಾಗಿದೆ. ಆಯುರ್ವೇದ, ಹೋಮಿಯೋಪಥಿ, ಯುನಾನಿ, ಸಿದ್ಧ, ನಾಟಿ ಹಾಗೂ ಯೋಗ ಚಿಕಿತ್ಸೆಯಲ್ಲಿ ಪದವೀಧರರಿಗೆ ಅಗತ್ಯ ಕೌಶಲ ವೃದ್ಧಿಸುವ ಮೂಲಕ ಭಾರತೀಯ ಪಾರಂಪರಿಕ ಚಿಕಿತ್ಸಾ ಪದ್ಧತಿಗಳನ್ನು ಮುನ್ನೆಲೆಗೆ ತರಲಾಗುವುದು ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ಆಯುಷ್ ಕೌಶಲ್ಯ ನಿಗಮದಡಿ ಆಸಕ್ತರಿಗೆ ಅಗತ್ಯ ತರಬೇತಿ ನೀಡಲಾಗುವುದು. ಇನ್ನು ಆಯುರ್ವೇದ ತಜ್ಞ ವೈದ್ಯರು ಹಾಗೂ ಜನತೆಯ ನಡುವೆ ಅಂತರವಿರುವ ಪರಿಣಾಮ ಮೂರನೇ ವ್ಯಕ್ತಿ ಇದನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾನೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿ ದೇಶದ ಜನತೆಗೆ ಕೈಗೆಟಕುವ ದರದಲ್ಲಿ ಸಿಗುವಂತಾಗಬೇಕೆಂದು ಎಬಿವಿಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸುನೀಲ್ ಅಂಬೇಕರ್ ಆಶಯ ವ್ಯಕ್ತಪಡಿಸಿದರು. ಕರ್ನಾಟಕ ಆಯುಷ್ ಇಲಾಖೆ ನಿರ್ದೇಶಕಿ ಮೀನಾಕ್ಷಿ ನೇಗಿ, ಸಿಸಿಐಎಂ ಉಪಾಧ್ಯಕ್ಷ ಪ್ರೊ.ರಾಮಕೃಷ್ಣ, ಆಯುರ್ವೇದ ತಜ್ಞ ಡಾ.ಕಿಶೋರ್ ಕುಮಾರ್, ಶಿಕ್ಷಣತಜ್ಞ ಎಂ.ಕೆ.ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News